- ಡ್ರಿಂಕ್ ಆಂಡ್ ಡ್ರೈವ್ ಪ್ರಕರಣದಲ್ಲಿ ನಟ ಮಯೂರ್
- ಮಯೂರ್ ಪಟೇಲ್ ವಿರುದ್ಧ FIR ದಾಖಲು
- ಕುಡಿದು ಕಾರು ಚಲಾಯಿಸಿ ರಂಪಾಟ
- ಮದ್ಯದ ಅಮಲಿನಲ್ಲಿ ಸರಣಿ ಅಪಘಾತ ಎಸಗಿದ ನಟ ಮಯೂರ್ ಪಟೇಲ್
ಬುಧವಾರ ರಾತ್ರಿ ಸುಮಾರು 10 ಗಂಟೆಯ ಸಮಯದಲ್ಲಿ ಈ ಅವಘಡ ಸಂಭವಿಸಿದೆ. ಓಲ್ಡ್ ಏರ್ಪೋರ್ಟ್ ರಸ್ತೆಯ ಕಮಾಂಡೊ ಆಸ್ಪತ್ರೆ ಸಿಗ್ನಲ್ ಬಳಿ ವಾಹನಗಳು ನಿಂತಿದ್ದವು. ಈ ವೇಳೆ ವೇಗವಾಗಿ ಬಂದ ಮಯೂರ್ ಪಟೇಲ್ ಅವರ ಫಾರ್ಚೂನರ್ ಕಾರು, ಸಿಗ್ನಲ್‌ನಲ್ಲಿ ಸಾಲಾಗಿ ನಿಂತಿದ್ದ ವಾಹನಗಳಿಗೆ ಹಿಂಬದಿಯಿಂದ ಜೋರಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಮುಂದಿದ್ದ ವಾಹನಗಳು ಒಂದಕ್ಕೊಂದು ಅಪ್ಪಳಿಸಿ ಸರಣಿ ಅಪಘಾತ ಸಂಭವಿಸಿದೆ.
ಈ ಅಪಘಾತದಲ್ಲಿ ಒಟ್ಟು ನಾಲ್ಕು ಕಾರುಗಳು ಜಖಂಗೊಂಡಿವೆ. ಇದರಲ್ಲಿ ಎರಡು ಸ್ವಿಫ್ಟ್ ಡಿಜೈರ್ ಕಾರುಗಳು ಮತ್ತು ಒಂದು ಸರ್ಕಾರಿ ವಾಹನ ಸೇರಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲವಾದರೂ, ವಾಹನಗಳು ತೀವ್ರವಾಗಿ ಹಾನಿಗೊಳಗಾಗಿವೆ.
ಅಪಘಾತದ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಹಲಸೂರು ಸಂಚಾರಿ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ನಟ ಮಯೂರ್ ಪಟೇಲ್ ಅವರನ್ನು ವಶಕ್ಕೆ ಪಡೆದು ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ, ಅವರು ಮದ್ಯಪಾನ ಮಾಡಿರುವುದು ದೃಢಪಟ್ಟಿದೆ. ಡಿಡಿ ಪರೀಕ್ಷೆಯಲ್ಲಿ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಪೊಲೀಸರು ನಟನ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದಾರೆ.
ಜಖಂಗೊಂಡ ಕಾರು ಚಾಲಕರಿಂದ ಅಪಘಾತದ ಬಗ್ಗೆ ದೂರು ನೀಡಲಾಗಿದೆ. ಈ ಸಂಬಂಧ ನಟನ ವಿರುದ್ಧ ಹಲಸೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಅಜಾಗರೂಕ ಚಾಲನೆ ಹಾಗೂ ಮದ್ಯಪಾನ ಮಾಡಿ ವಾಹನ ಚಲಾಯಿಸಿದ ಆರೋಪದಡಿ ಎಫ್‌ಐಆರ್ ದಾಖಲಾಗಿದ್ದು, ಮಯೂರ್ ಪಟೇಲ್ ಅವರ ಫಾರ್ಚೂನರ್ ಕಾರನ್ನು ಪೊಲೀಸರು ಸೀಜ್ ಮಾಡಿದ್ದಾರೆ.