Fire in a moving KSRTC bus!
ಹುಳಿಯಾರು : ಪಟ್ಟಣದ ಕನಕ ಸರ್ಕಲ್ ಬಳಿಯ ಪ್ರವಾಸಿ ಮಂದಿರದ ಹತ್ತಿರ ಗುರುವಾರ ಮಧ್ಯಾಹ್ನ ಕೆಎಸ್ಆರ್ಟಿಸಿ ಬಸ್ ಒಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಪ್ರಯಾಣಿಕರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಹುಳಿಯಾರಿನಿಂದ ಅರಸೀಕೆರೆಗೆ ಹೊರಟಿದ್ದ ಬಸ್ ಮಧ್ಯಾಹ್ನ 12 ಗಂಟೆ ಸುಮಾರಿಗೆ ಪ್ರವಾಸಿ ಮಂದಿರದ ಬಳಿ ಚಲಿಸುತ್ತಿದ್ದಾಗ ಇಂಜಿನ್ ಭಾಗದ ಡೀಸೆಲ್ ಪೈಪ್ ತುಂಡಾದ ಪರಿಣಾಮ ಬ್ಯಾಟರಿ ಕೇಬಲ್ನಲ್ಲಿ ಶಾರ್ಟ್ ಸಕ್ಯೂರ್ಟ್ ಉಂಟಾಗಿ ಕ್ಷಣಾರ್ಧದಲ್ಲಿ ಬೆಂಕಿ ಹತ್ತಿಕೊಂಡಿದೆ. ನೋಡ ನೋಡುತ್ತಿದ್ದಂತೆಯೇ ಬಸ್ ಒಳಗೆ ದಟ್ಟವಾದ ಹೊಗೆ ಆವರಿಸಿದ್ದರಿಂದ ಪ್ರಯಾಣಿಕರು ಆತಂಕಕ್ಕೊಳಗಾದರು.
ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆಯೇ ಅಕ್ಕಪಕ್ಕದ ಅಂಗಡಿಯವರು ಚಾಲಕನ ಗಮನಕ್ಕೆ ತಂದಿದ್ದಾರೆ. ಅದೃಷ್ಟ್ಟವಶಾತ್ ಬಸ್ನ ಹಿಂಭಾಗದ ಬಾಗಿಲು ತೆರೆದಿದ್ದರಿಂದ ಪ್ರಯಾಣಿಕರು ಸುರತವಾಗಿ ಕೆಳಗಿಳಿಯಲು ಸಾಧ್ಯವಾಯಿತು. ತಕ್ಷಣವೇ ಕಾರ್ಯಪ್ರವೃತ್ತರಾದ ಸ್ಥಳಿಯರು ಮರಳು ಮತ್ತು ನೀರನ್ನು ಹಾಕಿ ಬೆಂಕಿ ನಂದಿಸುವ ಮೂಲಕ ದೊಡ್ಡ ಅನಾಹುತ ತಪ್ಪಿಸಿದರು.
ಈ ಘಟನೆಯು ಪಟ್ಟಣದಲ್ಲಿ ಅಗ್ನಿಶಾಮಕ ಠಾಣೆಯ ತುರ್ತು ಅಗತ್ಯವನ್ನು ಮತ್ತೊಮ್ಮೆ ಎತ್ತಿ ತೋರಿಸಿದ್ದು, ಸರ್ಕಾರದ ವಿಳಂಬ ನೀತಿಯ ವಿರುದ್ಧ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.