ಕಬ್ಬನ್ ಪಾರ್ಕ್​ನಲ್ಲಿ ಆಯೋಜನೆಗೊಂಡಿರುವ ಹೂಹಬ್ಬದ ನೋಟ  
ರಾಜ್ಯ

ಕಬ್ಬನ್ ಉದ್ಯಾನದಲ್ಲಿ ಹೂಹಬ್ಬಕ್ಕೆ ಚಾಲನೆ

ಪ್ರಮುಖ ಮುಖ್ಯಾಂಶಗಳು

  • ಪುಷ್ಪ ಪ್ರದರ್ಶನದ ಜತೆಗೆ ಕಲೆ- ಸಂಸ್ಕೃತಿಯ ಸಮಾಗಮ
  • ಬಿಎಸ್‌ಎಫ್ ವತಿಯಿಂದ ಶಸ್ತ್ರಾಸ್ತ್ರಗಳ ಪ್ರದರ್ಶನ
  • ಸಾಂಸ್ಕೃತಿಕ ಕಾರ್ಯಕ್ರಮಗಳ ರಸದೌತಣ
ಬೆಂಗಳೂರು: ಸಸ್ಯಕಾಶಿ ಲಾಲ್‌ಬಾಗ್‌ಗೆ ಸೀಮಿತವಾಗಿದ್ದ ಫಲಪುಷ್ಪ ಪ್ರದರ್ಶನ ಇದೀಗ ಕಬ್ಬನ್ ಉದ್ಯಾನಕ್ಕೂ ಕಾಲಿರಿಸಿದ್ದು, ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆ ಅಂಗವಾಗಿ ತೋಟಗಾರಿಕೆ ಇಲಾಖೆಯು ಆಯೋಜಿಸಿರುವ 11 ದಿನಗಳ ‘ಹೂಗಳ ಹಬ್ಬ- 2025 ಕಲೆ ಸಂಸ್ಕೃತಿಯ ಸಮಾಗಮ’ಕ್ಕೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಗುರುವಾರ ಚಾಲನೆ ನೀಡಿದರು.
ಪುಷ್ಪ ಪ್ರದರ್ಶನದ ಭಾಗವಾಗಿ ಜಯಚಾಮರಾಜೇಂದ್ರ ಒಡೆಯರ್ ಪ್ರತಿಭೆ ಮುಂಭಾಗ, ಬ್ಯಾಂಡ್ ಸ್ಟ್ಯಾಂಡ್ ಬಳಿ ಹಾಗೂ ಬಾಲಭವನ ಸೇರಿ ಉದ್ಯಾನದ ಆಯ್ದ ಭಾಗಗಳಲ್ಲಿ ಆಕರ್ಷಕ ಹೂಕುಂಡಗಳನ್ನು ಜೋಡಿಸಲಾಗಿದೆ. ಖಾಸಗಿ ನರ್ಸರಿಗಳು, ತೋಟಗಾರಿಕೆ ಇಲಾಖೆ ಸೇರಿ 50 ಸಾವಿರ ಮನಮೋಹಕ ಹೂಕುಂಡಗಳು ಜನರನ್ನು ಕೈಬೀಸಿ ಕರೆಯುತ್ತಿವೆ.
ಇವೇ ಅಲ್ಲದೆ ಬಣ್ಣಬಣ್ಣದ ಹೂಗಳನ್ನು ಬಳಸಿ ನಿರ್ಮಿಸಿರುವ ಹಂಪಿಯ ಕಲ್ಲಿನ ರಥದ ಮಾದರಿ ಹಾಗೂ ಕರ್ನಾಟಕ ಭೂಪಟ ಪ್ರದರ್ಶನದ ಕೇಂದ್ರಬಿಂದುವಾಗಿದ್ದು, ಇದಲ್ಲದೆ ಹೂವಿನ ಜಿಂಕೆ, ಕೋಳಿ, ಡಾಲ್ಫಿನ್, ಚಿಟ್ಟೆ, ಬಾಳೆಹಣ್ಣು, ಸೇಬು, ಅನನಾಸ್, ದಾಳಿಂಬೆ, ಹಣ್ಣು ತರಕಾರಿಗಳಿಂದ ನಿರ್ಮಿಸಿರುವ ಆನೆ ಇತರೆ ಕಲಾಕೃತಿಗಳು ನೋಡುಗರ ಕಣ್ಮನ ಸೆಳೆಯುತ್ತಿವೆ. ಮತ್ತೊಂದೆಡೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಬ್ಯಾಂಡ್ ಸ್ಟ್ಯಾಂಡ್ ನಲ್ಲಿ ಪ್ರತಿದಿನ ಭರತನಾಟ್ಯ, ಜಾನಪದ ನೃತ್ಯ, ಹಾಡು, ಶಾಸೀಯ ನೃತ್ಯ ಪ್ರದರ್ಶನ, ಸಂಗೀತ ಕಛೇರಿ ಸೇರಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ರಸದೌತಣವೂ ಇರಲಿದೆ.

ಶಸ್ತ್ರಾಸ್ತ್ರಗಳ ಪ್ರದರ್ಶನ:

ಹೂವಿನ ಮಾದರಿಗಳ ಪ್ರದರ್ಶನ ಹಾಗೂ ಸಂಗೀತ ಸಾಂಸ್ಕೃತಿಕ ಕಲರವಗಳ ಜತೆಗೆ ಈ ಬಾರಿ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ವತಿಯಿಂದ ಆರ್ಮಿ ರೈಫಲ್ಸ್, ಬಾಂಬ್, ಟ್ಯಾಂಕ್ ಸೇರಿ ಹಲವು ಬಗೆಯ ಶಸ್ತ್ರಾಸ್ತ್ರಗಳು ಹಾಗೂ ರಕ್ಷಣಾ ಕವಚಗಳ ಪ್ರದರ್ಶನ ಏರ್ಪಡಿಸಲಾಗಿದ್ದು, ಇದು ಪ್ರದರ್ಶನದ ವಿಶೇಷತೆಯಾಗಿದೆ.

ಆಹಾರ ಮಳಿಗೆ:

ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರ್ತು ನಿಗಮ ನಿಯಮಿತ (ಕೆಪೆಕ್) ವತಿಯಿಂದ 25 ಕಿರು ಆಹಾರ ಸಂಸ್ಕರಣಾ ಮಳಿಗೆ ಸೇರಿ 150ಕ್ಕೂ ಅಧಿಕ ಮಳಿಗೆಗಳನ್ನು ತೆರೆಯಲಾಗಿದೆ. ಒಟ್ಟಾರೆ ಈ ಪ್ರದರ್ಶನದ ಮೂಲಕ ಮಕ್ಕಳಲ್ಲಿ ಪರಿಸರ ಹಾಗೂ ಪೌಷ್ಟಿಕ ಆಹಾರದ ಜಾಗೃತಿ ಜತೆಗೆ ಕಲೆಯಲ್ಲಿ ಆಕಸ್ತಿ ಮೂಡಿಸುವುದಾಗಿದೆ. ತ್ಯಾಜ್ಯ ಸಮಸ್ಯೆ ಸೇರಿ ಉದ್ಯಾನದಲ್ಲಿ ಯಾವುದೇ ರೀತಿಯ ತೊಂದರೆಗಳು ಆಗದಂತೆ ಅಗತ್ಯ ಕ್ರಮವಹಿಸಲಾಗಿದೆ. ಜತೆಗೆ ಇದು ಪ್ಲಾಸ್ಟಿಕ್‌ ಮುಕ್ತ ಹಾಗೂ ವಾಹನಮುಕ್ತ ಪ್ರದರ್ಶನವಾಗಿದ್ದು, ಕಬ್ಬನ್ ಉದ್ಯಾನಕ್ಕೆ ಮೆಟ್ರೋ ಸಂಪರ್ಕ ಇರುವ ಕಾರಣ 11 ದಿನಗಳ ಪ್ರದರ್ಶನದಲ್ಲಿ 2 ಲಕ್ಷಕ್ಕೂ ಅಧಿಕ ಮಂದಿ ಭೇಟಿ ನೀಡುವ ನಿರೀಕ್ಷೆ ಹೊಂದಲಾಗಿದೆ ಎಂದು ತೋಟಗಾರಿಕೆ ಇಲಾಖೆ ಹೆಚ್ಚುವರಿ ನಿರ್ದೇಶಕ ಡಾ.ಎಂ. ಜಗದೀಶ್ ತಿಳಿಸಿದರು.

ಪ್ರದರ್ಶನ ಸಮಯ:

ಇಲ್ಲಿಗೆ ಬಂದವರು ಪರಿಸರದ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಹಾಗೆಯೇ ಇಲಾಖೆಯು ಪ್ರದರ್ಶನದಲ್ಲಿ ಬಳಸಿರುವ ಹೂವುಗಳನ್ನು ತ್ಯಾಜ್ಯವಾಗಿಸದೇ ಒಣಗಿಸಿ ಅಥವಾ ಸಂಸ್ಕರಿಸಿ ಮರುಬಳಕೆಗೆ ಯೋಗ್ಯವಾದ ವಸ್ತುಗಳನ್ನು ತಯಾರಿಸಬೇಕು.

ಮಕ್ಕಳ ದಿನಾಚರಣೆ ಹಾಗೂ ರಾಜ್ಯೋತ್ಸವ ಪ್ರಯುಕ್ತ ವಿಶೇಷವಾಗಿ ಈ ಹೂವಿನ ಪ್ರದರ್ಶನ ಅಯೋಜಿಸಲಾಗಿದೆ. ಕಳೆದ ವರ್ಷ ಉತ್ತಮ ಪ್ರತಿಕ್ರಿಯೆ ಬಂದ ಹಿನ್ನೆಲೆಯಲ್ಲಿ ಈ ಬಾರಿ ವಿಶೇಷ ರೀತಿಯಲ್ಲಿ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.