ಯಾದಗಿರಿಯಲ್ಲಿ ಶುಕ್ರವಾರ ಕರೆದಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮನೋಜ್ ಜೈನ್ ಮಾತನಾಡಿದರು. ಡಿಸಿ ರಾಹುಲ್ ಪಾಂಡ್ವೆ, ಎಸ್‌ಪಿ ಪೃಥ್ವಿಕ್ ಶಂಕರ್ ಇದ್ದರು.
- ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮನೋಜ್ ಜೈನ್ ತಾಕೀತು
- ಯಾದಗಿರಿಯಲ್ಲಿ ಪ್ರಗತಿ ಪರಿಶೀಲನಾ ಸಭೆ
ಯಾದಗಿರಿ: ಕುಡಿಯುವ ನೀರಿನ ಸಮಸ್ಯೆ ನಿರ್ವಹಣೆಗಾಗಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ರಾಜ್ಯ ಸರ್ಕಾರ ಒಂದು ಕೋಟಿ ರೂ. ಬಿಡುಗಡೆ ಮಾಡಿದ್ದು, ಕ್ರಿಯಾಯೋಜನೆ ಅನ್ವಯ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮನೋಜ್ ಜೈನ್ ಸಂಬಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ವಿಪತ್ತು ನಿರ್ವಹಣೆ ಕುರಿತು ಶುಕ್ರವಾರ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ತೀವ್ರ ಬರ ಹಿನ್ನೆಲೆಯಲ್ಲಿ ಜನ ಜಾನುವಾರುಗಳಿಗೆ ನೀರಿನ ಕೊರತೆ ಆಗದಂತೆ ನೋಡಿಕೊಳ್ಳಬೇಕು. ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಉದ್ಭವಿಸಬಹುದಾದ ನೀರಿನ ಅಭಾವ ಕುರಿತು ಮುನ್ನೆಚ್ಚರಿಕೆ ವಹಿಸಬೇಕು. ಕ್ಷೇತ್ರವಾರು ನಿರಂತರ ಗ್ರೌಂಡ್ ವಾಟರ್ ಪ್ರಮಾಣ ಪರೀಕ್ಷೆ ಮಾಬೇಕು ಎಂದು ತಾಕೀತು ಮಾಡಿದರು.
ಬರ ಇದ್ದುದರಿಂದ ನೀರಿನ ನಿರ್ವಹಣೆ ಅತಿ ಮುಖ್ಯವಾಗಿದ್ದು, ಅಽಕಾರಿಗಳು ತುರ್ತು ಸಂದರ್ಭಕ್ಕನುಗುಣ ಕ್ರಮ ಕೈಗೊಳ್ಳಬೇಕು. ಜಲಧಾರೆ ಯೋಜನೆ ಕಾಮಗಾರಿ ಚುರುಕುಗೊಳಿಸಿ ಬೇಗ ಪೂರ್ಣಗೊಳಿಸಬೇಕು. ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿಗಳಿಗೂ ವೇಗ ನೀಡಿ ಎಂದರು.
ಜಿಲ್ಲಾಧಿಕಾರಿ ರಾಹುಲ್ ಪಾಂಡ್ವೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಇತರರಿದ್ದರು.
ಜನ ವಲಸೆ ಹೋಗದಂತೆ ಎಚ್ಚರ ವಹಿಸಿ
ವಿಬಿ-ಜಿ ರಾಮ್ ಜಿ ಅಡಿ ಹೆಚ್ಚೆಚ್ಚು ಜನರಿಗೆ ಉದ್ಯೋಗಾವಕಾಶ ಕಲ್ಪಿಸಿ ವಲಸೆ ಹೋಗದಂತೆ ಎಚ್ಚರಿಕೆ ವಹಿಸಬೇಕು. ಮಾನವ ದಿನಗಳ ಸೃಜನೆಯಲ್ಲಿ ಹಿಂದುಳಿದ, ಸುಮಾರು ೨೫ ಗ್ರಾಮ ಪಂಚಾಯಿತಿ ನೌಕರರಿಗೆ ಅರಿವು, ತರಬೇತಿ ಕಾರ್ಯಕ್ರಮ ಏರ್ಪಡಿಸಿ ಸರಿಯಾಗಿ ಕೆಲಸ ನಿರ್ವಹಿಸುವಂತೆ ಸೂಚಿಸಬೇಕು. ಉತ್ತಮ ಕೆಲಸ ಮಾಡಿದವರಿಗೆ ಪ್ರೋತ್ಸಾಹಿಸಬೇಕು ಎಂದ ಮನೋಜ್ ಜೈನ್. ಕೃಷಿಯಂತೆ ತೋಟಗಾರಿಕೆ ಇಲಾಖೆ ಮೂಲಕ ಕ್ಲಸ್ಟರ್ ರೂಪಿಸಬೇಕು. ಗುರುಮಠಕಲ್ ಹಾಗೂ ಸುರಪುರ ಅರಣ್ಯ ಪ್ರದೇಶ ವಿವಿಧ ಹಣ್ಣುಗಳಿಗೆ ಉತ್ತಮ ಪರಿಸರ ಹೊಂದಿದ್ದರಿಂದ ವಿಶೇಷ ಗಮನ ನೀಡುವಂತೆ ಸಂಬಧಿತ ಅಧಿಕಾರಿಗಳಿಗೆ ಸೂಚಿಸಿದರು.
ಶೈಕ್ಷಣಿಕ ಮಟ್ಟ ಸುಧಾರಣೆಗೆ ಶಾಲಾ ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ ಮಕ್ಕಳಲ್ಲಿ ನಿರಂತರ ಓದುವ ಹವ್ಯಾಸ ಬೆಳೆಸಬೇಕು.ಫಲಿತಾಂಶ ಸುಧಾರಣೆ ಜತೆ ರ‍್ಯಾಂಕ್ ಹೆಚ್ಚಳದತ್ತ ವಿಶೇಷ ಗಮನಹರಿಸಬೇಕು.| ಮನೋಜ್ ಜೈನ್ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ