ವಿಜಯಪುರದ ಜನವಸತಿ ಪ್ರದೇಶದ ಮನೆಗಳ ಮುಂದೆಯೇ ಸುರಿದ ಕಸವನ್ನು ಪೌರಕಾರ್ಮಿಕರು ಸ್ವಚ್ಛಗೊಳಿಸಿದರು. 
ರಾಜ್ಯ

ಎಲ್ಲೆಂದರಲ್ಲಿ ಕಸ ಎಸೆದರೆ ದಂಡ / VIJAYAPUR

ಬೆಂಗಳೂರು ಗ್ರಾಮಾಂತರ ಡೆಸ್ಕ್
ವಿಜಯಪುರ : ಸಾರ್ವಜನಿಕ ಸ್ಥಳದಲ್ಲಿ ತ್ಯಾಜ್ಯ ಎಸೆಯುವುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿರುವ ಪುರಸಭೆ ದಂಡ ವಿಧಿಸುವುದಾಗಿ ಎಚ್ಚರಿಸಿ ಬ್ಯಾನರ್​ ಅಳವಡಿಸಲು ಮುಂದಾಗಿದೆ. ಹೌದು. ಪಟ್ಟಣವನ್ನು ಸುಂದರವಾಗಿಡಲು ಪೌರಕಾರ್ಮಿಕರು ಹಗಲಿರುಳು ಶ್ರಮಿಸುತ್ತಿದ್ದರೆ, ಇನ್ನೊಂದೆಡೆ ಕೆಲ ಕಿಡಿಗೇಡಿಗಳು ರಸ್ತೆ ಬದಿಗಳಲ್ಲಿ ಕಸ ಸುರಿದು ಪೌರಕಾರ್ಮಿಕರ ತಾಳ್ಮೆ ಪರೀಸುತ್ತಿದ್ದಾರೆ.
ಬೆಳಗ್ಗೆ ಜನವಸತಿ ಪ್ರದೇಶದ ಮನೆಗಳ ಮುಂದೆಯೇ ಕಸ ಸುರಿಯುವ ಕಿಡಿಗೇಡಿಗಳ ಕೃತ್ಯದಿಂದಾಗಿ ಪೌರಕಾರ್ಮಿಕರು ಅದನ್ನು ಎತ್ತಲು ಗಂಟೆಗಟ್ಟಲೆ ಶ್ರಮಪಡಬೇಕಾಗಿದೆ. ಅಧಿಕಾರಿಗಳು ಕಚೇರಿಯಲ್ಲಿ ಕೂರುವ ಬದಲು ಇಂತಹವರನ್ನು ಪತ್ತೆ ಹಚ್ಚಿ ಬೀದಿಗಳಲ್ಲೇ ದಂಡ ವಿಧಿಸಬೇಕು ಎಂದು ಸಾರ್ವಜನಿಕರ ಆಗ್ರಹದ ಬೆನ್ನಲ್ಲೇ ಬ್ಯಾನರ್​ ಅಳವಡಿಸುತ್ತಿದೆ.
ಇನ್ನು ಮುಂದೆ ರಸ್ತೆ ಬದಿ ಕಸ ಹಾಕುವವರ ಫೋಟೋ ತೆಗೆದು ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಪ್ರದರ್ಶಿಸಬೇಕು. ಅವರಿಗೆ ದಂಡ ವಿಧಿಸಿ ಶಿೆಯ ಎಚ್ಚರಿಕೆ ನೀಡಬೇಕು. ಇಲ್ಲವಾದರೆ ವಿಜಯಪುರ ಪಟ್ಟಣ ಸುಂದರ ನಗರವಾಗುವ ಬದಲು ಕಸದ ನಗರವಾಗಿ ಬದಲಾಗುವುದರಲ್ಲಿ ಸಂಶಯವಿಲ್ಲ ಎಂದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಪಟ್ಟಣದ ಸುಬ್ಬಮ್ಮ ಚೆನ್ನಪ್ಪ ಸಮುದಾಯ ಭವನ ರಸ್ತೆಯಲ್ಲಿ ಡೇರಿ ಮುಂಭಾಗದಲ್ಲಿ ಸಾರ್ವಜನಿಕರು ಕಸ ಹಾಕಿದ್ದ ಜಾಗದಲ್ಲಿ ಸ್ವಚ್ಛಗೊಳಿಸಿ ಪುರಸಭೆಯಿಂದ ಕಸ ಹಾಕುವವರಿಗೆ ದಂಡ ವಿಧಿಸಲಾಗುತ್ತದೆ ಎಂಬ ಬ್ಯಾನರ್​ ಅಳವಡಿಸಲಾಗಿದೆ.

ಪಟ್ಟಣದಲ್ಲಿ ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಹಾಕಬಾರದೆಂಬ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಗಳು ನಡೆಯುತ್ತಿದ್ದು, ಕಸ ಹಾಕುವ ಜಾಗ ಗುರುತಿಸಿ ಸ್ವಚ್ಛಗೊಳಿಸಿ ಕಸ ಹಾಕುವವರಿಗೆ 500 ರೂ. ದಂಡ ವಿಧಿಸಲಾಗುತ್ತದೆ ಎಂದು ಬ್ಯಾನರ್​ ಅಳವಡಿಸಲಾಗುತ್ತಿದೆ. ನಮ್ಮ ಊರು ಸ್ವಚ್ಛವಾಗಿರಬೇಕೆಂಬ ಮನಸ್ಥಿತಿ ಇಲ್ಲದ ಸಾರ್ವಜನಿಕರನ್ನು ತಿದ್ದುವುದು ಕಷ್ಟವಾಗಿದೆ.

ಪುರಸಭೆ ಅಧಿಕಾರಿಗಳು ಹಾಗೂ ಪೌರಕಾರ್ಮಿಕರು ಪಟ್ಟಣದ ಸ್ವಚ್ಛತೆಗೆ ಶ್ರಮಿಸುತ್ತಿದ್ದು, ಈಗಾಗಲೇ ಬಹಳಷ್ಟು ಕಡೆ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಮುಂದಿನ ದಿನಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕುವವರು ಯಾರೇ ಆಗಿದ್ದರೂ ಅವರನ್ನು ಗುರುತಿಸಿ ಅವರ ಮನೆಗಳ ಮುಂದೆ ಕಸ ಸುರಿಯುವ ಕ್ರಮ ಕೈಗೊಳ್ಳಲಾಗುತ್ತದೆ.