ಸಿಂಧನೂರಿನ ಬಸ್ ನಿಲ್ದಾಣದ ರಸ್ತೆ ಮಾರ್ಗದಲ್ಲಿ ಅಡ್ಡಾದಿಡ್ಡಿಯಾಗಿ ನಿಲ್ಲಿಸಿದ ಬೈಕ್ ಮಾಲೀಕರಿಗೆ ದಂಡ ವಿಧಿಸುತ್ತಿರುವ ಪೊಲೀಸರು. ಡಿವೈಎಸ್ಪಿ ಚಂದ್ರಶೇಖರ ನಾಯಕ, ಪಿಐ ವೀರಾರಡ್ಡಿ ಇದ್ದರು.
- ಸಂಚಾರ ನಿಯಮ ಉಲ್ಲಂಘಿಸಿದರೆ ಕ್ರಮ
- ಬೈಕ್ ಸವಾರರಿಗೆ ಡಿವೈಎಸ್ಪಿ ಚಂದ್ರಶೇಖರ ನಾಯಕ ಎಚ್ಚರಿಕೆ
ಸಿಂಧನೂರು: ನಗರದಲ್ಲಿ ವಾಹನ ಸಂಚಾರ ನಿಯಮ ಉಲ್ಲಂಘನೆ ಹಾಗೂ ಅಪಘಾತಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯ ಪೊಲೀಸರು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದಾರೆ.
ಡಿವೈಎಸ್ಪಿ ಚಂದ್ರಶೇಖರ ಜಿ. ನಾಯಕ ಹಾಗೂ ಪಿಐ ವೀರಾರಡ್ಡಿ, ನಗರದಲ್ಲಿ ಪ್ರಮುಖ ವೃತ್ತಗಳು ಹಾಗೂ ಜನಸಂದಣಿ ಪ್ರದೇಶಗಳಲ್ಲಿ ರೌಂಡ್ಸ್ ನಡೆಸಿದರು. ಟ್ರಾಫಿಕ್ ನಿಯಮ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದರು.
ಇಲ್ಲಿನ ಸುಕಲಪೇಟೆ, ಗಾಂಧಿ ಸರ್ಕಲ್, ಚನ್ನಮ್ಮ ಸರ್ಕಲ್ ಇತರ ಪ್ರದೇಶಗಳಲ್ಲಿ ಸಂಚರಿಸಿ ನಿಯಮ ಉಲ್ಲಂಘನೆ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಡಿವೈಎಸ್ಪಿ ಎಚ್ಚರಿಕೆ ನೀಡಿದರು.
ಸಿಂಧನೂರಿನಲ್ಲಿ ಈಗಾಗಲೇ 101 ಸಿಸಿ ಕ್ಯಾಮರಾಗಳು ಕಾರ್ಯಾರಂಭ ಮಾಡಿದ್ದು, ಪ್ರಮುಖ ರಸ್ತೆಗಳು, ವೃತ್ತಗಳು, ವ್ಯಾಪಾರ ಪ್ರದೇಶಗಳು ಸಂಪೂರ್ಣ ನಿಗಾದಲ್ಲಿವೆ. ಹೆಲ್ಮೆಟ್ ಧರಿಸದಿರುವುದು, ಸೀಟ್ ಬೆಲ್ಟ್ ಹಾಕದಿರುವುದು, ನೋ ಪಾರ್ಕಿಂಗ್ ಪ್ರದೇಶಗಳಲ್ಲಿ ವಾಹನ ನಿಲ್ಲಿಸುವುದು, ಸಿಗ್ನಲ್ ಉಲ್ಲಂಘನೆ, ಅತಿವೇಗ ಚಾಲನೆ ಎಲ್ಲವೂ ಕ್ಯಾಮರಾದಲ್ಲಿ ಸೆರೆಯಾಗಲಿದ್ದು, ವಾಹನ ಮಾಲೀಕರ ಮನೆಗೆ ನೇರವಾಗಿ ದಂಡದ ನೋಟಿಸ್ ಕಳಿಸಲಾಗುತ್ತದೆ ಎಂದು ಡಿವೈಎಸ್ಪಿ ತಿಳಿಸಿದರು.