kpsc-chairman 
ರಾಜ್ಯ

ಕೆಪಿಎಸ್‌ಸಿ ಮಾಜಿ ಅಧ್ಯಕ್ಷರ ವಿರುದ್ಧ ಎಫ್ಐಆರ್

ಪ್ರಮುಖ ಮುಖ್ಯಾಂಶಗಳು

  • ಆಯೋಗದ ಸದಸ್ಯರು, ಅಧಿಕಾರಿಗಳು ಸೇರಿ 29 ಮಂದಿ ಹೆಸರು ಉಲ್ಲೇಖ
ಬೆಂಗಳೂರು: ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯಲ್ಲಿ ಖಾಲಿ ಇರುವ 400 ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ನಡೆದಿರುವ ಬಗ್ಗೆ ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಸೇರಿ ನಾಲ್ಕು ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪಶುವೈದ್ಯ ಮಂಜುನಾಥ್ ಎಂಬುವರು ಮತ್ತು ಇತರೆ 24 ಅಭ್ಯರ್ಥಿಗಳು ನೀಡಿದ ದೂರು ಆಧರಿಸಿ, ಸಾಹುಕಾರ್ ಎಸ್.ಶಿವಶಂಕರಪ್ಪ, ಕೆಪಿಎಸ್‌ಸಿ ಸದಸ್ಯರು, ಅಧಿಕಾರಿಗಳು ಮತ್ತು ಹುದ್ದೆಗೆ ಆಯ್ಕೆಯಾಗಿರುವ 29 ಮಂದಿ ವಿರುದ್ಧ ಜುಲೈ 24ರಂದು ಬಿಎನ್‌ಎಸ್ ಕಾಯ್ದೆ 328ರ ಅಡಿ ಎಫ್ಐಆರ್ ದಾಖಲಾಗಿದೆ.
2024 ಜುಲೈ 29 ರಂದು ಪಶು ವೈದ್ಯಾಧಿಕಾರಿ 400 (342+58) ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿತ್ತು. ಜನವರಿ 8, 2026ರಂದು ಪರೀಕ್ಷೆ ನಡೆಸಿ ಜುಲೈ 17 ರಂದು ಅಂತಿಮ ಪಟ್ಟಿಯನ್ನು ಕೆಪಿಎಸ್‌ಸಿ ಪ್ರಕಟಿಸಿತ್ತು. ಆದರೆ ಕೆಪಿಎಸ್‌ಸಿ ಅಧ್ಯಕ್ಷರಾಗಿರುವ ಶಿವಶಂಕರಪ್ಪ ಹಾಗೂ ಇತರರು ಸೇರಿಕೊಂಡು ತಮಗೆ ಬೇಕಾದ ಅಭ್ಯರ್ಥಿಗಳು ಹಾಗೂ ಸಂಬಂಧಿಕರು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗುವಂತೆ ಓಎಂಆರ್ ಸೀಟ್‌ಗಳನ್ನು ತಿದ್ದುಪಡಿ ಮಾಡಿ ಆಯ್ಕೆ ಮಾಡಿದ್ದಾರೆ.
ಲಂಚಕ್ಕಾಗಿ ಬೇಡಿಕೆ:
ಯು.ಪಿ.ಎಸ್.ಸಿ ನಡೆಸುವ ಐಎಫ್‌ಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು 350 ಅಂಕಗಳನ್ನು ಪಡೆಯಲು ವಿಫಲರಾಗಿದ್ದಾರೆ. ಆದರೆ, ಪಶುವೈದ್ಯ ಪದವಿಯಲ್ಲಿ ಸಾಮಾನ್ಯ ದರ್ಜೆಯಲ್ಲಿ ಪಾಸಾಗಿರುವ ಅಭ್ಯರ್ಥಿಗಳು 450ಕ್ಕೂ ಹೆಚ್ಚು ಅಂಕ ಪಡೆದಿರುವುದು ಅನುಮಾನ ಮೂಡಿಸಿದೆ. ಅಧ್ಯಕ್ಷರ ಸಂಬಂಧಿಯಾಗಿರುವ ಸುಗುರೇಶ್ ಎಂಬುವರು ಪದವಿಯ 2 ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡು ಕಂಪಾರ್ಟ್‌ಮೆಂಟ್ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡಿದ್ದಾರೆ. ಆ ಅಭ್ಯರ್ಥಿ ಪಶುವೈಧ್ಯಾಧಿಕಾರಿ ಹುದ್ದೆ ಪರೀಕ್ಷೆಯಲ್ಲಿ 450ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದು ಆಯ್ಕೆ ಪಟ್ಟಿ ಮೊದಲ ಸ್ಥಾನದಲ್ಲಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ರೆಸಾರ್ಟ್‌ಗಳಲ್ಲಿ ಡೀಲ್

ಪರೀಕ್ಷೆಗೂ ಮುನ್ನ ಈ ಅಭ್ಯರ್ಥಿಗಳ ಮೊಬೈಲ್ ಫೋನ್‌ಗಳು ಸ್ವೀಚ್ ಆ್ ಆಗಿವೆ. ಮಧ್ಯವರ್ತಿಗಳು ತಮ್ಮ ವಾಹನದಲ್ಲಿ ಅಭ್ಯರ್ಥಿಗಳನ್ನು ಕರೆದುಕೊಂಡು ಹೊರ ರಾಜ್ಯ, ಹೊಟೇಲ್ ಹಾಗೂ ರೆಸಾರ್ಟ್‌ಗಳಲ್ಲಿ ಕರೆದುಕೊಂಡು ಹೋಗಿ ಉತ್ತರ ಸಹಿತ ಪ್ರಶ್ನೆ ಪತ್ರಿಕೆ ನೀಡಿ, ಅಭ್ಯರ್ಥಿಗಳಿಗೆ ತರಬೇತಿ ನೀಡಿದ್ದಾರೆ. ಅಲ್ಲದೇ ನಡೆಯುವ ಕೆಲ ಸಮಯದ ಬಳಿಕ ಪರೀಕ್ಷಾ ಕೇಂದ್ರದ ಸಮೀಪಕ್ಕೆ ತಂದು ಬಿಟ್ಟಿರುತ್ತಾರೆ ಎಂಬ ಮಾಹಿತಿ ಇದೆ. ಒಬ್ಬ ಅಭ್ಯರ್ಥಿಯಿಂದ 80 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ. ಅಡ್ವಾನ್ಸ್ ರೂಪದಲ್ಲಿ ಹಣ ಪಡೆದು ಪರೀಕ್ಷೆಯಲ್ಲಿ ಅಕ್ರಮ ಎಸಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು 29ಕ್ಕೂ ಹೆಚ್ಚು ಅಭ್ಯರ್ಥಿಗಳು ಅವರು ಪಡೆದ ಅಂಕ ಸೇರಿ ಕೆಲ ದಾಖಲೆ ಸಮೇತ ದೂರು ನೀಡಿದ್ದಾರೆ.