ದುಬಲಗುಂಡಿ ರಸ್ತೆಯಲ್ಲಿ ಮೃತದೇಹದೊಂದಿಗೆ ಗ್ರಾಮಸ್ಥರು ಶನಿವಾರ ಪ್ರತಿಭಟನೆ ನಡೆಸುತ್ತಿರುವ ಸ್ಥಳಕ್ಕೆ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್, ಎಂಎಲ್ಸಿ ಭೀಮರಾವ ಪಾಟೀಲ್ ಭೇಟಿ ನೀಡಿ ಅಹವಾಲು ಆಲಿಸಿದರು.
- ಸಿಡಿದೆದ್ದ ದುಬಲಗುಂಡಿ ಗ್ರಾಮಸ್ಥರು
- ರೋಗಿ ಸಾವಿಗೆ ಸಂಬಂಧಿತರ ನಿರ್ಲಕ್ಷ್ಯವೇ ಕಾರಣ
ಹುಮನಾಬಾದ್: ತೀವ್ರ ಎದೆ ನೋವಿನಿಂದ ಬಳಲುತ್ತಿದ್ದ ರೋಗಿ ಸಾವಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ಮತ್ತು ಆರೋಗ್ಯ ಇಲಾಖೆ ನಿರ್ಲಕ್ಷವೇ ಕಾರಣ ಎಂದು ಆರೋಪಿಸಿ ಕುಟುಂಬಸ್ಥರು ಮತ್ತು ಗ್ರಾಮಸ್ಥರು ಮೃತದೇಹದೊಂದಿಗೆ ದುಬಲಗುಂಡಿ ಮುಖ್ಯ ರಸ್ತೆಯಲ್ಲಿ ಶನಿವಾರ ಬೆಳಗ್ಗೆ ಪ್ರತಿಭಟನೆ ನಡೆಸಿದರು.
ದುಬಲಗುಂಡಿಯ ತುಕಾರಾಮ ನಿಂಬೂರೆ ಎಂಬುವರಿಗೆ ತೀವ್ರ ಎದೆನೋವು ಕಾಣಿಸಿಕೊಂಡ ತಕ್ಷಣ ಊರಿನ ಪಿಎಚ್ಸಿಗೆ ಕರೆತರಲಾಯಿತು. ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಟ್ರೀಟ್ಮೆಂಟ್ಗಾಗಿ ಬೇರೆಡೆ ಸಾಗಿಸಲು ವ್ಯವಸ್ಥೆ ಇಲ್ಲದ್ದರಿಂದ ಕೊನೆಯುಸಿರೆಳೆದಿದ್ದಾರೆ. ಬಳಿಕ ಶವವನ್ನು ಭಾಲ್ಕಿ- ಹುಮನಾಬಾದ್ ರಾಜ್ಯ ಹೆದ್ದಾರಿಯಲ್ಲಿ ಇರಿಸಿ ಸುಮಾರು ನಾಲ್ಕು ತಾಸು ಸಂಚಾರ ತಡೆ ನಡೆಸಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ವಿಷಯ ತಿಳಿಯುತ್ತಲೇ ಊರಿಗೆ ದೌಡಾಯಿಸಿದ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಹಾಗೂ ವಿಧಾನ ಪರಿಷತ್ ಸದಸ್ಯ ಭೀಮರಾವ ಪಾಟೀಲ್ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮೃತರ ಕುಟುಂಬದವರಿಗೆ ಸಾಂತ್ವನ ಹೇಳಿದರು.
ಪಿಎಚ್ಸಿಯಲ್ಲಿ ಸಮರ್ಪಕ ವೈದ್ಯರು ಹಾಗೂ ಆಂಬುಲೆನ್ಸ್ ಚಾಲಕ ಇಲ್ಲದ್ದರಿಂದ ತುಕಾರಾಮ ಸೇರಿ ಇದುವರೆಗೆ ನಾಲ್ವರ ಸಾವು ಸಂಭವಿಸಿದೆ. ಹಲವಾರು ಸಲ ಹೊರಾಟ ಮಾಡಿ ಡಿಎಚ್ಒ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಕಿಡಿಕಾರಿದ ಗ್ರಾಮಸ್ಥರು, ಪಿಎಚ್ಸಿ ವೈದ್ಯಾಧಿಕಾರಿ ಮತ್ತು ಡಿಎಚ್ಒ ಅವರನ್ನು ಅಮಾನತುಗೊಳಿಸಬೇಕು. ಮೃತರ ಕುಟುಂಬಕ್ಕೆ ಒಂದು ಕೋಟಿ ರೂ. ಪರಿಹಾರ ಮತ್ತು ಒಬ್ಬರಿಗೆ ಡಿ ಗ್ರುಪ್ ಹುದ್ದೆ ನೀಡಬೇಕು. ಆಸ್ಪತ್ರೆಯಲ್ಲಿ ದಿನದ 24 ಗಂಟೆ ವೈದ್ಯರು ಹಾಗೂ ಆಂಬುಲೆನ್ಸ್ ಚಾಲಕರು ಇರುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸ್ಥಳಕ್ಕೆ ಜಿಲ್ಲಾಧಿಕಾರಿ ಬರುವವರೆಗೆ ಹೋರಾಟ ಮುಂದುವರಿಸುವುದಾಗಿ ಪಟ್ಟು ಹಿಡಿದರು. ಕೊನೆಗೆ ಶಾಸಕದ್ವಯರ ಸಮ್ಮುಖದಲ್ಲಿ ದೂರವಾಣಿಯಲ್ಲಿ ಗ್ರಾಮಸ್ಥರೊಂದಿಗೆ ಡಿಸಿ ಶಿಲ್ಪಾ ಶಮಾರ್ ಮಾತನಾಡಿ, ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಪ್ರತಿಭಟನಾಕಾರರ ಅಹವಾಲು ಆಲಿಸಿದ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಆರೋಗ್ಯ ಸಚಿವರು ಹಾಗೂ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಜತೆ ದೂರವಾಣಿಯಲ್ಲಿ ಮಾತನಾಡಿ, ಪ್ರಕರಣದ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ತಕ್ಷಣವೇ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರಲ್ಲದೆ ಮೃತರ ಕುಟುಂಬಕ್ಕೆ ಸರ್ಕಾರದಿಂದ ಸೂಕ್ತ ಪರಿಹಾರ ದೊರಕಿಸಿಕೊಡುವುದಾಗಿ ಹೇಳಿದರು.
ಎಂಎಲ್ಸಿ ಭೀಮರಾವ ಪಾಟೀಲ್ ಸಹ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಮೃತ ತುಕಾರಾಮ ಕುಟುಂಬಕ್ಕೆ ಸರ್ಕಾರದ ಸೌಲಭ್ಯ ಒದಗಿಸಿಕೊಡುವಂತೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಕೋರಲಾಗಿದೆ. ವೈಯಕ್ತಿಕವಾಗಿ ಬಸವರಾಜ ಪಾಟೀಲ್ ಫೌಂಡೇಷನ್ನಿಂದ 51 ಸಾವಿರ ರೂ. ನೀಡಲಾಗುವುದು ಎಂದು ಭರವಸೆ ನೀಡಿದರು. ಬಳಿಕ ಪ್ರತಿಭಟನೆ ಕೈಬಿಟ್ಟು ಶವಸಂಸ್ಕಾರ ನೆರವೇರಿಸಲಾಯಿತು.
ಪ್ರತಿಭಟನೆಯಲ್ಲಿ ಗ್ರಾಪಂ ಮಾಜಿ ಅಧ್ಯಕ್ಷ ನಾಗರಾಜ ಭೋಜಗುಂಡಿ, ಮಾಜಿ ಉಪಾಧ್ಯಕ್ಷ ರಾಮಣ್ಣ ನರಸಗೊಂಡಿ, ತಾಪಂ ಮಾಜಿ ಸದಸ್ಯ ಪರಮೇಶ್ವರ ಕಾಳಮಂದರಗಿ, ಪ್ರಮುಖರಾದ ಅಶೋಕಕುಮಾರ ಚಳಕಾಪುರೆ, ಅನೀಲ ಪಸಾರ್ಗಿ, ವಿಜಯಕುಮಾರ ನಾತೆ, ಮಾಣಿಕ ಭೋಲಾ, ಶ್ರೀರಂಗ ಭೋಲಾ, ಪ್ರಭು ನೇಳಗಿ, ಸುನೀಲ ಭೋಲಾ, ರಾಜಕುಮಾರ ಹಳ್ಳಿಖೇಡ, ಸತೀಶ ರತ್ನಾಕರ, ರಾಜು ಕಾಳಮಂದರಗಿ ಇತರರು ಪಾಲ್ಗೊಂಡಿದ್ದರು.
ಸಹಾಯಕ ಆಯುಕ್ತ ಪ್ರಕಾಶ ಕುದರೆ, ಡಿಎಚ್ಒ ಜ್ಞಾನದೇವ ನಿರಗುಡೆ, ತಹಸೀಲ್ದಾರ್ ಜಗದೀಶ ಚೌರ, ಡಿವೈಎಸ್ಪಿ ಮಡೋಳಪ್ಪ, ಸಿಪಿಐ ಸಂತೋಷ ತಟ್ಟೆಪಳ್ಳಿ, ಪಿಎಸ್ಐ ವಿಜಯಕುಮಾರ ಸ್ಥಳದಲ್ಲಿ ಹಾಜರಿದ್ದರು.
ಭಾಲ್ಕಿ&ಹುಮನಾಬಾದ್ ಹೆದ್ದಾರಿಯಲ್ಲಿ ಮೃತದೇಹದೊಂದಿಗೆ ಸುದೀರ್ ನಾಲ್ಕು ತಾಸು ಪ್ರತಿಭಟನೆ ನಡೆಸಿದ್ದರಿಂದ ವಾಹನ ಸಂಚಾರಕ್ಕೆ ತೀವ್ರ ವ್ಯತ್ಯಯ ಉಂಟಾಗಿತ್ತು. ಹೆದ್ದಾರಿಯ ಎರಡೂ ಬದಿ ಕಿಮೀವರೆಗೆ ವಾಹನಗಳ ಸಾಲು ಕಂಡುಬಂದಿತು.