ಆಹಾರ ಪರವಾನಗಿ ನೀಡುವ ಅಧಿಕಾರ ಬದಲಾವಣೆ  
ರಾಜ್ಯ

ಉದ್ದಿಮೆ ಪರವಾನಗಿ ನೀಡುವ ಅಧಿಕಾರ ಬದಲು:ಆಹಾರ ಸುರಕ್ಷತಾಧಿಕಾರಿಗಳು ಆಕ್ರೋಶ-Food safety officials outraged

ಬೆಂಗಳೂರು:ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಹೊರಡಿಸಿರುವ ಆದೇಶವು ಅಡ್ಡಿಯಾಗುವ ಆತಂಕ ವ್ಯಕ್ತವಾಗುತ್ತಿದೆ.
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯ ಕಲಂ 30(3) ಹಾಗೂ ಸಂಬಂಧಿತ ನಿಯಮಗಳ ಅಡಿಯಲ್ಲಿ ಆಹಾರ ಉದ್ಯಮಗಳಿಗೆ ಪರವಾನಗಿ ನೀಡುವ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಹೊರಡಿಸಿರುವ ಆದೇಶದಿಂದ ಆಹಾರ ಸುರಕ್ಷತಾ ವ್ಯವಸ್ಥೆಯಲ್ಲಿ ಗೊಂದಲ ಉಂಟಾಗುವ ಸಾಧ್ಯತೆ ಇದೆ.
ಕಾಯ್ದೆಯ ಮೂಲ ಉದ್ದೇಶ ಮತ್ತು ಸಾರ್ವಜನಿಕ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಜು.27ರಂದು ಇಲಾಖೆ, ಹೊರಡಿಸಿರುವ ಆದೇಶವನ್ನು ತಕ್ಷಣ ಹಿಂಪಡೆದು ಹಿಂದಿನ ಪರಿಣಾಮಕಾರಿ ವ್ಯವಸ್ಥೆಯನ್ನು ಮುಂದುವರಿಸಬೇಕು. ಅಧಿಕಾರಿಗಳ ಜತೆ ಸಮಾಲೋಚಿಸಿ ಕ್ಷೇತ್ರಮಟ್ಟದ ವಾಸ್ತವ ಸಮಸ್ಯೆಗಳನ್ನು ಪರಿಗಣಿಸಿ ಹೊಸ ಮಾರ್ಗಸೂಚಿ ರೂಪಿಸಬೇಕು ಎಂದು ಆಹಾರ ಸುರಕ್ಷತಾ ಅಧಿಕಾರಿಗಳು, ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಆಹಾರ ಸುರಕ್ಷತಾ ವ್ಯವಸ್ಥೆ ಬಲಪಡಿಸುವ ಬದಲು ಅಧಿಕಾರಗಳ ಗೊಂದಲ ಸೃಷ್ಟಿಸುವ ಯಾವುದೇ ಕ್ರಮ ಸಾರ್ವಜನಿಕ ಆರೋಗ್ಯದ ಹಿತಕ್ಕೆ ಅನುಕೂಲಕರವಲ್ಲ. ಸ್ಥಳೀಯ ಮಟ್ಟದಲ್ಲಿ ಆಹಾರ ಸುರಕ್ಷತಾ ಅಧಿಕಾರಿಗಳು, ಮಾನದಂಡಗಳ ಆಧಾರದಲ್ಲಿ ಆಹಾರ ಉದ್ಯಮಗಳನ್ನು ಪರಿಶೀಲಿಸಿ ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಅಗತ್ಯ ಕ್ರಮ ಕೈಗೊಳ್ಳುವ ಜವಾಬ್ದಾರಿ ಹೊಂದಿದ್ದಾರೆ. ಆದರೆ, ಪರವಾನಗಿ ಪ್ರಕ್ರಿಯೆಗೆ ಸಂಬಂಧಿಸಿದ ಅಧಿಕಾರ ಮತ್ತು ಜವಾಬ್ದಾರಿಗಳಲ್ಲಿ ಸ್ಪಷ್ಟತೆ ಇಲ್ಲದಿದ್ದರೆ ಆಹಾರ ಉದ್ಯಮಿಗಳಿಗೆ ಪರವಾನಗಿ ಪಡೆಯಲು ವಿಳಂಬವಾಗುವುದಲ್ಲದೆ, ಸಾರ್ವಜನಿಕರಿಗೂ ತೊಂದರೆ ಉಂಟಾಗಲಿದೆ.
ವಿಶೇಷವಾಗಿ ಸಣ್ಣ ಹೋಟೆಲ್‌ಗಳು, ಬೇಕರಿಗಳು, ಕ್ಯಾಂಟೀನ್‌ಗಳು, ಬೀದಿ ಆಹಾರ ವ್ಯಾಪಾರಿಗಳು ಮತ್ತು ಸಣ್ಣ ಆಹಾರ ಉತ್ಪಾದನಾ ಘಟಕಗಳು ಸೇರಿ ಸಾವಿರಾರು ಆಹಾರ ಉದ್ಯಮಿಗಳು ಪರವಾನಗಿ ಹಾಗೂ ನೋಂದಣಿ ಪ್ರಕ್ರಿಯೆಗಾಗಿ ಅಧಿಕಾರಿಗಳನ್ನು ಸಂಪರ್ಕಿಸುತ್ತಾರೆ. ಪ್ರಸ್ತುತ ಆದೇಶದಿಂದ ಅಧಿಕಾರಿಗಳ ವ್ಯಾಪ್ತಿ ಮತ್ತು ಕರ್ತವ್ಯಗಳ ಕುರಿತು ಗೊಂದಲ ಉಂಟಾದರೆ ಸಾಮಾನ್ಯ ಆಹಾರ ಉದ್ಯಮಿಗಳು ಕಚೇರಿಯಿಂದ ಕಚೇರಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಬಹುದು.
ಕಾರ್ಯನಿರ್ವಹಣೆಗೆ ಅಡಚಣೆ:
ಆಹಾರ ಸುರಕ್ಷತಾ ಅಧಿಕಾರಿಗಳಿಗೆ ಈಗಾಗಲೇ ಆಹಾರ ಮಾದರಿ ಸಂಗ್ರಹಣೆ, ಆಹಾರ ಉದ್ಯಮಗಳ ಪರಿಶೀಲನೆ, ದೂರುಗಳ ತನಿಖೆ, ಕಾನೂನು ಕ್ರಮ, ಸಾರ್ವಜನಿಕ ಜಾಗೃತಿ ಹಾಗೂ ತುರ್ತು ಕರ್ತವ್ಯಗಳಂತಹ ಹಲವು ಜವಾಬ್ದಾರಿಗಳಿವೆ. ಇಂತಹ ಸಂದರ್ಭದಲ್ಲಿ ಪರವಾನಗಿ ವ್ಯವಸ್ಥೆಯಲ್ಲಿನ ಅಧಿಕಾರ ಮತ್ತು ಜವಾಬ್ದಾರಿಗಳ ಬಗ್ಗೆ ಸ್ಪಷ್ಟತೆ ಇಲ್ಲದಿರುವುದು ಕ್ಷೇತ್ರಮಟ್ಟದಲ್ಲಿ ಅಧಿಕಾರಿಗಳ ಕಾರ್ಯನಿರ್ವಹಣೆಗೆ ಅಡಚಣೆಯಾಗಲಿದೆ. ಇದರಿಂದ ಕಾಯ್ದೆಯ ಪರಿಣಾಮಕಾರಿ ಅನುಷ್ಠಾನವೇ ದುರ್ಬಲವಾಗುವ ಸಾಧ್ಯತೆ ಇದೆ. ಆಹಾರ ಸುರಕ್ಷತಾ ವ್ಯವಸ್ಥೆಯ ಪ್ರಮುಖ ಉದ್ದೇಶವೇ ಸಾರ್ವಜನಿಕರಿಗೆ ಸುರಕ್ಷಿತ ಮತ್ತು ಗುಣಮಟ್ಟದ ಆಹಾರ ದೊರೆಯುವಂತೆ ಮಾಡುವುದು. ಪರವಾನಗಿ ನೀಡುವ ವ್ಯವಸ್ಥೆಯಲ್ಲಿ ಅನಗತ್ಯ ವಿಳಂಬ, ಅಧಿಕಾರದ ಗೊಂದಲ ಅಥವಾ ಆಡಳಿತಾತ್ಮಕ ಅಡಚಣೆ ಉಂಟಾದರೆ, ಅದರ ಅಂತಿಮ ಪರಿಣಾಮ ಸಾರ್ವಜನಿಕ ಆರೋಗ್ಯದ ಮೇಲೆಯೇ ಬೀಳಲಿದೆ.