ರಾಯಚೂರಿನ ಕೃಷಿ ವಿವಿಯ ಆವರಣದಲ್ಲಿ ಗುರುವಾರ ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವವನ್ನು ಉಸ್ತುವಾರಿ ಸಚಿವ ಡಾ.ಶರಣ ಪ್ರಕಾಶ ಪಾಟೀಲ್ ಉದ್ಘಾಟಿಸಿದರು. ಶಾಸಕರಾದ ಬಸನಗೌಡ ದದ್ದಲ್, ಹಂಪನಗೌಡ ಬಾದರ್ಲಿ, ಮಾನಪ್ಪ ಡಿ. ವಜ್ಜಲ್, ಡಾ. ಶಿವರಾಜ ಪಾಟೀಲ್, ಎಂಎಲ್ಸಿ ವಸಂತ ಕುಮಾರ, ಆರ್‌ಡಿಎ ಅಧ್ಯಕ್ಷ ರಾಜಶೇಖರ ರಾಮಸ್ವಾಮಿ, ಎಪಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನ ಗೌಡ, ಗ್ಯಾರಂಟಿ ಯೋಜನೆ ಜಿಲ್ಲಾಧ್ಯಕ್ಷ ಪಾಮಯ್ಯ ಮುರಾರಿ, ತಾಲೂಕು ಅಧ್ಯಕ್ಷ ಪವನ್ ಕಿಶೋರ್ ಪಾಟೀಲ್, ವಿವಿಯ ಕುಲಪತಿ ಡಾ. ಎಂ. ಹನುಮಂತಪ್ಪ, ಜಿಲ್ಲಾಧಿಕಾರಿ ನಿತೀಶ್ ಕೆ., ಪಾಲಿಕೆ ಆಯುಕ್ತ ಜುಬಿನ್ ಮೊಹಪಾತ್ರ, ಜಿಪಂ ಸಿಇಒ ಈಶ್ವರ ಕುಮಾರ ಕಾಂದೊ ಹಾಗೂ ಎಸ್ಪಿ ಅರುಣಾಂಗ್ಷು ಗಿರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. 
ರಾಜ್ಯ

ಅನ್ನ, ಚಿನ್ನ, ಬೆಳಕು ರಾಯಚೂರು ಹೆಮ್ಮೆ

ಪ್ರಮುಖ ಮುಖ್ಯಾಂಶಗಳು

  • ಸಚಿವ ಡಾ.ಶರಣ ಪ್ರಕಾಶ ಪಾಟೀಲ್ ಬಣ್ಣನೆ
  • ರಾಯಚೂರು ಜಿಲ್ಲಾ ಉತ್ಸವ ಉದ್ಘಾಟನೆ
ರಾಯಚೂರು: ಜಿಲ್ಲೆಯ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ನಾಡಿಗೆ ಪರಿಚಯಿಸಲು ಮೂರು ದಿನಗಳ ಎಡೆದೊರೆ ನಾಡು ರಾಯಚೂರು ಉತ್ಸವ ಹಮ್ಮಿಕೊಳ್ಳಲಾಗಿದೆ. ಪ್ರತಿಯೊಬ್ಬ ಕಲಾವಿದರು ಈ ಮೂರು ದಿನಗಳ ಕಾರ್ಯಕ್ರಮದಲ್ಲಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣ ಪ್ರಕಾಶ ಪಾಟೀಲ್ ಹೇಳಿದರು.
ನಗರದ ಕೃಷಿ ವಿವಿಯ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಮಹಾನಗರ ಪಾಲಿಕೆಯಿಂದ ಆಯೋಜಿಸಲಾಗಿದ್ದ ಉತ್ಸವವನ್ನು ಡೋಲು ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಕಳೆದ 22 ವರ್ಷಗಳ ನಂತರ ಜಿಲ್ಲೆಯ ಎಲ್ಲ ಸಾರ್ವಜನಿಕರ ಒತ್ತಾಸೆಯ ಮೇರೆಗೆ ರಾಯಚೂರು ಉತ್ಸವವನ್ನು ಆಯೋಜನೆ ಮಾಡಲಾಗಿದೆ. ರಾಜ್ಯದಲ್ಲಿ ಜಿಲ್ಲೆಯು ತನ್ನದೆ ವಿಶೇಷತೆ ಹೊಂದಿದೆ. ಇದು ನಾಡಿಗೆ ಅನ್ನ, ಚಿನ್ನ ಮತ್ತು ಬೆಳಕನ್ನು ನೀಡುವ ಜಿಲ್ಲೆಯಾಗಿದೆ. ಇಲ್ಲಿನ ಇತಿಹಾಸ, ಪರಂಪರೆ ಹಾಗೂ ವೈಭವವನ್ನು ಮರುಕಳಿಸಬೇಕಿದೆ ಎಂದರು.
ಸಾಹಿತಿಗಳು, ಸಂಗೀತಗಾರರು ಹಾಗೂ ಕಲಾವಿದರಿಗೆ ಪ್ರೋತ್ಸಾಹ ನೀಡಲು ಈ ಉತ್ಸವ ಆಯೋಜನೆ ಮಾಡಲಾಗಿದ್ದು, ಮೂರು ದಿನಗಳ ಕಾಲ ಕಲೆ, ಸಾಹಿತ್ಯ, ಸಂಗೀತ ಹಾಗೂ ಮನೋರಂಜನಾ ಕಾರ್ಯಕ್ರಮಗಳು ನಡೆಯಲಿವೆ. ಈ ಆಚರಣೆಯು ನಾಡಿನ ಘನತೆ, ಜನತೆಯ ಒಳ್ಳೆಯತನ ಮತ್ತು ವೈಭವವನ್ನು ಸಾರಲಿದೆ. ಜಿಲ್ಲೆಯ ಅನೇಕ ಕಲಾವಿದರು ದೇಶಕ್ಕೆ ಮಾದರಿಯಾಗಿದ್ದಾರೆ.
ಇಂದಿನ ಕಾರ್ಯಕ್ರಮದಲ್ಲಿ ಅನೇಕರು ತಮ್ಮ ಕಲೆಗಳನ್ನು ಅನಾವರಣಗೊಳಿಸಿದ್ದಾರೆ. ಇನ್ನು ಎರಡು ದಿನಗಳ ಕಾಲ ಉತ್ಸವ ಮುಂದುವರಿಯಲಿದ್ದು, ಸಮಾರೋಪ ಸಮಾರಂಭಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ಆಗಮಿಸಲಿದ್ದಾರೆ ಎಂದು ತಿಳಿಸಿದರು.
ಅನ್ನದಾತರಿಗೆ ಸಂದ ದೊಡ್ಡ ಗೌರವ
ಉತ್ಸವದ ಅಂಗವಾಗಿ ರಾಯಚೂರು ಕೃಷಿ ವಿಶ್ವವಿದ್ಯಾಲಯ ವ್ಯಾಪ್ತಿಯ ಏಳು ಜಿಲ್ಲೆಗಳ ತಲಾ ಒಬ್ಬರಂತೆ ಏಳು ರೈತರು ಹಾಗೂ ಏಳು ರೈತ ಮಹಿಳೆಯರು ಸೇರಿ ಒಟ್ಟು 14 ಸಾಧಕ ಅನ್ನದಾತರಿಗೆ ಕೃಷಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ರೈತ ಮಹಿಳೆಯರಾದ ಶರಣಮ್ಮ ಶಿವಶರಣಪ್ಪ, ಶೋಭಾ ಪಾಟೀಲ್, ಬಸಮ್ಮ ಬಸವರಾಜ್, ನಿಂಗವ್ವ ಛಲವಾದಿ, ಲಕ್ಷ್ಮೀ ಮಾರಲದಿನ್ನಿ, ಎಸ್. ರಾಧಿಕಾ, ಭಾಗ್ಯಶ್ರೀ ಹಾಗೂ ವಿಜಯಕುಮಾರ್, ಹಾವಿಗಿರಾವ್ ಕೂಡ್ಲಿಗಿ, ಚನ್ನಬಸಪ್ಪ ಪಂಪಣ್ಣ, ಹನುಮಂತ ವಾಲ್ಮೀಕಿ, ಶ್ರೀರಮಣಮೂರ್ತಿ, ಕೆ. ಕರಿಬಸನಗೌಡ ಮತ್ತು ಮಾನಸಿಂಗ್ ಅವರಿಗೆ ಕೃಷಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಗಮನ ಸೆಳೆದ ನಾಡಗೀತೆ

ಕೃಷಿ ವಿವಿಯ ಆವರಣದಲ್ಲಿ ಹಮ್ಮಿಕೊಂಡ ಉತ್ಸವದ ವೇದಿಕೆ ಕಾರ್ಯಕ್ರಮ ಪ್ರಾರಂಭಕ್ಕೂ ಮುನ್ನ ಮಹಾಲಕ್ಷ್ಮೀ ಹಾಗೂ ಪ್ರತಿಭಾ ಗೋನಾಳ ನೇತೃತ್ವದಲ್ಲಿ ಒಟ್ಟು ನೂರು ಜನರು ಒಂದೇ ಬಣ್ಣದ ಇಲಕಲ್‌ನ ಜರಾತ ಸೀರೆ ತೊಟ್ಟು ಜನರೊಂದಿಗೆ ನಾಡಗೀತೆ ಹಾಡಿದ್ದು ವಿಶೇಷವಾಗಿ ಗಮನ ಸೆಳೆಯಿತು.

ಸಿಎಂ-ಡಿಸಿಎಂ ಗೈರು

22 ವರ್ಷಗಳ ಬಳಿಕ ನಡೆಯುತ್ತಿರುವ ಈ ಉತ್ಸವಕ್ಕೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಸೇರಿದಂತೆ ಸಚಿವರಾದ ಶಿವರಾಜ ಎಸ್. ತಂಗಡಗಿ ಮತ್ತು ಎನ್. ಚಲುವರಾಯಸ್ವಾಮಿ ಅವರು ಗೈರಾಗಿದ್ದರು. ಈ ಮೊದಲು ಜ. 28 ರಿಂದ 30 ರವರೆಗೆ ದಿನಾಂಕ ನಿಗದಿ ಮಾಡಲಾಗಿತ್ತು. ಆದರೆ ವಿಶೇಷ ಅಧಿವೇಶನ ನಿಮಿತ್ತ ಕಾರ್ಯಕ್ರಮವನ್ನು ಮುಂದೂಡಿ ಫೆ. 5ರಿಂದ 7ರವರೆಗೆ ನಿಗದಿ ಮಾಡಿದರೂ ಇವರು ಗೈರಾಗಿದ್ದರಿಂದ ನೆರೆದಿದ್ದ ಸಾರ್ವಜನಿಕರಿಗೆ ನಿರಾಸೆ ಮೂಡಿತು.

ರಾಯಚೂರು ಐತಿಹಾಸಿಕ ಹಿನ್ನೆಲೆಯುಳ್ಳ ಜಿಲ್ಲೆಯಾಗಿದೆ. ಗತಕಾಲದ ಇತಿಹಾಸವನ್ನು ಮರುಕಳಿಸಿ ಯುವ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಈ ಉತ್ಸವ ಆಚರಿಸಲಾಗುತ್ತಿದೆ. ಕೃಷಿ ಆಧಾರಿತ ಜಿಲ್ಲೆಯಾದ ಇದು ದೇಶದ ಏಕೈಕ ಹಟ್ಟಿ ಚಿನ್ನದ ಗಣಿಯನ್ನು ಹೊಂದಿದೆ. ನಾಡಿಗೆ ಅರ್ಧದಷ್ಟು ವಿದ್ಯುತ್ ನೀಡುವ ಜಿಲ್ಲೆಗೆ ವಿಶೇಷ ಸ್ಥಾನಮಾನಕ್ಕಾಗಿ ನಡೆದ ಹೋರಾಟದ ಫಲವಾಗಿ 371(ಜೆ) ಸ್ಥಾನಮಾನ ದೊರೆತಿದ್ದು, ವೈದ್ಯಕೀಯ, ಇಂಜಿನಿಯರಿಂಗ್ ಸೇರಿ ಸಾವಿರಾರು ಸೀಟುಗಳು ಹಾಗೂ ಉದ್ಯೋಗ ಲಭಿಸುತ್ತಿದೆ. ನಾವೆಲ್ಲರೂ ಈ ಉತ್ಸವವನ್ನು ಹಬ್ಬದಂತೆ ಆಚರಿಸಬೇಕು.