ಪಿರಿಯಾಪಟ್ಟಣದ ತಾಪಂ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ನಿತಿನ್ ವೆಂಕಟೇಶ್ ಉದ್ಘಾಟಿಸಿದರು. ಸುನೀಲ್ ಕುಮಾರ್, ಕರೀಗೌಡ, ಧನರಾಜ್, ಮಹದೇವ್, ವೀಣಾ, ವಿಂದ್ಯಾ, ರವಿ ಚಪ್ಪರದಹಳ್ಳಿ, ಹರ್ಷದ್, ಸುರೇಶ್ ಇದ್ದರು. 
ರಾಜ್ಯ

ಸ್ವಾವಲಂಬಿ ಜೀವನಕ್ಕೆ ಪಂಚ ಗ್ಯಾರಂಟಿ ನೆರವು

ಪ್ರಮುಖ ಮುಖ್ಯಾಂಶಗಳು

  • ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್
  • ತಾಲೂಕು ಪಂಚಾಯಿತಿ ಆಡಳಿತ ಸಭಾಂಗಣ

ಪಿರಿಯಾಪಟ್ಟಣ:

ರಾಜ್ಯ ಸರ್ಕಾರ ಜಾರಿಗೊಳಿಸಿರುವ ಪಂಚ ಗ್ಯಾರಂಟಿ ಯೋಜನೆ ಮಹಿಳೆಯರು, ಯುವಕರು ಹಾಗೂ ಸಾಮಾನ್ಯ ಜನರ ಬದುಕಿಗೆ ಆರ್ಥಿಕ ಭದ್ರತೆ ಒದಗಿಸುವ ಮೂಲಕ ಸ್ವಾವಲಂಬಿ ಜೀವನ ರೂಪಿಸಿಕೊಳ್ಳಲು ನೆರವಾಗಿವೆ ಎಂದು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್ ಹೇಳಿದರು.

ಪಟ್ಟಣದ ತಾಲೂಕು ಪಂಚಾಯಿತಿ ಆಡಳಿತ ಸಭಾಂಗಣದಲ್ಲಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ವತಿಯಿಂದ ಆಯೋಜಿಸಿದ್ದ ಸಾಧನೆಯ ಮೂರು ವರ್ಷಗಳು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಳೆದ ಮೂರು ವರ್ಷಗಳಲ್ಲಿ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಗೃಹಜ್ಯೋತಿ, ಗೃಹಲಕ್ಷ್ಮಿ, ಶಕ್ತಿ, ಯುವನಿಧಿ ಹಾಗೂ ಅನ್ನಭಾಗ್ಯ ಯೋಜನೆಗಳನ್ನು ತಾಲೂಕಿನ ಅರ್ಹ ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪಿಸಲಾಗಿದ್ದು, ಜನಸಾಮಾನ್ಯರು, ಮಹಿಳೆಯರು ಮತ್ತು ಯುವಕರು ಆರ್ಥಿಕವಾಗಿ ಸಬಲರಾಗಲು ಇವು ಸಹಕಾರಿಯಾಗಿವೆ ಎಂದು ತಿಳಿಸಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕಾಗಿ ಪ್ರತಿ ವರ್ಷ ಸುಮಾರು 55 ಸಾವಿರ ಕೋಟಿ ರೂ.ಅನುದಾನ ಮೀಸಲಿಟ್ಟಿದ್ದು, ತಾಲೂಕಿನ ಸಾವಿರಾರು ಕುಟುಂಬಗಳು ಈ ಯೋಜನೆಗಳ ಪ್ರಯೋಜನ ಪಡೆಯುತ್ತಿವೆ ಎಂದರು.
ಗೃಹಲಕ್ಷ್ಮಿ ಯೋಜನೆಯಡಿ ಮಹಿಳೆಯರಿಗೆ ಆರ್ಥಿಕ ನೆರವು ದೊರೆತಿದ್ದು, ಪ್ರತಿದಿನ ಸುಮಾರು 35 ಸಾವಿರ ಮಹಿಳೆಯರು ಶಕ್ತಿ ಯೋಜನೆಯಡಿ ಉಚಿತ ಪ್ರಯಾಣ ಸೌಲಭ್ಯ ಬಳಸುತ್ತಿದ್ದಾರೆ. ಗೃಹಜ್ಯೋತಿ ಯೋಜನೆಯಡಿ ಕೋಟ್ಯಂತರ ರೂ.ಮೌಲ್ಯದ ವಿದ್ಯುತ್ ಸಬ್ಸಿಡಿ ನೀಡಲಾಗಿದ್ದು, ಅನ್ನಭಾಗ್ಯ ಹಾಗೂ ಯುವನಿಧಿ ಯೋಜನೆಗಳ ಮೂಲಕವೂ ಯುವಕರು ಪ್ರಯೋಜನ ಪಡೆದಿದ್ದಾರೆ ಎಂದರು.
ತಾಪಂ ಇಒ ಸುನೀಲ್ ಕುಮಾರ್ ಮಾತನಾಡಿ, ಸರ್ಕಾರದ ಕಲ್ಯಾಣ ಯೋಜನೆಗಳು ಪ್ರತಿಯೊಬ್ಬ ಅರ್ಹ ಫಲಾನುಭವಿಗೂ ತಲುಪುವ ಗುರಿ ಹೊಂದಿದ್ದು ಇದು ಸುಗಮವಾಗಬೇಕು ಎಂದರು.
ಜಿಲ್ಲಾ ಗ್ಯಾರಂಟಿ ಯೋಜನೆ ಉಪಾಧ್ಯಕ್ಷ ಕರೀಗೌಡ, ಧನರಾಜ್, ಆಯತನಹಳ್ಳಿ ಮಹದೇವ್ ಇತರರು ಮಾತನಾಡಿದರು. ಸಿಡಿಪಿಒ ವೀಣಾ, ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯರಾದ ವಿಂದ್ಯಾ,ರವಿ ಚಪ್ಪರದಹಳ್ಳಿ, ಹರ್ಷದ್, ಸುರೇಶ್ ಇತರರು ಉಪಸ್ಥಿತರಿದ್ದರು.