Portfolio Allocation 
ರಾಜ್ಯ

ಸಿಎಂ ಕೈನಲ್ಲೇ ಹಣಕಾಸು; ಪರಮೇಶ್ವರ್‌ಗೆ ಕಂದಾಯ, ಖರ್ಗೆಗೆ ಗೃಹ ಖಾತೆ

ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಜತೆ ಪ್ರಮಾಣ ವಚನ ಸ್ವೀಕರಿಸಿದ್ದ ಸಚಿವರಿಗೆ ಗುರುವಾರ ಖಾತೆ ಹಂಚಿಕೆಯಾಗಿದೆ. ಹಣಕಾಸು ಖಾತೆಯನ್ನು ಸಿಎಂ ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ. ಚರ್ಚೆಯಲ್ಲಿದ್ದಂತೆ ಉಪ ಮುಖ್ಯಮಂತ್ರಿ ಜಿ. ಪರಮೇಶ್ವ‌ರ್ ಅವರಿಗೆ ಕಂದಾಯ ಹಾಗೂ ಯುವಜನ ಸೇವೆ, ಕ್ರೀಡಾ ಇಲಾಖೆ ಹಂಚಿಕೆ ಮಾಡಿದ್ದರೆ, ಪ್ರಿಯಾಂಕ್ ಖರ್ಗೆ ಅವರಿಗೆ ಐಟಿಬಿಟಿ ಜತೆಗೆ ಗೃಹ ಇಲಾಖೆ ಜವಾಬ್ದಾರಿ ನೀಡಲಾಗಿದೆ. ಈ ಹಿಂದೆ ಡಿ.ಕೆ.ಶಿವಕುಮಾರ್ ನಿಭಾಯಿಸುತ್ತಿದ್ದ ಜಲಸಂಪನ್ಮೂಲ ಖಾತೆಯನ್ನು ರಾಮಲಿಂಗಾ ರೆಡ್ಡಿ ಅವರಿಗೆ ಹಾಗೂ ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನು ಕೃಷ್ಣಬೈರೇಗೌಡರಿಗೆ ವಹಿಸಲಾಗಿದೆ. ಎಂ.ಬಿ.ಪಾಟೀಲ, ಕೆ.ಎಚ್. ಮುನಿಯಪ್ಪ, ಸತೀಶ್ ಜಾರಕಿಹೊಳಿ ಅವರಿಗೆ ಈ ಹಿಂದೆ ನಿಭಾಯಿಸುತ್ತಿದ್ದ ಖಾತೆಯಲ್ಲೇ ಮುಂದುವರಿಯಲು ಅವಕಾಶ ನೀಡಿದ್ದರೆ, ಪ್ರಿಯಾಂಕ್ ಖರ್ಗೆ ಹಾಗೂ ಕೆ.ಜೆ. ಜಾರ್ಜ್ ಅವರಿಗೆ ಹೆಚ್ಚುವರಿ ಖಾತೆ ಸಿಕ್ಕಿದೆ.

ಯಾರಿಗೆ ಯಾವ ಖಾತೆ..?

  • ಜಿ.ಪರಮೇಶ್ವರ್ ಕಂದಾಯ, ಕ್ರೀಡೆ
  • ಪ್ರಿಯಾಂಕ್ ಖರ್ಗೆ ಗೃಹ, ಐಟಿಬಿಟಿ
  • ಈಶ್ವರ ಖಂಡ್ರೆ ಗ್ರಾಮೀಣಾಭಿವೃದ್ಧಿ
  • ರಾಮಲಿಂಗಾರೆಡ್ಡಿ ಜಲಸಂಪನ್ಮೂಲ
  • ಯು.ಟಿ. ಖಾದರ್ ಆರೋಗ್ಯ
  • ಕೆ.ಎಚ್. ಮುನಿಯಪ್ಪ ಆಹಾರ
  • ಶರಣ ಪ್ರಕಾಶ್ ಪಾಟೀಲ್ ವೈದ್ಯಕೀಯ ಶಿಕ್ಷಣ
  • ಎಂ ಬಿ ಪಾಟೀಲ್​ ಬೃಹತ್ ಕೈಗಾರಿಕೆ
  • ಯತೀಂದ್ರ ಸಿದ್ದರಾಮಯ್ಯ ನಗರಾಭಿವೃದ್ಧಿ
  • ಕೃಷ್ಣ ಬೈರೇಗೌಡ ಬೆಂಗಳೂರು ಅಭಿವೃದ್ಧಿ
  • ಸತೀಶ್ ಜಾರಕಿಹೊಳಿ ಲೋಕೋಪಯೋಗಿ
  • ಕೆ ಜೆ ಜಾರ್ಜ್​ ಇಂಧನ, ಪ್ರವಾಸೋದ್ಯಮ
  • ಭೈರತಿ ಸುರೇಶ್ ಸಾರಿಗೆ
ಬೆಂಗ್ಳೂರೇ ಬೇಕು, ರಾಜೀನಾಮೆಗೂ ಸಿದ್ಧ!
ಹಿರಿಯ ಸಚಿವ ರಾಮಲಿಂಗಾ ರೆಡ್ಡಿ ಅವರು ತಮಗೆ ಬೆಂಗಳೂರು ನಗರಾಭಿವೃದ್ಧಿ ಖಾತೆಯೇ ಬೇಕೆಂದು ಹಠ ಹಿಡಿದಿದ್ದಾರೆ. ಗುರುವಾರ ಬೆಳಗ್ಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾ‌ರ್ ಅವರನ್ನು ಭೇಟಿ ಮಾಡಿ, ಕೊಡುವುದಾದರೆ ಬೆಂಗಳೂರು ನಗರಾಭಿವೃದ್ಧಿ ಖಾತೆ ಕೊಡಿ, ಇಲ್ಲವಾದರೆ ನಾನು ಸಚಿವ ಸಂಪುಟದಿಂದ ಹೊರಗೆ ಇರುತ್ತೇನೆಂದು ಹೇಳಿಬಂದಿದ್ದಾರೆ. ಮಧ್ಯಾಹ್ನ ಅವರೊಂದಿಗೆ ಸಮಾಲೋಚನೆ ಕೂಡ ನಡೆಸಿದ ಸಿಎಂ ಮನವೊಲಿಕೆ ಪ್ರಯತ್ನ ಮಾಡಿದರು. ಕೊನೆಗೆ, ಹೈಕಮಾಂಡ್ ತೀರ್ಮಾನದಂತೆ ಖಾತೆ ಹಂಚಿಕೆಯಾಗಿದೆ ಎಂದು ಸ್ಪಷ್ಟಪಡಿಸಿದರು.