ಮೈಸೂರು ದಸರಾದಲ್ಲಿ ಕಂಬಳ ಆಯೋಜನೆ 
ರಾಜ್ಯ

ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಉತ್ಸವದಲ್ಲಿ ಇದೇ ಪ್ರಥಮ ಬಾರಿಗೆ ಕಂಬಳ

ಪ್ರಮುಖ ಮುಖ್ಯಾಂಶಗಳು

  • ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾದಲ್ಲಿ ಕಂಬಳ ಆಯೋಜನೆ
  • ಈ ವರ್ಷದಿಂದ ಕಂಬಳ ಆಯೋಜನೆಗೆ ಡಿಸಿ ಅಸ್ತು
ಮೈಸೂರು: ಸಾಂಸ್ಕೃತಿಕ ನಗರಿಯಲ್ಲಿ ನಡೆಯುವ ಅದ್ಧೂರಿ, ವಿಶ್ವವಿಖ್ಯಾತ ನಾಡಹಬ್ಬ ದಸರಾ ಉತ್ಸವದಲ್ಲಿ ಇದೇ ಪ್ರಥಮ ಬಾರಿಗೆ ಕಂಬಳವನ್ನು ವಿಶೇಷ ಆಕರ್ಷಣೆಯಾಗಿ ಆಯೋಜನೆ ಮಾಡಿರುವುದಾಗಿ ಮೈಸೂರಿನ ಜಿಲ್ಲಾಧಿಕಾರಿ ಲಕ್ಷ್ಮೀಕಾಂತ್ ರೆಡ್ಡಿ ಹೇಳಿದ್ದಾರೆ.
ಈ ಬಾರಿಯ ದಸರಾ ಉತ್ಸವದಲ್ಲಿ ಕಂಬಳ ಆಯೋಜಿಸುವ ಕುರಿತು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ವರ್ಷವೇ ಕಂಬಳ ಆಯೋಜಿಸಲು ಉದ್ದೇಶಿಸಲಾಗಿತ್ತು. ಆದರೆ, ಸರಿಯಾದ ಸ್ಥಳ ದೊರಕದ ಹಿನ್ನಲೆಯಲ್ಲಿ ಸಾಧ್ಯವಾಗಲಿಲ್ಲ. ಈ ಬಾರಿ ವಿಜಯನಗರ ಮೊದಲನೇ ಮತ್ತು ನಾಲ್ಕನೇ ಹಂತ ಅಥವಾ ಸಾತಗಳ್ಳಿ ರಿಂಗ್ ರೋಡ್ ರಸ್ತೆಯ ಬಳಿ ಕಂಬಳ ಆಯೋಜಿಸಲು ಸ್ಥಳ ಗುರುತಿಸಲಾಗಿದೆ. ಈ ಪೈಕಿ ಒಂದು ಸ್ಥಳವನ್ನು ಅತೀ ಶೀಘ್ರದಲ್ಲೇ ಅಂತಿಮಗೊಳಿಸಲಾಗುವುದು ಎಂದರು.
ಕಂಬಳ ಆಯೋಜನೆಗೆ ಕನಿಷ್ಠ ಏಳು ಎಕರೆ ಸ್ಥಳ ಬೇಕಿದ್ದು, ಸ್ಥಳ ಆಯ್ಕೆ ಮಾಡುವಾಗ ಪಾರ್ಕಿಂಗ್ ವ್ಯವಸ್ಥೆ, ವೀಕ್ಷಕರ ಗ್ಯಾಲರಿ, ಕೋಣಗಳು ಹಾಗೂ ಆಯೋಜಕರು ಉಳಿದುಕೊಳ್ಳಲು ಸ್ಥಳವನ್ನು ನೋಡಿ ಆಯ್ಕೆ ಮಾಡಲಾಗುವುದು. ದಸರಾ ಮಹೋತ್ಸವದ ಅಂಗವಾಗಿ ಆಯೋಜನೆ ಮಾಡಲಾಗುವ ಕಂಬಳ ಕಾರ್ಯಕ್ರಮದ ಉಪ ಸಮಿತಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅವರನ್ನು ನೋಡಲ್ ಅಧಿಕಾರಿಯಾಗಿ ನೇಮಿಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಯುಕೇಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ರಾಜ್ಯ ಕಂಬಳ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ವಿಜಯ್ ಕುಮಾರ್, ಸಂಘದ ಬೆಂಗಳೂರಿನ ಕಾರ್ಯಾಧ್ಯಕ್ಷ ಮುರುಳಿಧರ್ ರೈ ಹಾಗೂ ಇತರರು ಉಪಸ್ಥಿತರಿದ್ದರು.