- ಕಲಬುರಗಿ ಪೀಠದ ಮಾಹಿತಿ ಆಯುಕ್ತ ವೆಂಕಟಸಿಂಗ್ ಹೇಳಿಕೆ
- ಏಪ್ರಿಲ್ನಲ್ಲಿ 229 ಪ್ರಕರಣ ವಿಲೇವಾರಿ
ಕಲಬುರಗಿ: ಸಕಾಲಕ್ಕೆ ಮಾಹಿತಿ ನೀಡಲು ನಿರ್ಲಕ್ಷ್ಯ ವಹಿಸುವುದು ಸೇರಿ ವಿಚಾರಣೆಗೆ ಗೈರು ಹಾಜರಾಗಿ ಆಯೋಗದ ನೋಟಿಸ್ಗೆ ಸ್ಪಂದಿಸದ ಕಲಬುರಗಿ ಜಿಪಂ ಉಪ ಕಾರ್ಯದರ್ಶಿ ಲಕ್ಷ್ಮಣ ಶೃಂಗೇರಿ, ಗಂಗಾವತಿ ತಾಲೂಕು ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಾನಾ ಅಭಿಯಂತರ ದೇವಣ್ಣ ಕಟ್ಟಿ, ರಾಯಚೂರು ತಾಲೂಕು ಗ್ರೇಡ್-2 ತಹಸೀಲ್ದಾರ್ ಪರಶುರಾಮ್ ಸೇರಿ ಹಲವು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳಿಗೆ ರಾಜ್ಯ ಮಾಹಿತಿ ಆಯೋಗದ ಕಲಬುರಗಿ ಪೀಠ ದಂಡ ವಿಧಿಸಿ ಆದೇಶ ಮಾಡಿದೆ ಎಂದು ಮಾಹಿತಿ ಆಯುಕ್ತ ಬಿ.ವೆಂಕಟಸಿಂಗ್ ತಿಳಿಸಿದ್ದಾರೆ.
ಏಪ್ರಿಲ್ನಲ್ಲಿ ನಡೆದ ವಿಚಾರಣೆ ವೇಳೆ ಗೈರು ಹಾಜರಾಗಿದ್ದೂ ಅಲ್ಲದೇ ಮಾಹಿತಿ ನೀಡದ ಕಾರಣ ಕಲಬುರಗಿ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಲಕ್ಷ್ಮಣ ಶೃಂಗೇರಿಗೆ 10 ಸಾವಿರ, ಗಂಗಾವತಿ ತಾಲೂಕು ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ದೇವಣ್ಣ ಕಟ್ಟಿಗೆ 15 ಸಾವಿರ, ರಾಯಚೂರು ತಾಲೂಕು ಗ್ರೇಡ್ 2 ತಹಸೀಲ್ದಾರ್ ಪರಶುರಾಮಗೆ 5 ಸಾವಿರ, ಜೇವರ್ಗಿ ತಾಲೂಕು ಹುಲ್ಲೂರ ಗ್ರಾಪಂ ಕಾರ್ಯದರ್ಶಿ ಮಲ್ಲಿಕಾರ್ಜುನ್ಗೆ 5 ಸಾವಿರ, ಸುರುಪುರ ತಾಲೂಕಿನ ಆಲ್ದಾಳ ಗ್ರಾ.ಪಂ. ಕಾರ್ಯದರ್ಶಿ ರಾಜಕುಮಾರ ಸುಬೇದಾರ್ಗೆ 10 ಸಾವಿರ, ಮಟ್ಟಿ ತಾಲೂಕಿನ ಆರೋಲಿ ಗ್ರಾಪಂ ಪಿಡಿಒ ರುನಾಥಗೆ 5 ಸಾವಿರ, ಆಳಂದ ತಾಲೂಕಿನ ಯಳಸಂಗಿ ಗ್ರಾಪಂ ಪಿಡಿಒ ಜಗದೀಶಗೆ 15 ಸಾವಿರ ರೂ. ದಂಡ ವಿಧಿಸಲಾಗಿದೆ.
ಸುರಪುರ ತಾಲೂಕಿನ ನಗನೂರು ಗ್ರಾಪಂ ಕಾರ್ಯದರ್ಶಿ ಮಡಿವಾಳಪ್ಪಗೆ 10 ಸಾವಿರ, ಶಹಪುರ ತಾಲೂಕಿನ ಗೋಗಿ.ಕೆ. ಗ್ರಾಪಂ ಪಿಡಿಒ ಸಿದ್ರಾಮಗೆ 10 ಸಾವಿರ, ಸಂಡೂರು ತಾಲೂಕಿನ ಹೊಸದರೋಜ ಗ್ರಾಪಂ ಕಾರ್ಯದರ್ಶಿ ಕಲ್ಲಪ್ಪಗೆ 10 ಸಾವಿರ, ಯಾದಗಿರ ತಾಲೂಕಿನ ಸೈದಾಪುರ ಗ್ರಾಪಂ ಪಿಡಿಒ ಮುದುಕಪ್ಪಗೆ 10 ಸಾವಿರ, ವಡಗೇರಾ ತಾಲೂಕಿನ ತಡಿಬಿಡಿ ಗ್ರಾಪಂ ಕಾರ್ಯದರ್ಶಿ ಯಂಕನಗೌಡಗೆ 5 ಸಾವಿರ, ಕಾರಟಗಿ ತಾಲೂಕಿನ ಸಿದ್ದಾಪುರ ಗ್ರಾಪಂ ಕಾರ್ಯದರ್ಶಿ ಜ್ಯೋತಿ ರೆಡ್ಡರ್ಗೆ 10 ಸಾವಿರ, ಕಲಬುರಗಿ ತಾಲೂಕು ಹಾಗಾರಗ ಗ್ರಾಪಂ ಕಾರ್ಯದರ್ಶಿ ವೇದಾಂಗಗೆ 5 ಸಾವಿರ, ಲಿಂಗಸೂಗೂರು ತಾಲೂಕಿನ ಪೈದೊಡ್ಡಿ ಗ್ರಾಪಂ ಕಾರ್ಯದರ್ಶಿ ಭೀಮಣ್ಣಗೆ 10 ಸಾವಿರ, ಯಾದಗಿರ ತಾಲೂಕಿನ ರಾಮಸಮುದ್ರ ಗ್ರಾಪಂ ಕಾರ್ಯದರ್ಶಿ ಗಾಲಿಬಸಾಬ್ಗೆ 5 ಸಾವಿರ ಹಾಗೂ ರಾಯಚೂರು ತಾಲೂಕಿನ ಗ್ರೇಡ್-2 ತಹಶೀಲದಾರ್ ಪರುಶುರಾಮಗೆ 5 ಸಾವಿರ ಸೇರಿ ಒಟ್ಟು 18 ಅಧಿಕಾರಿಗಳಿಗೆ 1.50 ಲಕ್ಷ ರೂ. ದಂಡ ವಿಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಏಪ್ರಿಲ್ನಲ್ಲಿ 564 ಪ್ರಕರಣ ವಿಚಾರಣೆಗೆ ಕೈಗೆತ್ತಿಕೊಂಡು 229 ಪ್ರಕರಣ ವಿಲೇವಾರಿ ಮಾಡಲಾಗಿದೆ. ತಾವು ಅಧಿಕಾರ ಸ್ವೀಕರಿಸಿದ ಬಳಿಕ ಒಟ್ಟು 3084 ಪ್ರಕರಣ ಕೈಗೆತ್ತಿಕೊಂಡು 88 ದಿನ ವಿಚಾರಣೆ ನಡೆಸಿ 1308 ಪ್ರಕರಣ ವಿಲೇವಾರಿ ಮಾಡಲಾಗಿದೆ ಎಂದು ಹೇಳಿದ್ದಾರೆ.
"
ಪ್ರಕರಣಗಳ ತ್ವರಿತ ವಿಲೇವಾರಿಗೆ ಅನೂಕೂಲವಾಗಲು ಅಧಿಕಾರಿಗಳಿಗೆ ಮಾಹಿತಿ ಹಕ್ಕು ಅಧಿನಿಯಮ ಕುರಿತು ಅರಿವು ಮೂಡಿಸಲು ಈಗಾಗಲೇ ಬಳ್ಳಾರಿ, ಬೀದರ್, ಕಲಬುರಗಿ ಹಾಗೂ ಕೊಪ್ಪಳದಲ್ಲಿ ಕಾರ್ಯಾಗಾರ ಆಯೋಜಿಸಲಾಗಿತ್ತು. ಈ ತಿಂಗಳ 30ರಂದು ವಿಜಯನಗರ ಜಿಲ್ಲೆಯಲ್ಲಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.
— ಬಿ.ವೆಂಕಟಸಿಂಗ್, ಮಾಹಿತಿ ಆಯುಕ್ತ, ಕಲಬುರಗಿ ಪೀಠ.