ಕೊನೆಗೂ ತುಳು ಭಾಷೆಗೆ ಮಾನ್ಯತೆ ನಿರೀಕ್ಷೆ 
ರಾಜ್ಯ

ಕೊನೆಗೂ ತುಳು ಭಾಷೆಗೆ ಮಾನ್ಯತೆ ನಿರೀಕ್ಷೆ: 2ನೇ ಅಧಿಕೃತ ಭಾಷೆಯಾಗಿ ಇಂದು ಸಂಪುಟ ಸಭೆಯಲ್ಲಿ ತೀರ್ಮಾನಿಸುವ ಸಾಧ್ಯತೆ

ರಾಜ್ಯದ ಅಧಿಕೃತ ಭಾಷೆಯನ್ನಾಗಿ ತುಳುವನ್ನು ಪರಿಗಣಿಸುವಂತೆ ಕಳೆದ 50 ವರ್ಷಗಳಿಂದ ನಡೆಸುತ್ತಿರುವ ಹೋರಾಟ ಫಲಪ್ರದವಾಗುವ ಕಾಲ ಸನ್ನಿಹಿತವಾಗಿದೆ. ರಾಜ್ಯ ಸರ್ಕಾರ ತುಳುವಿಗೆ ರಾಜ್ಯದ ಎರಡನೇ ಅಧಿಕೃತ ಭಾಷೆಯ ಮಾನ್ಯತೆ ನೀಡಲು ಶುಕ್ರವಾರ ಮಂಗಳೂರಿನಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ. ಸಮಸ್ತ ತುಳು ಭಾಷಿಕರ ಪಾಲಿಗೆ ಇದು ಅತ್ಯಂತ ಮಹತ್ವದ ಆಡಳಿತಾತ್ಮಕ ಬೆಳವಣಿಗೆಯಾಗಿದೆ. ಇದರೊಂದಿಗೆ ಬಹುಕಾಲದಿಂದ ತುಳುವರಲ್ಲಿದ್ದ ನಿರೀಕ್ಷೆಗಳೂ ಗರಿಗೆದರಿವೆ. ರಾಜ್ಯದ ಎರಡನೇ ಅಧಿಕೃತ ಭಾಷೆಯಾಗಿ ತುಳುವಿಗೆ ಮಾನ್ಯತೆ ಲಭಿಸಿದರೆ ವಸತಿ, ಉದ್ಯೋಗ, ಶಿಕ್ಷಣ, ವಿದ್ಯಾರ್ಥಿವೇತನ, ಕಡಿಮೆ ಬಡ್ಡಿ, ರಿಯಾಯಿತಿ ಸವಲತ್ತುಗಳನ್ನು ಪಡೆಯುವ ಅರ್ಹತೆ ಅಲ್ಪಸಂಖ್ಯಾತ ಭಾಷಿಗರಾದ ತುಳುವರಿಗೆ ಲಭಿಸಲಿದೆ. ರಾಜ್ಯ ಸರ್ಕಾರ ರಾಜ್ಯ ಮತ್ತು ಜಿಲ್ಲಾಮಟ್ಟದಲ್ಲಿ ನೇಮಿಸುವ ಸಲಹಾ ಮಂಡಳಿಯಲ್ಲಿ ಅರ್ಹತೆಯ ಆಧಾರದ ಮೇಲೆ ತುಳುವರ ನೇಮಕ ನಡೆಯಲು ಅನುಕೂಲವಾಗುತ್ತದೆ. ಸರ್ಕಾರದ ಪ್ರಕಟಣೆಗಳು, ಸುತ್ತೋಲೆಗಳು ತುಳುವಿನಲ್ಲೂ ಪ್ರಕಟವಾಗುತ್ತವೆ.
ಬ್ಯಾಂಕಿಂಗ್​, ನ್ಯಾಯಾಂಗ ವ್ಯವಸ್ಥೆ, ವಿವಿಧ ಇಲಾಖೆಗಳೊಂದಿಗೆ ಸಂವಹನ ಸುಲಭವಾಗುತ್ತದೆ. ಆಡಳಿತ, ವ್ಯವಹಾರಗಳು ಹೆಚ್ಚು ಜನಸ್ನೇಹಿಯಾಗುತ್ತವೆ. ತುಳುವಿನ ಜಾನಪದ, ನಾಟಕ, ಯಕ್ಷಗಾನ, ಸಿನಿಮಾ ಮತ್ತು ಇನ್ನಿತರ ಸಾಂಸ್ಕೃತಿಕ ರಂಗದ ಚಟುವಟಿಕೆಗಳಿಗೆ ಅನುದಾನ ದೊರೆಯುತ್ತದೆ. ರಾಜ್ಯದ ಸಾಂಸ್ಕೃತಿಕ ಉತ್ಸವಗಳಲ್ಲಿ ತುಳು ಕಲಾವಿದರು ಪಾಲ್ಗೊಳ್ಳಲು ಅಧಿಕೃತ ಅವಕಾಶ ಲಭಿಸುವ ಜತೆಗೆ ತುಳು ಭಾಷೆ, ಸಂಸ್ಕೃತಿಗಾಗಿ ದುಡಿಯುವ ಸಂಸ್ಥೆ, ಸಂಘಟನೆಗಳಿಗೆ ಅನುದಾನ ದೊರೆಯುತ್ತದೆ. ಸರ್ಕಾರಿ ಪ್ರಶಸ್ತಿ ನೀಡುವಾಗ ತುಳು ಭಾಷಿಗರಿಗೂ ಆದ್ಯತೆ ಲಭಿಸುತ್ತದೆ. ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಅಧಿಕೃತ ಭಾಷೆಯಾಗಿ ಸೇರ್ಪಡೆಗೂ ಇದು ಪೂರಕವಾಗಲಿದೆ.
ಹೋರಾಟದ ಹಾದಿ: ತುಳುವನ್ನು ಅಧಿಕೃತ ಭಾಷೆಯನ್ನಾಗಿ ಪರಿಗಣಿಸುವಂತೆ ತುಳುನಾಡಿನಾದ್ಯಂತ ಅನೇಕ ವರ್ಷಗಳಿಂದ ವಿವಿಧ ರೀತಿಯ ಹೋರಾಟ ನಡೆಯುತ್ತಿವೆ. ತುಳುನಾಡಿನ ಸಂ, ಸಂಸ್ಥೆಗಳು, ರಾಜಕೀಯ ಮತ್ತು ರಾಜಕೀಯೇತರ ಸಂಘಟನೆಗಳು ಈ ಹೋರಾಟದಲ್ಲಿ ಕೈಜೋಡಿಸಿವೆ. ಹಲವಾರು ಮನವಿ ಸಲ್ಲಿಸಲಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ತುಳು ಅಧಿಕೃತ ಭಾಷೆ ಬಗೆಗಿನ ಅಭಿಪ್ರಾಯವನ್ನು ಸಂಸದೀಯ ಇಲಾಖೆಯಲ್ಲಿ ಮಂಡಿಸಿ ಕಾನೂನು ಇಲಾಖೆ ಮುಂದಿಟ್ಟಿತ್ತು. ರಾಜ್ಯ ಸರ್ಕಾರಕ್ಕೆ ಸಂವಿಧಾನದ ಅನುಚ್ಛೇದ 345, 346 ಮತ್ತು 347ರಡಿ ಒಂದಕ್ಕಿಂತ ಹೆಚ್ಚು ಭಾಷೆಯನ್ನು ರಾಜ್ಯದ ಅಧಿಕೃತ ಭಾಷೆಯೆಂದು ಘೋಷಿಸುವ ಅಧಿಕಾರವಿದೆ ಎಂದು ಕಾನೂನು ಇಲಾಖೆ ಸ್ಪಷ್ಟಪಡಿಸಿತ್ತು.
ಕಾನೂನಿನ ಚೌಕಟ್ಟಿನಲ್ಲಿ ಆಗುವ ಸಾಧಕ-ಬಾಧಕಗಳ ಬಗ್ಗೆ ಅಧ್ಯಯನ ಮಾಡಲು ತರ ಸಮಿತಿ ರಚಿಸಿ ವಾಸ್ತವಾಂಶದ ವರದಿಯನ್ನು ಸೂಕ್ತ ಶಿಫಾರಸಿನೊಂದಿಗೆ ಸಲ್ಲಿಸಲು ಕನ್ನಡ ಸಂಸ್ಕೃತಿ ಇಲಾಖೆ ನಿರ್ದೇಶಕರಿಗೆ ಸೂಚಿಸಿತ್ತು. ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ ಅಂದಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾಗಿದ್ದ ಸುನೀಲ್​ ಕುಮಾರ್​ ನಿರ್ದೇಶನದಲ್ಲಿ ಡಾ.ಎಂ.ಮೋಹನ ಆಳ್ವ ನೇತೃತ್ವದ ಅಧ್ಯಯನ ಸಮಿತಿ ರಚಿಸಿತ್ತು. ಆ ಸಮಿತಿ ರಾಜ್ಯದ ಅಧಿಕೃತ ಭಾಷೆಯಾಗಲು ತುಳು ಅತ್ಯಂತ ಯೋಗ್ಯ ಎಂಬ ಮಹತ್ವಪೂರ್ಣ ಮಾಹಿತಿ ಒದಗಿಸಿತ್ತು. ಆ ವರದಿಯನ್ನು ಕಾನೂನು ಇಲಾಖೆಗೆ ಸಲ್ಲಿಸಲಾಗಿದೆ. ಪ್ರಸ್ತುತ ತುಳುವಿಗೆ ಎರಡನೇ ಅಧಿಕೃತ ಭಾಷೆಯ ಮಾನ್ಯತೆ ದೊರೆಯಲು ಈ ವರದಿಯೂ ಕಾರಣವಾಗಲಿದೆ.

ಲಿಪಿ, ಅಕಾಡೆಮಿ ಇದೆ

ತುಳು ಪ್ರಾಚಿನತೆ, ವ್ಯಾಪ್ತಿ, ಲಿಪಿ, ಅಕಾಡೆಮಿ ಹೊಂದಿದೆ. ಶಾಲೆಗಳಲ್ಲೂ ಐಚ್ಛಿಕ ಭಾಷೆಯನ್ನಾಗಿ ತುಳುವನ್ನು ಬೋಧಿಸಲಾಗುತ್ತಿದೆ. 2017-18ನೇ ಸಾಲಿನಲ್ಲಿ ಮಂಗಳೂರು ವಿವಿ ತುಳು ಎಂಎ ಆರಂಭಿಸಿದೆ. ಸಾಹಿತ್ಯಪರ ಸಮೃದ್ಧ ಕಾರ್ಯಗಳು ಈಗಾಗಲೇ ನಡೆದಿವೆ. ಗೂಗಲ್​ನಲ್ಲಿ ತುಳು ಭಾಷಾಂತರ ಆಯ್ಕೆ ಅವಕಾಶ ಲಭಿಸಿದೆ. ಈ ಹಿನ್ನೆಲೆಯಲ್ಲಿ ತುಳು ಆದ್ಯತೆಯಾಗಿ ಪರಿಗಣನೆಯಾಗಲಿದೆ.

ಇತರ ರಾಜ್ಯಗಳ ಮಾದರಿ ಅಧ್ಯಯನ

ಕಾನೂನು ಇಲಾಖೆ ಒಂದಕ್ಕಿಂತ ಹೆಚ್ಚು ಅಧಿಕೃತ ಭಾಷೆ ಅಳವಡಿಸಿಕೊಂಡಿರುವ ರಾಜ್ಯ ಸರ್ಕಾರಗಳ ಮಾಹಿತಿ ಹಾಗೂ ಆ ಬಗೆಗಿನ ವಿವರವನ್ನು ಪಡೆದುಕೊಳ್ಳುವಂತೆ ಸೂಚಿಸಿತ್ತು. ಅದರಂತೆ ಸರ್ಕಾರ ಬಿಹಾರ, ಪಶ್ಚಿಮ ಬಂಗಾಲ ಮತ್ತು ಆಂಧ್ರಪ್ರದೇಶದಿಂದ ಮಾಹಿತಿ ಒದಗಿಸುವಂತೆ ಕೇಳಿಕೊಂಡಿತ್ತು. ಇದರಲ್ಲಿ ಆಂಧ್ರ ಪ್ರದೇಶ ಸೂಕ್ತ ಮಾಹಿತಿ ನೀಡಿತಾದರೂ, ಬಿಹಾರ, ಪಶ್ಚಿಮ ಬಂಗಾಲ ಸಮರ್ಪಕ ವರದಿ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಪುತ್ತೂರು ಶಾಸಕ ಅಶೋಕ ಕುಮಾರ್​ ರೈ ಸ್ವಂತ ಖರ್ಚಿನಲ್ಲಿ ಐವರು ಅಧಿಕಾರಿಗಳನ್ನು ಆ ರಾಜ್ಯಕ್ಕೆ ಕಳುಹಿಸಿ ಸಂಶೋಧನಾತ್ಮಕ ವರದಿ ಸಿದ್ಧಪಡಿಸಿ ವರದಿ ಸಲ್ಲಿಸಿದ್ದರು.
ಶೈಕ್ಷಣಿಕ
ಶಾಲೆಗಳಲ್ಲಿ ಪ್ರಾಥಮಿಕ ಮತ್ತು ಪ್ರೌಢಹಂತದಲ್ಲಿ ತುಳುವನ್ನು ಅಧಿಕೃತವಾಗಿ ಕಲಿಸಬಹುದು. ಈ ಮೂಲಕ ಪಂಚದ್ರಾವಿಡ ಭಾಷೆಗಳಲ್ಲಿ ಒಂದು ಎಂಬ ಹಿರಿಮೆ ಹೊಂದಿರುವ ತುಳುವಿನ ಭವ್ಯ ಪರಂಪರೆಯನ್ನು ಮುಂದಿನ ಪೀಳಿಗೆಗೆ ದಾಟಿಸುವ ಕಾರ್ಯ ಸುಲಭವಾಗಲಿದೆ.
ಸಾಹಿತ್ಯ
ಸಾಹಿತ್ಯ ಅಕಾಡೆಮಿ ಅಧಿಕೃತವಾಗಿ ತುಳು ವಿಗೆ ಮಾನ್ಯತೆ ಕೊಡಬಹುದು. ತುಳು ಭಾಷೆಯಲ್ಲಿರುವ ಪುಸ್ತಕಗಳನ್ನು ಇತರ ಪ್ರಮುಖ ಭಾರತೀಯ ಭಾಷೆಗಳಿಗೆ ಭಾಷಾಂತರಿಸುವುದು ಸಾಧ್ಯವಾಗಲಿದೆ. ತುಳು ಲಿಪಿಯಲ್ಲಿರುವ ಸಹಸ್ರಾರು ತಾಳೆಗ್ರಂಥಗಳಿಗೆ ಅಧಿಕೃತ ಮಾನ್ಯತೆ ಸಿಗುತ್ತದೆ. ತುಳು ಭಾಷೆಯ ಕೃತಿಗಳನ್ನೂ ಪ್ರಶಸ್ತಿ, ಬಹುಮಾನಗಳಿಗೆ ಮಾನ್ಯ ಮಾಡಲಾಗುತ್ತದೆ.
ಸ್ಪರ್ಧಾತ್ಮಕ ಪರೀಕ್ಷೆ
ಯುಪಿಎಸ್​ಸಿ, ಸಿವಿಲ್​ ಸರ್ವೀಸ್​ ಸೇರಿದಂತೆ ಪ್ರಮುಖ ಅಖಿಲ ಭಾರತ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತುಳು ಭಾಷೆ ಯಲ್ಲಿ ಬರೆಯಲು ಅವಕಾಶ ಸಿಗಲಿದೆ.
ಸರ್ಕಾರಿ, ಕಾನೂನು ಅನುಕೂಲ
ಶಾಸಕರು, ಸಂಸದರು, ಮೇಲ್ಮನೆ ಸದಸ್ಯರು ಸರ್ಕಾರಿ, ಕಲಾಪದ ವ್ಯವಹಾರಗಳಲ್ಲಿ ಅಧಿಕೃತ ವಾಗಿ ತುಳು ಭಾಷೆಯನ್ನು ಬಳಸಬಹುದು.
ಅನುದಾನ
ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ತುಳು ಭಾಷೆ, ಸಂಸ್ಕೃತಿ ಮತ್ತು ಪರಂಪರೆಯನ್ನು ರಕ್ಷಿಸಲು ವಿಶೇಷ ಅನುದಾನ ಬಿಡುಗಡೆಗೊಳ್ಳಬಹುದು.

ತುಳುವಿನ ಹಿರಿಮೆ ಏನು..?

ಪಂಚ ದ್ರಾವಿಡ ಭಾಷೆಗಳಲ್ಲಿ ಮೂಲಭಾಷೆ ತುಳು. ಉಳಿದ ನಾಲ್ಕು ಭಾಷೆಗಳಿಗೆ ಪ್ರತ್ಯೇಕ ರಾಜ್ಯವಿದೆ. ಭಾಷೆಗೆ ಸುಮಾರು 2,500 ವರ್ಷಗಳ ಇತಿಹಾಸವಿದೆ. ಸ್ವತಂತ್ರ ಲಿಪಿ ಇದೆ. ಉಡುಪಿಯ ಸೋದೆ ಮಠದಲ್ಲಿ 2,500, ಧರ್ಮಸ್ಥಳ ಮಂಜುನಾಥೇಶ್ವರ ಸಂಶೋಧನಾ ಪ್ರತಿಷ್ಠಾನದಲ್ಲಿ 1,900 ಸಹಿತ ತುಳುನಾಡಿನಾದ್ಯಂತ 15 ಸಾವಿರಕ್ಕೂ ಅಧಿಕ ತುಳುಲಿಪಿ ಓಲೆಗರಿಗಳಿವೆ. ವಿಟ್ಲದ ಅರಸರಾದ ರವಿವರ್ಮ ನರಸಿಂಹ ಡೊಂಬ ಹೆಗ್ಗಡೆ ಕಾಲದಲ್ಲಿ ತುಳುವಿಗೆ ರಾಜಾಶ್ರಯ ಸಿಕ್ಕಿತ್ತು. 1887ರಲ್ಲಿ ಬಾಯಾರು ಸಂಕಯ್ಯ ಭಾಗವತರು ತುಳುವಿನ ಮೊದಲ ಯಕ್ಷಗಾನ ಪ್ರಸಂಗ "ಪಂಚವಟಿ ವಾಲಿ ಸುಗ್ರೀವ ಕಾಳಗೊ' ರಚಿಸಿದರು.