FIR against social worker 
ರಾಜ್ಯ

ಸಾಮಾಜಿಕ ಕಾರ್ಯಕರ್ತನ ವಿರುದ್ಧ ಎಫ್ಐಆರ್​

ಚಿಕ್ಕಬಳ್ಳಾಪುರ ಡೆಸ್ಕ್
ಬಾಗೇಪಲ್ಲಿ: ಸರ್ಕಾರಿ ಇಲಾಖೆಗಳಲ್ಲಿ ನಡೆಯುವ ವಿವಿಧ ಭ್ರಷ್ಟಾಚಾರಗಳ ಬಗ್ಗೆ ಆರ್​ಟಿಐ ಮೂಲಕ ದಾಖಲೆ ಸಂಗ್ರಹಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದ ಸಾಮಾಜಿಕ ಕಾರ್ಯಕರ್ತನ ವಿರುದ್ಧ ಪೊಲೀಸರಿಗೆ ತಹಸೀಲ್ದಾರ್​ ದೂರು ನೀಡಿದ್ದು, ಎ್​ಐಆರ್​ ದಾಖಲಾಗಿದೆ.
ಯಂಡ್ರಕಾಯಲಪಲ್ಲಿಯ ಸಾಮಾಜಿಕ ಕಾರ್ಯಕರ್ತ ವಿನಯ್​ ಕುಮಾರ್​ ವಿರುದ್ಧ ತಹಸೀಲ್ದಾರ್​ ಮನೀಷಾಪತ್ರಿ ಮೇ 2ರಂದು ಬಾಗೇಪಲ್ಲಿ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ಸೋಮವಾರ ವಿನಯ್​ ಕುಮಾರ್​ಗೆ ನೋಟಿಸ್​ ನೀಡಿದ್ದಾರೆ.
"

ಪೌತಿ ಖಾತೆ, ಮರಣ ಪ್ರಮಾಣಪತ್ರ ಸೇರಿ ಇತರ ನಾಗರಿಕ ಸವಲತ್ತುಗಳ ವಿತರಣೆಗೆ ಸರ್ಕಾರ ನಿಗದಿಪಡಿಸಿರುವ ಕಾಲಮಾನದೊಳಗೆ ಅರ್ಜಿದಾರರಿಗೆ ದಾಖಲೆ, ಪ್ರಮಾಣಪತ್ರ ಒದಗಿಸದೆ ಕಚೇರಿಗೆ ಅಲೆದಾಡಿಸುತ್ತಿರುವ ತಹಸೀಲ್ದಾರ್​ ಕಾರ್ಯವೈಖರಿ ಬಗ್ಗೆ ದಾಖಲೆ ಸಮೇತ ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸಿದ್ದೇವೆ. ಭ್ರಷ್ಟಚಾರದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಸಾಮಾಜಿಕ ಕಾರ್ಯಕರ್ತರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವ ಹುನ್ನಾರ ನಡೆಯುತ್ತಿದೆ.

> ವಿನಯ್​ ಕುಮಾರ್​, ಸಾಮಾಜಿಕ ಕಾರ್ಯಕರ್ತ

ಬಾಗೇಪಲ್ಲಿ, ಚೇಳೂರು ತಾಲೂಕು ತಹಸೀಲ್ದಾರ್​ ಕಚೇರಿ, ಭೂ ದಾಖಲೆ ಇಲಾಖೆ, ಲೋಕೋಪಯೋಗಿ, ಜಿಪಂ ಸೇರಿ ಎರಡು ತಾಲೂಕಿನ ವಿವಿಧ ಗ್ರಾಪಂ ಕಾರ್ಯಾಲಯಗಳಲ್ಲಿ ಇತ್ತೀಚಿಗೆ ನಡೆದ ಹಲವು ಭ್ರಷ್ಟಾಚಾರಗಳ ಬಗ್ಗೆ ವಿನಯ್​ ಕುಮಾರ್​ ದಾಖಲೆ ಸಮೇತ ವಾಟ್ಸಾಪ್​, ೇಸ್​ಬುಕ್​ ಖಾತೆಯಲ್ಲಿ ಹಂಚಿಕೊಂಡು ಅಧಿಕಾರಿಗಳನ್ನು ಪ್ರಶ್ನಿಸುತ್ತಿದ್ದರು.
ಸರ್ಕಾರಿ ಇಲಾಖೆಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಕುರಿತು ವಿನಯ್​ ಕುಮಾರ್​ ಹಂಚಿಕೊಂಡಿರುವ ಪೋಸ್ಟ್​ಗಳಿಗೆ ನೆಟ್ಟಿಗರು ವಿವಿಧ ಪ್ರತಿಕ್ರಿಯೆ ನೀಡುತ್ತಿದ್ದು, ಅಧಿಕಾರಿಗಳ, ಜನಪ್ರತಿನಿಧಿಗಳ ಕೆಂಗಣ್ಣಿಗೆ ಗುರಿಯಾಗಿದೆ.
ಬಾಗೇಪಲ್ಲಿ ತಹಸೀಲ್ದಾರ್​ ಮನೀಷಾ ಪತ್ರಿ ಮತ್ತು ಚೇಳೂರು ತಹಸೀಲ್ದಾರ್​ ಶ್ವೇತಾ ಕುರಿತು ಕಳೆದ ಜ.14 ರಂದು ವಿನಯ್​ ತನ್ನ ೇಸ್​ಬುಕ್​ ಖಾತೆಯಲ್ಲಿ ಸ್ಮಶಾನಗಳಿಗೆ ಜಾಗ ಮಂಜೂರು ಮಾಡುತ್ತಿಲ್ಲ. ಅವಧಿಯೊಳಗೆ ಸರ್ಕಾರಿ ಕೆಲಸಗಳು ಮಾಡುತ್ತಿಲ್ಲ. ತೆರಿಗೆ ಹಣ ದುರುಪಯೋಗ, ಬಡವರ ಕೆಲಸ ಮಾಡಿಕೊಡುತ್ತಿಲ್ಲ ಎಂಬ ಪೋಸ್ಟ್​ಗಳನ್ನು ಹಂಚಿಕೊಂಡಿದ್ದರು.
ಸಾಮಾಜಿಕ ಕಾರ್ಯಕರ್ತನ ಸಂದೇಶಕ್ಕೆ ಕೆರಳಿರುವ ಬಾಗೇಪಲ್ಲಿ ತಹಸೀಲ್ದಾರ್​ ತಾಲೂಕು ದಂಡಾಧಿಕಾರಿ ಹುದ್ದೆಯ ಘನತೆಗೆ ಅಪಖ್ಯಾತಿ, ನನಗೆ ಅವಮಾನ ಮಾಡುವ ರೀತಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಂಚಿಕೊಂಡು ವೃತ್ತಿಗೆ ದಕ್ಕೆ ತರುವಂತೆ ಪೋಸ್ಟ್​ ಮಾಡಿದ್ದಾರೆಂದು ವಿನಯ್​ ಕುಮಾರ್​ ವಿರುದ್ಧ ಬಾಗೇಪಲ್ಲಿ ಠಾಣೆಯಲ್ಲಿ ದೂರು ನೀಡಿದ್ದಾರೆ.