ಬೆಟ್ಟದಪುರ ಸಮೀಪದ ಚಪ್ಪರದಹಳ್ಳಿ ಗ್ರಾಮದ ಮೊಗೇಕೆರೆಯಲ್ಲಿ ಮಳೆಯ ಕೊರತೆಯಿಂದ ನೀರಿನಮಟ್ಟ ತೀವ್ರವಾಗಿ ಕುಸಿದ ಹಿನ್ನೆಲೆಯಲ್ಲಿ ಮೀನುಗಳು ಮೃತಪಟ್ಟಿರುವುದು.
ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಸಮೀಪದ ಚಪ್ಪರದಹಳ್ಳಿ ಗ್ರಾಮದ ಮೊಗೇಕೆರೆಯಲ್ಲಿ ಮಳೆಯ ಕೊರತೆಯಿಂದ ನೀರಿನಮಟ್ಟ ತೀವ್ರವಾಗಿ ಕುಸಿದ ಪರಿಣಾಮ ಮೀನುಗಳು ಮೃತಪಟ್ಟಿವೆ.
ಈ ವರ್ಷ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಕಾರಣ ಕೆರೆಯಲ್ಲಿನ ನೀರು ಬಹುತೇಕ ಬತಿರುವ ಪರಿಣಾಮಸುಮಾರು 10 ಕ್ವಿಂಡಾಲ್‌ಗಿಂತಲೂ ಅಧಿಕ ವಿವಿಧ ಜಾತಿಯ ಮೀನುಗಳು ಮೃತಪಟ್ಟಿವೆ. ಕೆರೆಯಲ್ಲಿ ಸತ್ತ ಮೀನುಗಳು ತೇಲಿಬಂದಿರುವ ದೃಶ್ಯ ಕಂಡು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.
ಮೊಗೇಕೆರೆಯನ್ನು ಹರಾಜಿನಲ್ಲಿ ಪಡೆದು ಸುಮಾರು ಎರಡೂವರೆ ಲಕ್ಷ ವಿವಿಧ ಜಾತಿಯ ಮೀನು ಮರಿಗಳನ್ನು ಬಿಡಲಾಗಿತ್ತು. ಸಾಕಾಣಿಕೆಗಾಗಿ ಲಕ್ಷಾಂತರ ರೂ. ಹೂಡಿಕೆ ಮಾಡಿದ್ದೇವೆ. ಆದರೆ, ಮಳೆಯ ಕೊರತೆಯಿಂದ ಕೆರೆಯ ನೀರಿನಮಟ್ಟ ಸಂಪೂರ್ಣ ಕುಸಿದು ಮೀನುಗಳು ಮೃತಪಟ್ಟಿವೆ. ಪ್ರತಿವರ್ಷ ಈ ಕೆರೆ ತುಂಬಿ ಹರಿಯುತ್ತಿತ್ತು. ಆದರೆ, ಈ ಬಾರಿ ಮಳೆ ಕೈಕೊಟ್ಟ ಪರಿಣಾಮ ನಮ್ಮ ಪರಿಶ್ರಮಕ್ಕೆ ಬೆಲೆ ಇಲ್ಲದಂತಾಗಿದೆ ಎಂದು ಮೀನು ಸಾಕಾಣಿಕೆದಾರ ಸಿ.ಎನ್ ಪ್ರಸನ್ನಕುಮಾರ್ ಅಲವತ್ತುಕೊಂಡರು.