Fix the problem of Shira city
ಶಿರಾ: ಯಾವ ವಾರ್ಡಿನಲ್ಲೂ ಕಸ ವಿಲೇವಾರಿ ಸಮರ್ಪಕವಾಗಿ ಆಗುತ್ತಿಲ್ಲ. ಸೂಕ್ತ ಕ್ರಮ ಜರುಗಿಸಿ ಎಂದು ಸದಸ್ಯರು ನಗರಸಭೆ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಸಾಮಾನ್ಯಸಭೆಯಲ್ಲಿ ಒತ್ತಾಯಿಸಿದರು.
ಈ ವೇಳೆ ಮಧ್ಯಪ್ರವೇಶಿಸಿದ ಶಾಸಕ ಟಿ.ಬಿ.ಜಯಚಂದ್ರ ಕಸ ವಿಲೇವಾರಿ ಸರಿಯಾಗಿ ಆಗುತ್ತಿಲ್ಲದಿರುವುದು ನನ್ನ ಗಮನಕ್ಕೂ ಬಂದಿದೆ. ಈ ಬಗ್ಗೆ ಏನು ಕ್ರಮ ಕೈಗೊಂಡಿದ್ದೀರಾ ಎಂದು ಆಯುಕ್ತ ರುದ್ರೇಶ್ ಅವರನ್ನು ಪ್ರಶ್ನಿಸಿದರು.
ಪ್ರತಿನಿತ್ಯ ಕಸ ವಿಲೇವಾರಿ ಕಾರ್ಯ ನಡೆಯುತ್ತಿದ್ದು, ಸಾರ್ವಜನಿಕರು, ಹೋಟೆಲ್ ಮತ್ತು ಬೀದಿಬದಿ ವ್ಯಾಪಾರಿಗಳು ಎಲ್ಲೆಂದರಲ್ಲಿ ಕಸ ಚೆಲ್ಲುವುದರಿಂದ ಈ ಸಮಸ್ಯೆ ಉಂಟಾಗಿದೆ. ಸಿಸಿಟಿವಿ ಕ್ಯಾಮರಾ ಅಳವಡಿಸಿ ಕಸ ಹಾಕುವವರ ಮೇಲೆ ದಂಡ ವಿಧಿಸುವ ಕ್ರಮ ಜರುಗಿಸುತ್ತೇವೆ ಎಂದು ಆಯುಕ್ತ ಉತ್ತರಿಸಿದರು.
ನಗರದೆಲ್ಲಡೆ ಎಲ್ಲಂದರಲ್ಲಿ ್ಲೆಕ್ಸ್ ಹಾಕಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ್ಲೆಕ್ಸ್ ಹಾಕಲು ಒಂದು ನಿಯಮ ರೂಪಿಸಿ ಎಂದು ಸದಸ್ಯರು ಒತ್ತಾಯಿಸಿದಾಗ ಇನ್ನು ಮುಂದೆ ನಗರದಲ್ಲಿ ್ಲೆಕ್ಸ್ ಅಳವಡಿಸಲು ಸೂಕ್ತ ಜಾಗ ನಿಗದಿಪಡಿಸಲಾಗುವುದು ಹಾಗೂ ಅದಕ್ಕೆ ನಗರಸಭೆಯಿಂದ ಹಣ ವಸೂಲಿ ಮಾಡುತ್ತೆ. ನಗರಸಭೆ ನಿಗದಿ ಪಡಿಸಿದ ಜಾಗಗಳ ಬಿಟ್ಟು ಬೇರೆ ಕಡೆ ಫ್ಲಕ್ಸ್ ಹಾಕಿದರೆ ಅವರಿಗೆ ದಂಡ ವಿಧಿಸಲಾಗುವುದು ಎಂದು ಆಯುಕ್ತರು ತಿಳಿಸಿದರು.
ಅಮೃತ&2ಯೋಜನೆಯಿಂದ ನಗರದಿಲ್ಲಡೆ ರಸ್ತೆಗಳೆಲ್ಲ ಹಾಳಾಗಿದ್ದು, ಪ್ರತಿನಿತ್ಯ ಧೂಳಿನಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಹದಗೆಟ್ಟ ರಸ್ತೆಗಳನ್ನು ಸರಿಪಡಿಸಿದ ನಂತರವೇ ನಗರಸಭೆಯಿಂದ ಈ ಯೋಜನೆಗೆ ಅನುಮತಿ ನೀಡಿ ಎಂದು ನಗರಸಭೆ ಮಾಜಿ ಅಧ್ಯಕ್ಷ ಅಂಜಿನಪ್ಪ ಆಗ್ರಹಿಸಿದರು. ಇವರ ಹೇಳಿಕೆಗೆ ನಗರಸಭೆ ಸದಸ್ಯ ಉಮಾ ವಿಜಯರಾಜ್, ಎಸ್.ಎಲ್.ರಂಗನಾಥ್, ಸ್ವಾತಿಮುಂಜೇಶ್ ಧ್ವನಿ ಗೂಡಿಸಿದರು.
ಮೇ 31ರ ಒಳಗೆ ಎಲ್ಲ ಕಾಮಗಾರಿಗಳು ಮುಕ್ತಾಯಗೊಳ್ಳಲಿದ್ದು, ನಂತರ ವಾಟರ್ ಪ್ರಶರ್ ಚೆಕ್ ಮಾಡಿ ರಸ್ತೆ ದುರಸ್ತಿ ಮಾಡಲಾಗುವುದು ಎಂದು ಇಂಜಿನಿಯರ್ ತಿಳಿಸಿದರು. ಶಾಸಕ ಟಿ.ಬಿ.ಜಯಚಂದ್ರ ಮಾತನಾಡಿ, ತಾಲೂಕಿನಲ್ಲಿ ಪ್ರಥಮ ಬಾರಿಗೆ ಅಮೃತ ಯೋಜನೆ ಅತಿ ಶೀಘ್ರದಲ್ಲಿ ಮುಕ್ತಾಯ ಗೊಳ್ಳಲಿದೆ ಎಂದು ಹೇಳಿದರು.
15ನೇ ವಾರ್ಡಿನಲ್ಲಿ ಹಂದಿಗಳ ಕಾಟ ಜಾಸ್ತಿಯಾಗಿದ್ದು, ಅಲ್ಲಿನ ನಿವಾಸಿಗಳು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಸದಸ್ಯೆ ತೇಜು ಬಾನು ಪ್ರಕಾಶ್ ಪ್ರಶ್ನಿಸಿದಾಗ ನಗರಸಭೆ ಆಯುಕ್ತರು ಆರೋಗ್ಯ ನಿರೀಕ್ಷಕರನ್ನು ಕರೆದು ಕೂಡಲೇ ಹಂದಿ ಸಾಕಣಿಕೆಗಾರರಿಗೆ ಮೇ 15 ರೊಳಗೆ ನೋಟಿಸ್ ನೀಡಿ ನಗರದ ಯಾವ ಭಾಗದಲ್ಲೂ ಹಂದಿಗಳು ಓಡಾಡಬಾರದು, ಓಡಾಡಿದರೆ ಹಂದಿ ಮಾಲೀಕರಿಗೆ ದಂಡ ಹಾಕಿ ಎಂದು ತಿಳಿಸಿದರು.
ಅಧ್ಯಕ್ಷ ಜೀಶಾನ್ ಮೊಹಮ್ಮದ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸ್ಥಾಯಿ ಸಮಿತಿಯ ನೂತನ ಸದಸ್ಯರನ್ನಾಗಿ ಎಸ್.ಎಲ್.ರಂಗನಾಥ್, ಉಮಾ ವಿಜಯರಾಜ್, ತ್ರಿವೇಣಿ ಭೂಕಾಂತ್, ಕೃಷ್ಣಪ್ಪ ಹಾಗೂ ರಫಿ ಉಲ್ಲಾ ಅವರನ್ನು ಸರ್ವಾನುಮತದಿಂದ ಸಭೆಯಲ್ಲಿ ಆಯ್ಕೆ ಮಾಡಲಾಯಿತು. ನೂತನವಾಗಿ ಆಯ್ಕೆಗೊಂಡ ಸಮಿತಿಯ ಸದಸ್ಯರು ಎಂ.ಕೃಷ್ಣಪ್ಪ ಅವರನ್ನು ಸ್ಥಾಯಿ ಸಮಿತಿಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದರು