ಹನಗೋಡು ಹೋಬಳಿಯ ಬೀರತಮ್ಮನಹಳ್ಳಿಯ ದೊಡ್ಡಕೆರೆಯಲ್ಲಿ ಮೀನುಗಳು ಮೃತಪಟ್ಟಿರುವುದು. 
ರಾಜ್ಯ

ಬೀರತಮ್ಮನಹಳ್ಳಿ ಕೆರೆಯಲ್ಲಿ ಮೀನುಗಳ ಸಾವು

ಪ್ರಮುಖ ಮುಖ್ಯಾಂಶಗಳು

  • ಬೀರತಮ್ಮನಹಳ್ಳಿಯ ಕೆರೆ
  • ಮೀನುಗಳು ಮೃತ

ಹನಗೋಡು:

ಹೋಬಳಿಯ ಬೀರತಮ್ಮನಹಳ್ಳಿಯ ಕೆರೆಯಲ್ಲಿ ಮೀನುಗಳು ಮೃತಪಡುವುದರ ಜತೆಗೆ ತಾವರೆ ಗಿಡಗಳು ಮುದುಡಿ ಹೋಗಿದ್ದು, ನೀರಿಗೆ ವಿಷ ಹಾಕಿರುವ ಶಂಕೆ ವ್ಯಕ್ತವಾಗಿದೆ.

ಕಡೇಮನುಗನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬೀರತಮ್ಮನಹಳ್ಳಿ ಗ್ರಾಮದ ದೊಡ್ಡ ಕೆರೆಯಲ್ಲಿ ನೂರಾರು ಮೀನುಗಳು ಮೃತಪಟ್ಟಿವೆ. ಮೂರು ವರ್ಷಗಳಿಗೆ ಕೆರೆಯಲ್ಲಿ ಮೀನು ಹಿಡಿಯುವ ಗುತ್ತಿಗೆ ಪಡೆದಿರುವ ಶಿವಯ್ಯ ಘಟನೆಯಿಂದಾಗಿ ಕಂಗಾಲಾಗಿದ್ದಾರೆ. ಈ ಸಂಬಂಧ ಹುಣಸೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಹಜರು ನಡೆಸಿ ಕಿಡಿಗೆಗಳ ಪತ್ತೆಗೆ ಪೊಲೀಸರು ಕ್ರಮವಹಿಸಿದ್ದಾರೆ. ಇದು ಕಿಡಿಗೇಡಿಗಳ ಕೃತ್ಯವೋ ಅಥವಾ ಅಕ್ಕಪಕ್ಕದ ಜಮೀನಿಗೆ ಸಿಂಪಡಿಸಿದ್ದ ಕ್ರಿಮಿನಾಶಕದ ನೀರು ಕೆರೆ ನೀರಿಗೆ ಸೇರಿದ್ದರ ಪರಿಣಾಮವೋ ತನಿಖೆಯಿಂದ ತಿಳಿಯಬೇಕಿದೆ.

ಮೀನು ಸಾಕಣೆಗಾಗಿ ಲಕ್ಷಾಂತರ ರೂ. ಸಾಲ ಮಾಡಿದ್ದು, ಇದೀಗ ಕೆರೆಯಲ್ಲಿ ನೀರು ಕಡಿಮೆಯಾಗಿರುವುದರಿಂದ ಮೀನು ಹಿಡಿಯುವ ಸಂದರ್ಭದಲ್ಲೇ ಇಂತಹ ಕೃತ್ಯ ನಡೆದಿದ್ದು, ಕಿಡಿಗೇಡಿಗಳ ವಿರುದ್ಧ ಕ್ರಮವಾಗಬೇಕು. ನಷ್ಟಕ್ಕೊಳಗಾದವರಿಗೆ ಕನಿಷ್ಟ ಗುತ್ತಿಗೆ ಹಣ ವಾಪಸ್ ಕೊಡಿಸಬೇಕು ಎಂದು ಶಿವಯ್ಯ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.

ಕೆರೆಯ ನೀರು ವಿಷಮಯವಾಗಿರುವ ಪರಿಣಾಮ ಕೆರೆಯಲ್ಲಿ ಸತ್ತಿರುವ ಮೀನು ಉಪಯೋಗಿಸಬಾರದು. ಜಾನುವಾರುಗಳಿಗೆ ನೀರು ಕುಡಿಸದಂತೆ ಹಾಗೂ ಜನರು ಕೆರೆ ನೀರು ಬಳಸದಂತೆ ಬ್ಯಾನರ್ ಅಳವಡಿಸಲಾಗಿದೆ. ಅಲ್ಲದೆ ಬೀರತಮ್ಮನಹಳ್ಳಿ ಹಾಗೂ ಅಕ್ಕ ಪಕ್ಕದ ಗ್ರಾಮಗಳಲ್ಲಿ ಧ್ವನಿವರ್ಧಕದ ಮುಖಾಂತರ ಪ್ರಚಾರ ಕೈಗೊಳ್ಳಲಾಗಿದೆ ಎಂದು ಪಿಡಿಒ ದೇವರಾಜ್ ತಿಳಿಸಿದ್ದಾರೆ.