ಬೆಂಗಳೂರು: ಆಹಾರ ಸುರಕ್ಷತೆ ಮತ್ತು ಔಷಧ ನಿರ್ವಹಣೆ ಇಲಾಖೆಯ ಅಧಿಕಾರಿಗಳು ಕಲಬೆರಕೆ ಹಾಲಿನ ಕೇಂದ್ರಗಳನ್ನು ದಾಳಿ ನಡೆಸಿದ್ದಾರೆ.
ಇಲಾಖೆಯ ಆಯುಕ್ತ ಶ್ರೀನಿವಾಸ್ ಮಾರ್ಗದರ್ಶನದಲ್ಲಿ ಆಹಾರ ಸುರಕ್ಷತಾಧಿಕಾರಿಗಳ ತಂಡ ಕೋಲಾರದಲ್ಲಿ ಕಲಬೆರಕೆ ಕೇಂದ್ರಗಳ ಮೇಲೆ ಮಧ್ಯರಾತ್ರಿ ವಿಶೇಷ ಕಾರ್ಯಾಚರಣೆ ನಡೆಸಿ ಅಪಾರ ಪ್ರಮಾಣದ ಕಲಬೆರಕೆ ಹಾಲು ಮತ್ತು ರಾಸಾಯನಿಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಮೂಲಕ ರಾಜ್ಯದಾದ್ಯಂತ ಕಲಬೆರೆಕೆ ಹಾಲಿನ ದಂಧೆ ನಡೆಸುತ್ತಿರುವವರಿಗೆ ಇಲಾಖೆಯು ಕಠಿಣ ಸಂದೇಶ ರವಾನಿಸಿದೆ.
ಈ ಕುರಿತು ಪ್ರತಿಕ್ರಿಯಿಸಿದ ಆಹಾರ ಸುರಕ್ಷತಾ ಅಧಿಕಾರಿಗಳು, ಶಿಶು, ಮಕ್ಕಳು, ಗರ್ಭಿಣಿಯರು ಹಾಗೂ ಹಿರಿಯ ನಾಗರಿಕರು ಸೇರಿ ಎಲ್ಲ ವಯೋಮಾನವರು ಪ್ರತಿ ನಿತ್ಯ ಹಾಲು ಬಳಸುತ್ತಾರೆ. ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ಹಾಲು ದೊರೆಯುವಂತಾಗಬೇಕು. ಆದರೆ, ಹಣದ ಆಸೆಗಾಗಿ ಕೆಲವರು ಹಾಲಿನಲ್ಲಿ ಕಲಬೆರಕೆ ಮಾಡಿ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿರುವುದು ಪತ್ತೆಯಾಗಿದೆ. ಇದನ್ನು ತಡೆಗೆ ವಿಶೇಷ ಕಾರ್ಯಾಚರಣೆ ನಡೆಸಲಾಯಿತು ಎಂದರು.
ಯಾವುದೇ ಆಹಾರ ಪದಾರ್ಥಗಳನ್ನು ಕಲಬೆರೆಕೆ ಮಾಡುವುದು ಕಾನೂನು ಉಲ್ಲಂಘನೆಯಷ್ಟೇ ಅಲ್ಲ, ಮಾನವೀಯ ಮೌಲ್ಯಗಳಿಗೆ ವಿರುದ್ಧವಾದ ಗಂಭೀರ ಅಪರಾಧವಾಗಿದೆ.ಸಾರ್ವಜನಿಕರ ಜೀವದೊಂದಿಗೆ ಆಟವಾಡುವ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತಿದೆ.ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ಆಹಾರ ಸುರಕ್ಷತಾ ಅಧಿಕಾರಿಗಳ ಸಮನ್ವಯದಲ್ಲಿ ನಡೆದ ಈ ಕಾರ್ಯಾಚರಣೆ ಮಾದರಿಯಾಗಿದೆ ಎಂದು ಇಲಾಖೆ ಆಯುಕ್ತ ಶ್ರೀನಿವಾಸ್ ಶ್ಲಾಘಿಸಿದರು.
ನಮ್ಮ ಅಧಿಕಾರಿಗಳಿಂದ ನಿರಂತರವಾಗಿ ಇಂತಹ ದಾಳಿಗಳು ನಡೆಯಲಿವೆ. ಕಲಬೆರಕೆ ನಡೆಸುವವರ ಪರವಾನಗಿ ರದ್ದು, ಕ್ರಿಮಿನಲ್ ಪ್ರಕರಣ ದಾಖಲಿಸುವುದು. ಅಗತ್ಯವಿದ್ದಲ್ಲಿ ಕಠಿಣ ಶಿಕ್ಷೆ ವಿಧಿಸುವ ಕ್ರಮ ಅನುಸರಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.