ಹತ್ತಾರು ವಿಮಾನಗಳ ಹಾರಾಟದಲ್ಲಿ ವ್ಯತ್ಯಯ 
ರಾಜ್ಯ

ಸೋಮವಾರವೂ ವಿಮಾನ ಹಾರಾಟದಲ್ಲಿ ವ್ಯತ್ಯಯ-flight delay

ಬೆಂಗಳೂರು: ಇರಾನ್ ಮೇಲೆ ಇಸ್ರೇಲ್ ಮತ್ತು ಅಮೆರಿಕಾ ಯುದ್ಧ ನಡೆಸುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ಮತ್ತು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ, ಗಲ್ಫ್ ರಾಷ್ಟ್ರಗಳಿಗೆ ನಿರ್ಗಮನ ಮತ್ತು ಆಗಮಿಸಿಬೇಕಿದ್ದ ಹತ್ತಾರು ವಿಮಾನಗಳ ಹಾರಾಟದಲ್ಲಿ ಸೋಮವಾರವೂ ವ್ಯತ್ಯಯ ಉಂಟಾಯಿತು.
ಇರಾನ್ ವಾಯುಪ್ರದೇಶ ಮುಚ್ಚಿರುವ ಕಾರಣ, ಬೆಂಗಳೂರು ಮತ್ತು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದುಬೈ, ಬಹ್ರೇನ್, ಅಬುಧಾಬಿ, ಜಿದ್ದಾ, ದೋಹಾ ಮತ್ತು ರಿಯಾದ್ ಸೇರಿ ಗಲ್ಫ್ ರಾಷ್ಟ್ರಗಳ ಇತರ ವಿಮಾನ ನಿಲ್ದಾಣಗಳಿಗೆ ನಿರ್ಗಮಿಸಿದ್ದ ಇಂಡಿಗೋ, ಏರ್ ಇಂಡಿಯಾ ಸೇರಿ ಇತರ ವಿಮಾನಗಳನ್ನು ವಿಮಾನಯಾನ ಸಂಸ್ಥೆಗಳು ರದ್ದುಪಡಿಸಿವೆ.
ಗಲ್ಫ್ ರಾಷ್ಟ್ರಗಳಿಂದ ಬೆಂಗಳೂರು ಮತ್ತು ಮಂಗಳೂರು ವಿಮಾನ ನಿಲ್ದಾಣಗಳಿಗೆ ಆಗಮಿಸಿಬೇಕಿರುವ ಎಮಿರೇಟ್ಸ್, ಕತಾರ್ ಏರ್‌ವೇಸ್ ವಿಮಾನಗಳ ಹಾರಾಟದಲ್ಲಿ ವ್ಯತ್ಯಯವಾಗಿದೆ. ಇದರಿಂದಾಗಿ ವಿದೇಶ ಪ್ರವಾಸ ಮತ್ತು ಉದ್ಯೋಗ ನಿಮಿತ್ತ ತೆರಳಿದ್ದ ನೂರಾರು ಕನ್ನಡಿಗರು ಸಿಲುಕಿಕೊಂಡಿದ್ದಾರೆ. ಮುಂಗಡವಾಗಿ ವಿಮಾನ ಟಿಕೆಟ್ ಬುಕಿಂಗ್ ಮಾಡಿಕೊಂಡಿದ್ದ ಪ್ರಯಾಣಿಕರು, ತಮ್ಮ ಟಿಕೆಟ್ ರದ್ದುಪಡಿಸಿಕೊಂಡಿದ್ದಾರೆ.
ಪರಿಸ್ಥಿತಿಯ ಗಂಭೀರತೆ ಪರಿಗಣಿಸಿ ಈಗಾಗಲೇ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ವಿಮಾನಯಾನ ಸಂಸ್ಥೆಗಳು, ಅಂತಾರಾಷ್ಟ್ರೀಯ ವಾಯಪ್ರದೇಶದ ನಿರ್ಬಂಧ ಮುಂದುವರಿಯುವ ಸಾಧ್ಯತೆ ಇದೆ. ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ಬರುವ ಮುನ್ನ ಸಂಸ್ಥೆಯನ್ನು ಸಂಪರ್ಕಿಸಿ ಸ್ಥಿತಿಗತಿ ಖಚಿತಪಡಿಸಿಕೊಳ್ಳುವಂತೆ ಸಲಹೆ ನೀಡಿದೆ.