ಫಾರ್ಮ್-7 ಸಲ್ಲಿಸಿದ ಬಿಜೆಪಿ ಕಾರ್ಯಕರ್ತರ ವಿರುದ್ಧದ ಪ್ರಕರಣ ಹಿಂಪಡೆಯಬೇಕು
SIT ಹೆಸರಲ್ಲಿ ಬಿಜಪಿ ನಾಯಕರ ವಿರುದ್ಧ ದಬ್ಬಾಳಿಕೆ ಮಾಡಲು ಹೊರಟಿದ್ದೀರಾ
ಪೊಲೀಸ್ ವ್ಯವಸ್ಥೆಯನ್ನು ಮನಬಂದಂತೆ ಬಳಸಿಕೊಳ್ಳಲು ಸಾಧ್ಯವಿಲ್ಲ ಎಂದ ವಿಜಯೇಂದ್ರ
ಬೆಂಗಳೂರು: ಚುನಾವಣಾ ಆಯೋಗದ ನಿಯಮಾನುಸಾರ ಫಾರ್ಮ್-7 ಸಲ್ಲಿಸಿದ ಬಿಜೆಪಿ ಕಾರ್ಯಕರ್ತರ ಮೇಲೆ ರಾಜ್ಯ ಸರ್ಕಾರ ಪೊಲೀಸ್ ಇಲಾಖೆಯ ಮೂಲಕ ಎಫ್‌ಐಆರ್ ದಾಖಲಿಸಿರುವುದು ಖಂಡನೀಯ. ಈ ಪ್ರಕರಣಗಳನ್ನು ಕೂಡಲೇ ಹಿಂಪಡೆಯಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆಗ್ರಹಿಸಿದರು.
'ಡಿಜಿಪಿ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಹಾಗೂ ಸಚಿವರು ಚುನಾವಣಾ ಆಯೋಗದ ಮುಂದೆ ಧರಣಿ ನಡೆಸಿದ ಬಳಿಕ ಪೊಲೀಸರ ಮೇಲೆ ಒತ್ತಡ ಹೇರಿ ಫಾರ್ಮ್-7 ಸಲ್ಲಿಸಿದ ನಮ್ಮ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ' ಎಂದು ಆರೋಪಿಸಿದರು.
'ಫಾರ್ಮ್-7 ಸಲ್ಲಿಸುವುದು ಚುನಾವಣಾ ಆಯೋಗವೇ ನಾಗರಿಕರಿಗೆ ನೀಡಿರುವ ಕಾನೂನುಬದ್ಧ ಅವಕಾಶ. ಮತದಾರರ ಪಟ್ಟಿಯಲ್ಲಿ ಅನರ್ಹರು ಅಥವಾ ನಿಯಮಬಾಹಿರವಾಗಿ ಹೆಸರುಗಳಿದ್ದರೆ, ಯಾವುದೇ ವ್ಯಕ್ತಿ ಫಾರ್ಮ್-7 ಮೂಲಕ ಆಕ್ಷೇಪಣೆ ಸಲ್ಲಿಸಬಹುದು. ಅರ್ಜಿ ಪರಿಶೀಲಿಸಿದ ಬಳಿಕ ಅದು ಸರಿಯಾಗಿದ್ದರೆ ಚುನಾವಣಾ ಆಯೋಗ ಕ್ರಮ ಕೈಗೊಳ್ಳುತ್ತದೆ; ಆಕ್ಷೇಪಣೆ ಸಮರ್ಥವಾಗಿಲ್ಲದಿದ್ದರೆ ಅದನ್ನು ತಿರಸ್ಕರಿಸುತ್ತದೆ. ಇದು ಚುನಾವಣಾ ಪ್ರಕ್ರಿಯೆಯ ಸಹಜ ಭಾಗವಾಗಿದೆ' ಎಂದು ವಿಜಯೇಂದ್ರ ವಿವರಿಸಿದರು.
ಆದರೆ, ಈ ಪ್ರಕ್ರಿಯೆಯನ್ನು ದುರುಪಯೋಗಪಡಿಸಿಕೊಂಡು ಬಿಎನ್‌ಎಸ್ ಕಾಯ್ದೆಯಡಿ ಬಿಜೆಪಿ ಕಾರ್ಯಕರ್ತರ ಮೇಲೆ ಎಫ್‌ಐಆರ್ ದಾಖಲಿಸುವ ಮೂಲಕ ರಾಜ್ಯ ಸರ್ಕಾರ ಪೊಲೀಸ್ ಇಲಾಖೆಯನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದೆ ಎಂದು ಅವರು ಆರೋಪಿಸಿದರು.
ಇದನ್ನೂ ಓದಿ: ಕಾಂಗ್ರೆಸ್ ಪಾಳೆಯದಲ್ಲಿ ನಿರಾಸೆ ಮನೆಮಾಡಿದೆ; ವಿಜಯೇಂದ್ರ ವ್ಯಂಗ್ಯ!
'ನಾವು ಸುಮ್ಮನೆ ಕೂರುವುದಿಲ್ಲ. ನಮ್ಮ ಕಾರ್ಯಕರ್ತರ ರಕ್ಷಣೆಗೆ ಯಾವುದೇ ಹಂತಕ್ಕೂ ಹೋಗಲು ಸಿದ್ಧರಿದ್ದೇವೆ. ಅನ್ಯಾಯವಾಗಿ ದಾಖಲಿಸಿರುವ ಪ್ರಕರಣಗಳನ್ನು ಹಿಂಪಡೆಯಬೇಕು. ಇಲ್ಲವಾದರೆ ಪೊಲೀಸ್ ಠಾಣೆಗಳ ಮುಂದೆ ಪ್ರತಿಭಟನೆ ನಡೆಸುವುದು ಸೇರಿದಂತೆ ಹೋರಾಟಕ್ಕೆ ಇಳಿಯಬೇಕಾಗುತ್ತದೆ' ಎಂದು ವಿಜಯೇಂದ್ರ ಎಚ್ಚರಿಸಿದರು.
'ಎಸ್‌ಐಟಿ ರಚನೆ ಕುರಿತು ಮುಖ್ಯಮಂತ್ರಿ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ವಿಜಯೇಂದ್ರ, ಅಧಿಕಾರದಲ್ಲಿದ್ದೇವೆ ಎಂಬ ಕಾರಣಕ್ಕೆ ಪೊಲೀಸ್ ವ್ಯವಸ್ಥೆಯನ್ನು ಮನಬಂದಂತೆ ಬಳಸಿಕೊಳ್ಳಲು ಸಾಧ್ಯವಿಲ್ಲ 'ಎಂದು ತಿರುಗೇಟು ನೀಡಿದರು.
'ಮುಖ್ಯಮಂತ್ರಿಗಳು ಗೂಂಡಾಗಿರಿ, ದಾದಾಗಿರಿ ಮಾಡಲು ಹೊರಟಿದ್ದಾರೆ. ತಾವು ಕೊತ್ವಾಲ್ ಅವರ ಶಿಷ್ಯ ಎಂಬುದನ್ನು ಮತ್ತೆ ನೆನಪು ಮಾಡಿಕೊಳ್ಳಲು ಹೊರಟಂತಿದೆ. ಆದರೆ ಅಧಿಕಾರ ಯಾರಪ್ಪನ ಮನೆಯ ಆಸ್ತಿಯಲ್ಲ. ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುವುದನ್ನು ನಿಲ್ಲಿಸಬೇಕು' ಎಂದು ವಿಜಯೇಂದ್ರ ಹೇಳಿದರು.
'ರಾಜ್ಯ ಸರ್ಕಾರ ಇದೇ ಧೋರಣೆಯನ್ನು ಮುಂದುವರಿಸಿದರೆ ಬಿಜೆಪಿ ರಾಜ್ಯಾದ್ಯಂತ ಹೋರಾಟಕ್ಕೆ ಇಳಿಯಬೇಕಾಗುತ್ತದೆ. ಸರ್ಕಾರದ ಒತ್ತಡಕ್ಕೆ ಮಣಿದು ಕಾರ್ಯಕರ್ತರ ವಿರುದ್ಧ ದಾಖಲಿಸಿರುವ ಪ್ರಕರಣಗಳನ್ನು ಹಿಂಪಡೆಯುವ ಮೂಲಕ ಪೊಲೀಸ್ ಇಲಾಖೆಯ ಮೇಲೆ ರಾಜಕೀಯ ಹಸ್ತಕ್ಷೇಪಕ್ಕೆ ಅವಕಾಶ ನೀಡಬಾರದು' ಎಂದು ಅವರು ಒತ್ತಾಯಿಸಿದರು.
'ನಮ್ಮ ಕಾರ್ಯಕರ್ತರನ್ನು ರಕ್ಷಿಸುವುದು ನಮ್ಮ ಜವಾಬ್ದಾರಿ. ಅವರ ವಿರುದ್ಧದ ಪ್ರಕರಣಗಳನ್ನು ಹಿಂಪಡೆಯದಿದ್ದರೆ ರಾಜ್ಯಾದ್ಯಂತ ಹೋರಾಟವನ್ನು ತೀವ್ರಗೊಳಿಸುತ್ತೇವೆ' ಎಂದು ವಿಜಯೇಂದ್ರ ಎಚ್ಚರಿಸಿದರು, (ಏಜೆನ್ಸೀಸ್).