ಮುಧೋಳ ತಾಲೂಕಿನ ಮುದ್ದಾಪುರ ಜೆಕೆ ಸಿಮೆಂಟ್ ಕಾರ್ಖಾನೆ ಹತ್ತಿರ ಉತ್ತರ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ನಡೆಯುತ್ತಿರುವ ಅನಿರ್ದಿಷ್ಟಾವಧಿ ಹೋರಾಟದಲ್ಲಿ ಅಧ್ಯಕ್ಷ ಶಂಕರಗೌಡ ಹಿರೇಗೌಡರ ಮಾತನಾಡಿದರು. ಸುರೇಶ ಕಿವಡಿ, ಹನಮಂತ ಕಿವಡಿ ಉಪಸ್ಥಿತರಿದ್ದರು. 
ರಾಜ್ಯ

ನ್ಯಾಯ ಸಿಗುವವರೆಗೂ ಹೋರಾಟ

ಪ್ರಮುಖ ಮುಖ್ಯಾಂಶಗಳು

  • ಜೆಕೆ ಸಿಮೆಂಟ್ ಕಾರ್ಖಾನೆ ವಿರುದ್ಧ ಅಹೋರಾತ್ರಿ ಧರಣಿ
  • ಅಕ್ರಮ ಗಣಿಗಾರಿಕೆ, ಬೆಳೆಹಾನಿಗೆ ರೈತರ ಸಮರ
ಮುಧೋಳ: ಅಕ್ರಮ ಗಣಿಗಾರಿಕೆ ತಡೆಗಟ್ಟಬೇಕು, ಬೆಳೆಹಾನಿಗೆ ರೈತರಿಗೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿ ಉತ್ತರ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ತಾಲೂಕಿನ ಮುದ್ದಾಪುರದಲ್ಲಿರುವ ಜೆಕೆ ಸಿಮೆಂಟ್ ಕಾರ್ಖಾನೆಯ ಎದುರು ಸೋಮವಾರ ಅಹೋರಾತ್ರಿ ಧರಣಿ ಆರಂಭಿಸಲಾಯಿತು.
ಉತ್ತರ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಶಂಕರಗೌಡ ಹಿರೇಗೌಡರ ಮಾತನಾಡಿ, ಕಾರ್ಖಾನೆಯಿಂದ ಹೊರಸೂಸುವ ಧೂಳಿನಿಂದಾಗಿ ಸುತ್ತಮುತ್ತಲಿನ ರೈತರ ಬೆಳೆಗಳು ಸಂಪೂರ್ಣ ನಾಶವಾಗುತ್ತಿವೆ. ಕಬ್ಬಿನಂತಹ ಬೆಳೆಗಳ ಮೇಲೆ ಧೂಳಿನ ಪದರ ಬಿದ್ದು ಇಳುವರಿ ಕುಂಠಿತವಾಗುತ್ತಿದೆ. ಇದರ ಜೊತೆಗೆ, ಕಾರ್ಖಾನೆಯು ಕಾನೂನುಬಾಹಿರವಾಗಿ ಗಣಿಗಾರಿಕೆ ನಡೆಸುತ್ತಿದ್ದು, ಮೋಟಾರ್ ವಾಹನ ಕಾಯ್ದೆ ಹಾಗೂ ಸ್ಫೋಟಕ ಬಳಕೆಯ ನಿಯಮಗಳನ್ನು ಉಲ್ಲಂಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಂತಹ ಅಕ್ರಮ ಚಟುವಟಿಕೆಗಳಿಂದ ರೈತರ ಬದುಕು ದುಸ್ತರವಾಗಿದೆ. ಅಧಿಕಾರಿಗಳು ಮತ್ತು ಕಾರ್ಖಾನೆಯ ಆಡಳಿತ ಮಂಡಳಿ ಸೂಕ್ತ ಪರಿಹಾರ ಕಲ್ಪಿಸುವವರೆಗೂ ಈ ಹೋರಾಟವನ್ನು ಯಾವುದೇ ಕಾರಣಕ್ಕೂ ಹಿಂಪಡೆಯುವುದಿಲ್ಲ ಎಂದು ಕಿಡಿಕಾರಿದರು.
ಗದಗ-ಧಾರವಾಡದ ಬೆಳ್ಳೇರಿಮಠದ ಡಾ.ಬಸವಾನಂದ ಮಾತನಾಡಿ, ಅನ್ಯಾಯದ ವಿರುದ್ಧದ ಈ ಧರ್ಮಯುದ್ಧಕ್ಕೆ ತಮ್ಮ ಸಂಪೂರ್ಣ ಬೆಂಬಲವಿದೆ. ನ್ಯಾಯಯುತ ಹೋರಾಟ ಸರ್ಕಾರ, ಶಾಸಕರು, ಸಚಿವರು ಸ್ಪಂದಿಸಬೇಕು ಎಂದು ಭರವಸೆ ನೀಡಿದರು.
ಮುಧೋಳ ತಹಸೀಲ್ದಾರ್ ಡಾ.ಚಿಕ್ಕಪ್ಪ ನಾಯಕ ಮಾತನಾಡಿ, ಕಾರ್ಖಾನೆಯು ಮಾಲಿನ್ಯ ನಿಯಂತ್ರಣ ನಿಯಮಗಳನ್ನು ಪಾಲಿಸುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಮಾಲಿನ್ಯ ನಿಯಂತ್ರಣ ಮಂಡಳಿ, ಕೃಷಿ ಇಲಾಖೆ ಹಾಗೂ ಆಟಿಒ ಅಧಿಕಾರಿಗಳ ತಂಡ ರಚಿಸಿ ರೈತರ ಸಮ್ಮುಖದಲ್ಲೇ ಸಮಗ್ರ ತನಿಖೆ ನಡೆಸಲಾಗುವುದು. ರೈತರಿಗೆ ಆಗಿರುವ ನಷ್ಟವನ್ನು ವೈಜ್ಞಾನಿಕವಾಗಿ ಅಳೆದು, ಜೆಕೆ ಸಿಮೆಂಟ್ ಆಡಳಿತ ಮಂಡಳಿಯಿಂದ ಸೂಕ್ತ ಪರಿಹಾರ ಕೊಡಿಸಲಾಗುವುದು ಭರವಸೆ ನೀಡಿದರು.
ಜಿಲ್ಲಾ ಉಪಾಧ್ಯಕ್ಷ ಸಾಹೇಬಗೌಡ ರೆಡ್ಡಿ, ಪದಾಧಿಕಾರಿ ಮಲ್ಲನಗೌಡ ರೆಡ್ಡಿ, ಸುರೇಶ ಕಿವಡಿ, ಶೈಲೇಶ ಹಂಪಿಹೊಳಿ, ಹನಮಂತ ಕಿವಡಿ, ರಂಗಪ್ಪ ತುಳಸಿಗೇರಿ, ವಿಷ್ಣು ತುಳಸಿಗೇರಿ, ಮಲ್ಲಪ್ಪ ಬೆಳ್ಳಿ, ಯಲ್ಲಪ್ಪ ಸಿರುಗುಂಪಿ, ಭೀಮಪ್ಪ ಸಿರುಗುಂಪಿ, ಮುತ್ತಪ್ಪ ಬಿಲ್ಲಾರ ಇದ್ದರು.
"

ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಚರ್ಚೆ

ಉತ್ತರ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಶಂಕರಗೌಡ ಹಿರೇಗೌಡರ ಸಮ್ಮುಖದಲ್ಲಿ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಪರಿಸರ ಅಧಿಕಾರಿ ಲೋಕೇಶ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಭೂ ವಿಜ್ಞಾನಿ ಶಿವಕುಮಾರ ಬೀದಿಭಾವಿ, ಕೃಷಿ ಇಲಾಖೆಯ ಜಿಲ್ಲಾ ಉಪನಿರ್ದೇಶಕಿ ಮಂಜುಳಾ ಸೇರಿ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಲಾಯಿತು. ಒಂದು ವಾರದೊಳಗೆ ತನಿಖಾ ವರದಿಯನ್ನು ಸಲ್ಲಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದರೂ ನ್ಯಾಯ ಹಾಗೂ ಪರಿಹಾರ ಸಿಗುವವರೆಗೆ ರೈತರ ಹೋರಾಟ ಮುಂದುವರಿಸುವುದಾಗಿ ತಿಳಿಸಿದ್ದಾರೆ.

"

ನಮ್ಮ ಭಾಗದ ರೈತರ ಸಮಸ್ಯೆಗಳಿಗಾಗಿ ನಾವೆಲ್ಲರೂ ಒಟ್ಟಾಗಿ ಹೋರಾಟ ಮಾಡುತ್ತಿದ್ದೇವೆ. ಈ ಅನ್ಯಾಯಕ್ಕೆ ನ್ಯಾಯ ಸಿಗುವವರೆಗೆ ಮತ್ತು ಎಲ್ಲಾ ಅರ್ಹ ಲಾನುಭವಿಗಳಿಗೆ ಸೂಕ್ತ ಪರಿಹಾರ ಸಿಗುವವರೆಗೆ ನಮ್ಮ ಈ ಹೋರಾಟವು ನಿರಂತರವಾಗಿ ಮುಂದುವರಿಯಲಿದೆ.

ಸುರೇಶ ಕಿವಡಿ, ರೈತ ಮುಖಂಡರು ನಿಂಗಾಪೂರ.