Fire at an elderly woman's hut
ಶ್ರೀನಿವಾಸಪುರ: ತಾಲೂಕಿನ ಚಿಂತಾಮಣಿ ಮುಖ್ಯರಸ್ತೆಯಲ್ಲಿರುವ ಕಾಲನಿ ಗೇಟ್ ಸಮೀಪ ವಾಸವಿದ್ದ ವೃದ್ಧೆಯ ಗುಡಿಸಲಿಗೆ ಗುರುವಾರ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದು, ಗುಡಿಸಲು ಸಂಪೂರ್ಣ ಸುಟ್ಟು ಕರಕಲಾಗಿದೆ.
75 ವರ್ಷದ ಕದುರಮ್ಮ ಅವರು 40ವರ್ಷದಿಂದ ಒಬ್ಬರೇ ವಾಸಿಸುತ್ತಿದ್ದರು. ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚಿರುವ ಆರೋಪ ಕೇಳಿಬಂದಿದೆ. ಗುಡಿಸಲಿನಲ್ಲಿದ್ದ ಟಿವಿ, ಮಂಚ, ಬಟ್ಟೆಗಳು ಹಾಗೂ ಇತರೆ ಗೃಹೋಪಯೋಗಿ ವಸ್ತುಗಳು ಸಂಪೂರ್ಣ ಸುಟ್ಟುಹೋಗಿದ್ದು, ವೃದ್ಧೆ ಜೀವನೋಪಾಯಕ್ಕೆ ಬಳಸುತ್ತಿದ್ದ ಬಹುತೇಕ ಎಲ್ಲ ಸಾಮಗ್ರಿಗಳೂ ನಾಶವಾಗಿವೆ.
ಸ್ಥಳಿಯರು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಶ್ರೀನಿವಾಸಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.