ವಿಧಾನಸೌಧ 
ರಾಜ್ಯ

ಮೇಲ್ಮನೆಯಲ್ಲಿ ಕೈಗೆ ಸಿಗಲಿವೆ ಐದು ಸ್ಥಾನ

ಬೆಂಗಳೂರು: ವಿಧಾನಸಭೆಯಿಂದ ವಿಧಾನ ಪರಿಷತ್‌ನ ಏಳು ಸ್ಥಾನಗಳಿಗೆ ನಡೆದ ಚುನಾವಣೆ ಕಾವಿನ ನಡುವೆಯೇ ಜುಲೈ 21ಕ್ಕೆ ಮೇಲ್ಮನೆಯಲ್ಲಿ ಖಾಲಿಯಾಗುವ ನಾಮನಿರ್ದೇಶನದ 5 ಸ್ಥಾನಗಳ ಮೇಲೆ ಆಡಳಿತಾರೂಢ ಕಾಂಗ್ರೆಸ್‌ನ ಆಕಾಂಕ್ಷಿಗಳ ಕಣ್ಣು ಬಿದ್ದಿದೆ.
ಬಿಜೆಪಿಯ ಎಚ್. ವಿಶ್ವನಾಥ್, ಭಾರತಿ ಶೆಟ್ಟಿ, ಶಾಂತರಾಮ ಸಿದ್ಧಿ, ಡಾ. ತಳವಾರ ಸಾಬಣ್ಣ ಮತ್ತು ಕಾಂಗ್ರೆಸ್‌ನ ರಮೇಶ್ ಬಾಬು ಅವಧಿ ಜುಲೈ 21ಕ್ಕೆ ಮುಗಿಯಲಿದ್ದು, ಐದೂ ಸ್ಥಾನಗಳು ಕಾಂಗ್ರೆಸ್‌ನ ತೆಕ್ಕೆಗೆ ಬೀಳಲಿವೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನಲ್ಲಿ ಆಕಾಂಕ್ಷಿಗಳ ಪಟ್ಟಿ ದಿನೇದಿನೆ ಬೆಳೆಯುತ್ತಿದೆ.
ಈಗಾಗಲೇ ಒಂದು ತಂಡ ದೆಹಲಿಗೆ ಹೋಗಿ ಐದು ಸ್ಥಾನಗಳಲ್ಲಿ ನಿಷ್ಠಾವಂತ ಕಾರ್ಯಕರ್ತರಿಗೆ ಅವಕಾಶ ನೀಡಬೇಕೆಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಮತ್ತು ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾಗೆ ಮನವಿ ಮಾಡಿದೆ. ಕಲೆ, ಸಮಾಜಸೇವೆ, ಶಿಕ್ಷಣ, ಕ್ರೀಡೆ ಸೇರಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವರನ್ನು ಆಡಳಿತ ಪಕ್ಷ ಆಯ್ಕೆ ಮಾಡಿ ಮೇಲ್ಮನೆಗೆ ಕಳುಹಿಸುತ್ತದೆ. ಹಾಲಿ ಸದಸ್ಯ ರಮೇಶ್ ಬಾಬು ಮರು ಆಯ್ಕೆ ಬಯಸಿದ್ದಾರೆ. ಹೊಸದಾಗಿ ಸಾಧುಕೋಕಿಲ, ಬಸವರಾಜು, ಕಾಂತಾ ನಾಯಕ್, ಅನಿಲ್ ತಡ್ಕಲ್, ನಟರಾಜ್ ಗೌಡ ಸೇರಿ ಹಲವರು ಆಕಾಂಕ್ಷಿಗಳಾಗಿದ್ದಾರೆ.
ಅಭ್ಯರ್ಥಿಗಳ ಆಯ್ಕೆ ಸಮಯದಲ್ಲಿ ಜಾತಿ, ಸಮುದಾಯ ಮತ್ತು ಪ್ರಾದೇಶಿಕತೆ ಸಮೀಕರಣವನ್ನು ಕಾಂಗ್ರೆಸ್ ಹೈಕಮಾಂಡ್ ಮಾಡಲಿದೆ. ಎಸ್‌ಸಿ-ಎಸ್‌ಟಿ, ಒಕ್ಕಲಿಗ, ಲಿಂಗಾಯತ ಸಮುದಾಯಕ್ಕೆ ಪ್ರಾಶಸ್ತ್ಯ ನೀಡುವ ಸಾಧ್ಯತೆಗಳು ದಟ್ಟವಾಗಿ ಕಾಣುತ್ತಿವೆ.

ನೇಮಕದ ಸಮಯ ಸರ್ಕಾರಕ್ಕೆ ಬಿಟ್ಟ ವಿಚಾರ

ಜುಲೈ 21ಕ್ಕೆ ಮೇಲ್ಮನೆಯ ಐದು ಸ್ಥಾನಗಳು ಖಾಲಿ ಆಗಲಿವೆ. ಆದರೆ, ಈ ಸ್ಥಾನಗಳಿಗೆ ತಕ್ಷಣವೇ ನೇಮಕ ಮಾಡಬೇಕೆಂಬ ನಿಯಮವಿಲ್ಲ. ಯಾವಾಗ ಬೇಕಾದರೂ ನೇಮಕ ಮಾಡುವ ಅಧಿಕಾರ ಸರ್ಕಾರದ ವಿವೇಚನೆಗೆ ಬಿಟ್ಟದ್ದಾಗಿದೆ. ಆದರೆ, ಇಂದಿನ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ತಕ್ಷಣವೇ ಮೇಲ್ಮನೆಗೆ ಐವರನ್ನು ನಾಮನಿರ್ದೇಶನ ಮಾಡುವ ಸಾಧ್ಯತೆಗಳು ಹೆಚ್ಚಾಗಿವೆ. ಏಕೆಂದರೆ ಪಕ್ಷದಲ್ಲಿ ಎಲ್ಲರಿಗೂ ಒಂದಿಲ್ಲೊಂದು ಅವಕಾಶ ಕಲ್ಪಿಸಬೇಕೆಂಬ ಧ್ಯೇಯ ಇರುವುದರಿಂದ ನೇಮಕಾತಿಯೂ ಜರೂರಾಗಿ ನಡೆಸುತ್ತಾರೆ ಎಂಬ ಮಾತುಗಳು ಕೇಳಿಬಂದಿವೆ.