Five people attacked for littering
ಚಿಂತಾಮಣಿ: ಕೆಂಪದೇನಹಳ್ಳಿಯಲ್ಲಿ ಕಸ ಹಾಕುವ ಮತ್ತು ಧರಣಿಗೆ ಬೆಂಬಲ ನೀಡದ ವಿಚಾರಕ್ಕೆ 2 ಗುಂಪುಗಳ ನಡುವೆ ಗಲಾಟೆ ನಡೆದು ಒಂದೇ ಕುಟುಂಬದ ಐವರ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಲಾಗಿದೆ.
ಕೆಂಪದೇನಹಳ್ಳಿ ನಿವಾಸಿಗಳಾದ ಅಂಬರೀಶ (41), ಶಶಿಕುಮಾರ್, ವೆಂಕಟರವಣಪ್ಪ, ಜಯಮ್ಮ ಮತ್ತು ನವೀನ್ ಕುಮಾರ್ ಹಲ್ಲೆಗೊಳಗಾಗಿ ಗಾಯಗೊಂಡಿದ್ದು, ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೂಲತ ಹೊಸಕೋಟೆ ತಾಲೂಕಿನ ಅಪ್ಪಸಂದ್ರದ ಅಂಬರೀಶ್ 18 ವರ್ಷಗಳ ಹಿಂದೆ ಕೆಂಪದೇನಹಳ್ಳಿಯ ಕವಿತಾ ಎಂಬುವವರನ್ನು ವಿವಾಹವಾಗಿ ಇಲ್ಲೇ ವಾಸವಾಗಿದ್ದಾರೆ. ಜೂ.14ರಂದು ಕುಟುಂಬದವರು ಗ್ರಾಮದ ಸರ್ಕಾರಿ ಶಾಲೆ ಪಕ್ಕದಲ್ಲಿರುವ ತಿಪ್ಪೆಗೆ ಕಸ ಹಾಕಲು ಹೋದಾಗ ದೇವರಾಜ್ ಹಾಗೂ ಆತನ ಪತ್ನಿ ಆಶಾ ಇಲ್ಲಿ ತಿಪ್ಪೆ ಹಾಕಬಾರದು ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಅದೇ ದಿನ ಸಂಜೆ ಮತ್ತೆ ಕಸ ಹಾಕಲು ಹೋದಾಗ ದೇವರಾಜ್, ಹರೀಶ್, ಆನಂದ, ಯಶವಂತ್, ಅಭಿಲಾಷ್, ಈರಮ್ಮ, ಮುನಿಯಪ್ಪ, ಆಶಾ ಹಾಗೂ ನಾರಾಯಣಸ್ವಾಮಿ ಗುಂಪು ಕಟ್ಟಿಕೊಂಡು ಬಂದು ಅಶ್ಲೀಲ ಪದಗಳಿಂದ ನಿಂದಿಸಿದ್ದಾರೆ. ಸ್ಥಳದಲ್ಲಿದ್ದ ಅಂಬರೀಶ, ಶಶಿಕುಮಾರ್, ನವೀನ್ ಕುಮಾರ್ ಮತ್ತು ವೆಂಕಟರವಣಪ್ಪ ಗಲಾಟೆ ಬಿಡಿಸಲು ಅಡ್ಡ ಹೋದಾಗ, ನಮ್ಮ ಊರಿನ ಧರಣಿಗೆ ನೀವು ಸಹಾಯ ಮಾಡಿಲ್ಲ. ಹಾಗಾಗಿ ನೀವು ಇಲ್ಲಿ ಕಸ ಹಾಕಬಾರದು ಎಂದು ನಿಂದಿಸಿ, ಹೊಡೆದಾಡಿದ್ದಾರೆ. ಎರಡು ಗುಂಪಿನ ಕಡೆಯಿಂದ ಪ್ರಕರಣ ದಾಖಲಾಗಿದೆ.