ಕುಷ್ಟಗಿಯಲ್ಲಿ ಜನಪದ ಸಂಗೀತ ಕಲಾ ವೈಭವ ಕಾರ್ಯಕ್ರಮವನ್ನು ನಿವೃತ್ತ ಪೊಲೀಸ್ ಅಧಿಕಾರಿ ಸಿದ್ರಾಮಪ್ಪ ವಂದಾಲಿ ಉದ್ಘಾಟಿದರು. ಕರವೇ ಸ್ವಾಭಿಮಾನಿ ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಸಂತೋಷ್ ಎ.ತೋಟದ್, ವಿಶ್ವಕರ್ಮ ಸಮಾಜದ ತಾಲೂಕು ಅಧ್ಯಕ್ಷ ಶರಣಪ್ಪ ಎಚ್.ಬಡಿಗೇರ್, ಗುರುಬಸನಗೌಡ ಮಾಲಿಪಾಟೀಲ್ ಇತರರಿದ್ದರು.
ಕುಷ್ಟಗಿ: ಜನಪದ ಹಾಡುಗಳಲ್ಲಿ ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಶಕ್ತಿ ಇದೆ ಎಂದು ನಿವೃತ್ತ ಪೊಲೀಸ್ ಅಧಿಕಾರಿ ಸಿದ್ರಾಮಪ್ಪ ವಂದಾಲಿ ಹೇಳಿದರು.
ನಗರದ ಶಾಖಾಪುರ ರಸ್ತೆಯ ಶ್ರೀ ಕಾಳಿಕಾದೇವಿ ಸಮುದಾಯ ಭವನದಲ್ಲಿ ಹನಮಸಾಗರದ ಶ್ರೀ ಗುರು ಪುಟ್ಟರಾಜ ಸ್ವರ ಸಂಗೀತ ಹಾಗೂ ಕಲಾ ಸಾಂಸ್ಕೃತಿಕ ಸಂಸ್ಥೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಪರಿಶಿಷ್ಟ ಜಾತಿ ವಿಶೇಷ ಘಟಕದ ಸಂಘ-ಸಂಸ್ಥೆಗಳ ಧನಸಹಾಯದ ಯೋಜನೆಯಡಿ ಶನಿವಾರ ಹಮ್ಮಿಕೊಂಡಿದ್ದ ಜನಪದ ಸಂಗೀತ ಕಲಾ ವೈಭವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಾಕಷ್ಟು ಹಿಂದಿನಿಂದ ಚಾಲ್ತಿಯಲ್ಲಿರುವ ಮೂಲ ಜನಪದ ಕಲೆ ಸಾಕಷ್ಟು ಪೈಪೋಟಿ ಎದುರಿಸುತ್ತಿದೆ. ಸಿನಿಮಾ ಹಾಡಿನ ಧಾಟಿಯಲ್ಲಿ ಜನಪದ ಹಾಡುಗಳನ್ನು ಅಶ್ಲೀಲ ಸಾಹಿತ್ಯದ ಮೂಲಕ ಬಿತ್ತರಿಸುತ್ತಿರುವುದು ಸರಿಯಲ್ಲ ಎಂದರು.
ಕರವೇ ಸ್ವಾಭಿಮಾನಿ ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಸಂತೋಷ್ ಎ.ತೋಟದ್ ಮಾತನಾಡಿ, ಗ್ರಾಮೀಣ ಭಾಗದ ಕಲಾವಿದರ ಪ್ರತಿಭೆ ಗುರುತಿಸಿ, ಪ್ರೋತ್ಸಾಹಿಸುವ ಕೆಲಸ ನಿರಂತರವಾಗಿ ನಡೆಯಬೇಕು ಎಂದು ತಿಳಿಸಿದರು.
ವಿಶ್ವಕರ್ಮ ಸಮಾಜದ ತಾಲೂಕು ಅಧ್ಯಕ್ಷ ಶರಣಪ್ಪ ಎಚ್.ಬಡಿಗೇರ್, ನಿವೃತ್ತ ನೌಕರ ಸೈಯದ್ ಮುರ್ತುಜಾ ಖಾದ್ರಿ, ಕರವೇ ಸ್ವಾಭಿಮಾನಿ ಸೇನೆ ತಾಲೂಕು ಅಧ್ಯಕ್ಷ ಮರಿಯಪ್ಪ ಹಕ್ಕಲ್, ವಿಶ್ವಕರ್ಮ ಸಮಾಜ ನಗರ ಘಟಕದ ಅಧ್ಯಕ್ಷ ಸಿದ್ದಪ್ಪ ಬಡಿಗೇರ್, ಕರವೇ ಜಿಲ್ಲಾ ಉಸ್ತುವಾರಿ ಅಧ್ಯಕ್ಷ ಸಿದ್ದಪ್ಪ ಡಿ.ಕಲಾಲಬಂಡಿ, ಉಪಾಧ್ಯಕ್ಷ ಮಹಾಂತೇಶ ಎಸ್.ಅಮರಾವತಿ, ಮಹಿಳಾ ಘಟಕದ ಅಧ್ಯಕ್ಷೆ ಬೀಬಿಜಾನ್ ಜಾತಗರ್, ಪ್ರಮುಖರಾದ ಗುರುಬಸವನಗೌಡ ಮಾಲಿಪಾಟೀಲ್, ಮುದಕವ್ವ ಹೊಸಮನಿ, ಸೌಜನ್ಯಾ ಎಸ್.ಅಂಗಡಿ ಹುಲಿಯಾಪುರ, ಹೊಸಳ್ಳಿಯ ದೇವಪ್ಪ ಟೆಂಗುಂಟಿ, ಭರಮಪ್ಪ ಜಿನ್ನಾಪೂರ ಇತರರಿದ್ದರು.