ಜೆ.ಪಿ.ಪಾರ್ಕ್ ಪಕ್ಕದ ಜಿಬೆ ಮೈದಾನದಲ್ಲಿ ಪಟಾಕಿ ಖರೀದಿಯಲ್ಲಿ ನಿರತರಾಗಿರುವ ಗ್ರಾಹಕರು. 
ರಾಜ್ಯ

ನಗರದೆಲ್ಲೆಡೆ ಪಟಾಕಿ ವ್ಯಾಪಾರ ಬಲು ಜೋರು

ನಿಯಮಗಳ ಪಾಲನೆ, ಕೋರ್ಟ್ ಆದೇಶಕ್ಕೆ ಇಲ್ಲ ಕಿಮ್ಮತ್ತು

ಪ್ರಶಾಂತ ರಿಪ್ಪನ್​ಪೇಟೆ,ಬೆಂಗಳೂರು : ದೀಪಾವಳಿ ಹಬ್ಬವನ್ನು ದೊಡ್ಡ ಹಬ್ಬ ಎಂದೇ ಕರೆಯಲಾಗುತ್ತದೆ. 3-4 ದಿನಗಳ ಕಾಲ ನಡೆಯುವ ದೀಪಾವಳಿ ಹಬ್ಬವನ್ನು ದೇಶದ ಎಲ್ಲೆಡೆ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ. ಹಬ್ಬದ ಸಂಭ್ರಮವನ್ನು ಹೆಚ್ಚಿಸುವಲ್ಲಿ ಪಟಾಕಿಗಳ ಪಾತ್ರ ಪ್ರಮುಖವಾಗಿದೆ. ಕೋರ್ಟ್ ಆದೇಶ, ಸರ್ಕಾರದ ನಿಯಮ ಇತ್ಯಾದಿ ಕಟ್ಟಳೆಗಳ ನಡುವೆಯೂ ನಗರದೆಲ್ಲೆಡೆ ಪಟಾಕಿ ವ್ಯಾಪಾರ ಜೋರಾಗಿರುವುದು ವಿಜಯವಾಣಿ ನಡೆಸಿದ ರಿಯಾಲಿಟಿ ಚೆಕ್ ವೇಳೆ ಕಂಡು ಬಂದಿದೆ.

ಜಿಬಿಎ, ಪೊಲೀಸ್ ಇಲಾಖೆ ಮತ್ತು ಅಗ್ನಿಶಾಮಕ ದಳದ ಸಂಯುಕ್ತ ನಿಯಮಾವಳಿ ಪ್ರಕಾರ ನಗರದ ಸುಮಾರು 80 ಜಿಬಿಎ ಮೈದಾನಗಳಲ್ಲಿ ಪಟಾಕಿ ವ್ಯಾಪಾರಕ್ಕೆ ಅವಕಾಶ ನೀಡಲಾಗಿದ್ದು ಸುಮಾರು 410 ಮಳಿಗೆಗಳಲ್ಲಿ ವ್ಯಾಪಾರಸ್ಥರು ಪಟಾಕಿ ಮಾರಾಟ ಮಾಡಲಾಗುತ್ತಿದೆ.

ಬಹುತೇಕ ಎಲ್ಲ ಮೈದಾನಗಳಲ್ಲಿ ಜನರು ಕಿಕ್ಕಿರಿದು ಆಗಮಿಸುತ್ತಿದ್ದು, ಪಟಾಕಿ ಖರೀದಿಯಲ್ಲಿ ತೊಡಗಿದ್ದಾರೆ. ಈ ನಡುವೆ ಸುಪ್ರೀಂ ಕೋರ್ಟ್ ಕೇವಲ ಹಸಿರು ಪಟಾಕಿಗಳ ಮಾರಾಟಕ್ಕೆ ಮಾತ್ರ ಅನುಮತಿ ನೀಡಿದೆಯಾದರೂ; ಅದರ ಪರಿಶೀಲನೆ, ಪ್ರತ್ಯೇಕತೆಯ ಯಾವ ಸುಳಿವು ಮಾರಾಟ ಮಳಿಗೆಗಳ ಬಳಿ ಕಂಡು ಬರಲಿಲ್ಲ. ವ್ಯಾಪಾರಸ್ಥರು ಆ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಗ್ರಾಹಕರಿಗಂತೂ ಅದರ ಬಗ್ಗೆ ಸರಿಯಾದ ಮಾಹಿತಿಯೇ ಇಲ್ಲ. ನಮಗೇನು ಗೊತ್ತಿಲ್ಲ ಅಂಗಡಿಯವರು ಕೊಟ್ಟಿರುವ ಪಟಾಕಿಗಳನ್ನು ಖರೀದಿಸಿದ್ದೇವೆ ಎಂದು ಜಾರಿಕೊಳ್ಳುತ್ತಿದ್ದಾರೆ. ಅಂಗಡಿಯವರನ್ನು ಕೇಳಿದರೆ ಶೇ.90 ರಷ್ಟು ಹಸಿರು ಪಟಾಕಿಗಳನ್ನು ಮಾತ್ರ ಮಾರುತ್ತಿದ್ದೇವೆ ಎಂದು ಹೇಳುವ ಮೂಲಕ ಶೇ.10 ರಷ್ಟು ಕೆಂಪು ಪಟಾಕಿಗಳಿವೆ ಎಂಬುದನ್ನು ಪರೋಕ್ಷವಾಗಿ ಒಪ್ಪಿಕೊಳ್ಳುತ್ತಾರೆ.

ಪಟಾಕಿ ಸಿಡಿಸುವಾಗ ಕಣ್ಣಿಗೆ ಯಾವುದೇ ಅಪಾಯವಾಗದಂತೆ ರಕ್ಷಿಸುವ ತಾತ್ಕಾಲಿಕ 3ಡಿ ಪ್ಲಾಸ್ಟಿಕ್ ಕನ್ನಡಕಗಳ ಮಾರಾಟವೂ ಮಳಿಗೆಗಳ ಮುಂದೆ ನಡೆದಿತ್ತು. ಈ ಕನ್ನಡಕದಲ್ಲಿ ಪಟಾಕಿ ಕಿಡಿಗಳು ಹೃದಯದ ಆಕೃತಿಯಲ್ಲಿ ಕಾಣುವುದು ವಿಶೇಷ.

ಪಟಾಕಿ ಸಿಡಿಸುವಾಗ ಕಣ್ಣಿಗೆ ಉಂಟಾಗಬಹುದಾದ ಅಪಾಯವನ್ನು ತಡೆಗಟ್ಟುವ ನೂತನ 3ಡಿ ಪ್ಲಾಸ್ಟಿಕ್ ಕನ್ನಡಗಳು

ಗಾಳಿಗೆ ತೂರಲ್ಪಟ್ಟ ನಿಯಮಗಳು ?

ಪರಿಸರ ಮಾಲಿನ್ಯಕ್ಕೆ ಕಾರಣವಾಗುವ ಪಟಾಕಿಯನ್ನು ಸಂಪೂರ್ಣವಾಗಿ ನಿಷೇಧಿಸಬೇಕೆಂಬ ಒತ್ತಾಯ ಮತ್ತು ಚರ್ಚೆ ಬಹಳ ವರ್ಷಗಳಿಂದ ಇದೆ. ಸಂಪೂರ್ಣ ನಿಷೇಧ ಆಗದಿದ್ದರೂ ಭಾರಿ ಶಬ್ದವನ್ನು ಮಾಡುವ ಪಟಾಕಿಗಳು ಹಾಗೂ ಹೆಚ್ಚಿನ ಹೊಗೆಯನ್ನು ಬಿಡುಗಡೆ ಮಾಡುವ ಪಟಾಕಿಗಳಿಗೆ ಸುಪ್ರೀಂ ಕೋರ್ಟ್ ನಿಷೇಧ ಹೇರಿದ್ದು, ಕೇವಲ ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮತ್ತು ಬಳಕೆಗೆ ಅವಕಾಶ ನೀಡಿ ಆದೇಶ ಮಾಡಿದೆ. ಆದರೆ ಈ ಆದೇಶ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಕ್ಕೆ ಬಂದಂತೆ ಕಾಣುವುದಿಲ್ಲ. ಜೊತೆಗೆ ಪಟಾಕಿ ಸಿಡಿಸುವವರು ರಾತ್ರಿ 8ರಿಂದ 10 ಗಂಟೆಯವರೆಗೆ ಮಾತ್ರ ಸಿಡಿಸಬೇಕೆಂಬ ನಿಯಮವಿದೆ. ಆದರೆ ಈ ನಿಯಮವನ್ನು ಯಾರೂ ಪಾಲಿಸುತ್ತಿಲ್ಲ. ರಾಜ್ಯ ಪೊಲೀಸ್ ಮಹಾನಿರ್ದೇಶಕರು ಸುಪ್ರೀಂ ಕೋರ್ಟಿನ ಆದೇಶ ಉಲ್ಲಂಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಆದೇಶ ಹೊರಡಿಸಿದ್ದಾರೆ. ಆದರೆ ಸಾರ್ವಜನಿಕರು ದಿನಪೂರ್ತಿ ಪಟಾಕಿ ಸಿಡಿಸುವ ಪ್ರಕ್ರಿಯೆ ಎಲ್ಲೆಡ ನಡೆಯುತ್ತಿದೆ.

ಮಾರಾಟ ಮಳಿಗೆಗಳ ಬಳಿ ಸುರಕ್ಷತೆ ಕೊರತೆ

ಗುರುತು ಮಾಡಲ್ಪಟ್ಟ ನಗರದ ಜಿಬಿಎ ಮೈದಾನಗಳಲ್ಲಿ ಮಾತ್ರ ಪಟಾಕಿ ಮಾರಾಟಕ್ಕೆ ಅವಕಾಶವಿದ್ದು, ಆನ್‌ಲೈನ್ ಮೂಲಕ ಅರ್ಜಿ ಹಾಕಿ, ನಿಗದಿತ ಸಂಖ್ಯೆಯಲ್ಲಿ ಲಕ್ಕಿಡಿಪ್ ಮೂಲಕ ಮಳಿಗೆ ಅಲಾಟ್‌ಮೆಂಟ್ ಆಗುತ್ತದೆ. 25 ಸಾವಿರ ಭದ್ರತಾ ಠೇವಣಿ, 6400 ರೂ. ತುರ್ತು ಅಗ್ನಿಶಾಮಕ ಸೇವಾ ನಿಧಿ ಹಾಗೂ 5 ಸಾವಿರ ರೂ ಸೇವಾಸಿಂಧು ಪೋರ್ಟಲ್ ಮೂಲಕ ಸರ್ಕಾರಕ್ಕೆ ಶುಲ್ಕ ಪಾವತಿಸಿ ಮಾರಾಟ ಮಳಿಗೆಗಳನ್ನು ಪಡೆದುಕೊಳ್ಳಬೇಕು. ಇದಾದ ನಂತರ ಸಂಬಂಧಪಟ್ಟ ಇಲಾಖೆ ಮತ್ತು ಸ್ಥಳೀಯ ಆಡಳಿತಗಳು ವ್ಯಾಪಾರಸ್ಥರು ಹಾಗೂ ಗ್ರಾಹಕರಿಗೆ ಕೆಲ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು. ಆದರೆ ಮೈದಾನಗಳಲ್ಲಿ ಶೌಚಗೃಹ, ಕುಡಿಯುವ ನೀರು, ಧೂಮಪಾನ ನಿಷೇಧಿತ ಸೂಚನ ಲಕಗಳು, ಅಗ್ನಿಶಾಮಕದಳದ ವಾಹನ ಇತ್ಯಾದಿ ಯಾವುದೇ ಸೌಲಭ್ಯಗಳು ಕಂಡುಬರುತ್ತಿಲ್ಲ. ಒಂದು ವೇಳೆ ಅವಘಡಗಳು ಸಂಭವಿಸಿದರೆ ದೊಡ್ಡಮಟ್ಟದ ಪ್ರಾಣಾಪಾಯ ಮತ್ತು ಹಾನಿ ಸಂಭವಿಸುವ ಸಾಧ್ಯತೆ ಇದೆ.

ಮಾರಾಟ ಮಳಿಗೆಗೆ ಅನುಮತಿ ನೀಡುವಾಗ ನಿಯಮಾನುಸಾರ ಹಣ ಕಟ್ಟಿಸಿಕೊಳ್ಳುತ್ತಾರೆ. ಆದರೆ ಶೌಚಗೃಹ, ಅಗ್ನಿಶಾಮಕ ವಾಹನ, ಕುಡಿಯುವ ನೀರು ಮತ್ತಿತರ ಯಾವುದೇ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಟ್ಟಿಲ್ಲ.
ಪವನ್ ಕುಮಾರ್, ಪಟಾಕಿ ವ್ಯಾಪಾರಿ
ಗ್ರಾಹಕರಿಂದ ಪಟಾಕಿ ಖರೀದಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. 3-4 ದಿನದಲ್ಲಿ 10 ಲಕ್ಷ ರೂ.ವರೆಗೆ ವಹಿವಾಟು ನಡೆಯುವ ಅಂದಾಜಿದೆ.
ರಘು, ಪಟಾಕಿ ವ್ಯಾಪಾರಿ
ಹಸಿರು ಪಟಾಕಿ ಬಗ್ಗೆ ನಮಗೆ ಮಾಹಿತಿ ಇಲ್ಲ. ಅಂಗಡಿಯವರು ಕೊಟ್ಟಿದ್ದನ್ನು ತೆಗೆದುಕೊಂಡಿದ್ದೇವೆ. ಕೋರ್ಟ್ ಸೂಚನೆಯಂತೆ ನಿಗದಿತ ಸಮಯದಲ್ಲಿ ಮಾತ್ರ ಪಟಾಕಿ ಹೊತ್ತಿಸುತ್ತೇವೆ.
ಪ್ರಕಾಶ್, ಗ್ರಾಹಕರು ಬಸವನಗುಡಿ
ಪಟಾಕಿಯಿಂದ ಪರಿಸರ ಮಾಲಿನ್ಯ ಉಂಟಾಗುತ್ತದೆ. ಪಕ್ಷಿ ಪ್ರಾಣಿಗಳಿಗೆ ತೊಂದರೆಯಾಗುತ್ತದೆ. ಆದ್ದರಿಂದ ಅಪಾಯವಿಲ್ಲದ ಪಟಾಕಿಗಳನ್ನಷ್ಟೇ ಬಳಸಬೇಕು. ನಾನು ದೊಡ್ಡವನಾದ ಮೇಲೆ ಪಟಾಕಿ ಹೊಡೆಯುವುದಿಲ್ಲ.
ಶಿವತೇಜ್, ಬಾಲಕ, ಕೆಂಪೇಗೌಡನಗರ