Fight if the power line is not changed
ಪಾವಗಡ: ತಾಲೂಕಿನ ಕೊಟಗುಡ್ಡ ಹೊರವಲಯದಲ್ಲಿ ನಿಮಾರ್ಣವಾಗುತ್ತಿರುವ ಸೋಲಾರ್ ಪ್ಲಾಂಟ್ನಿಂದ ವಿದ್ಯುತ್ ಸರಬರಾಜು ಮಾಡಲು ಗುಂಡ್ಲಾಹಳ್ಳಿ, ಅರೇಕ್ಯಾತನಹಳ್ಳಿಯಿಂದ 33 ಕೆವಿ ವಿದ್ಯುತ್ ಸ್ಥಾವರದ ಕಂಬಗಳನ್ನು ರಸ್ತೆ ಹಾಗೂ ಗ್ರಾಮಗಳ ಮಧ್ಯೆ ಅಳವಡಿಸಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದ್ದು, ಸೋಮವಾರ ಕೊಟಗುಡ್ಡದಲ್ಲಿ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ರಸ್ತೆ ತಡೆದು ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.
ಈ ವೇಳೆ ರೈತ ಸಂಘದ ಜಿಲ್ಲಾಧ್ಯಕ್ಷ ಪೂಜಾರಪ್ಪ ಮಾತನಾಡಿ, ಲೋಕೋಪಯೋಗಿ ಇಲಾಖೆಯು ರಾಜ್ಯ ಹೆದ್ದಾರಿ ಬದಿಯಲ್ಲಿ ವಿದ್ಯುತ್ ಕಂಬಗಳನ್ನು ಅಳವಡಿಸಲು ಅನುಮತಿ ನೀಡಿದ್ದರೂ, ಖಾಸಗಿ ಕಂಪನಿಯು ಆದೇಶವನ್ನು ಉಲ್ಲಂಘಿಸಿ ಗ್ರಾಮದ ಮಧ್ಯಭಾಗದಲ್ಲೇ ಕಂಬಗಳನ್ನು ಅಳವಡಿಸುತ್ತಿದೆ ಎಂದು ಆರೋಪಿಸಿದರು.
ಈಗಾಗಲೇ ಹಲವೆಡೆ ಗುಂಡಿ ತೋಡಿ ಕಂಬ ಹಾಕಲಾಗಿದೆ. ಗ್ರಾಮದ ಮಧ್ಯಭಾಗದಲ್ಲಿ ಅಂಗನವಾಡಿ ಕೇಂದ್ರ, ಆಸ್ಪತ್ರೆ, ಪ್ರಾಥಮಿಕ ಶಾಲೆ, ಪ್ರಥಮ ದರ್ಜೆ ಕಾಲೇಜು ಹಾಗೂ ಖಾಸಗಿ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ. ಈ ಪ್ರದೇಶದಲ್ಲಿ ವಿದ್ಯುತ್ ಲೈನ್ ಹಾದುಹೋದರೆ ಮಕ್ಕಳಿಗೆ, ಸಾರ್ವಜನಿಕರಿಗೆ ಹಾಗೂ ಜಾನುವಾರುಗಳಿಗೆ ಅಪಾಯ ಉಂಟಾಗುವ ಸಾಧ್ಯತೆ ಇರುವುದರಿಂದ ವಿದ್ಯುತ್ ಮಾರ್ಗವನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಬೇಕು. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳದಿದ್ದರೆ ತಹಸೀಲ್ದಾರ್ ಕಚೇರಿ ಎದುರು ಧರಣಿ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ತಾಲೂಕು ಅಧ್ಯಕ್ಷ ಶಿವು ಮಾತನಾಡಿ, ಖಾಸಗಿ ಸೋಲಾರ್ ಕಂಪನಿಯು ಕೋಟಗುಡ್ಡದ ಮನೆಗಳ ಮುಂದೆಯೇ ಅಳವಡಿಸುತ್ತಿರುವ 33 ಕೆವಿ ವಿದ್ಯುತ್ ಕಂಬಗಳ ಕಾಮಗಾರಿಯನ್ನು ತಕ್ಷಣ ಸ್ಥಗಿತಗೊಳಿಸಿ, ವಿದ್ಯುತ್ ಮಾರ್ಗವನ್ನು ಜನನಿಬಿಡ ಪ್ರದೇಶದಿಂದ ಬೇರೆಡೆಗೆ ಸ್ಥಳಾಂತರಿಸಬೇಕೆಂದು ಒತ್ತಾಯಿಸಿದರು.
ಇದೇ ವೇಳೆ ಬಿಡದಿ ಪ್ರದೇಶದ ರೈತರ ಜಮೀನು ಸ್ವಾಧಿನ ವಿಚಾರದಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಸಂಘ ಬೆಂಬಲ ಸೂಚಿಸಿ ಬಿಡದಿ ಟೌನ್ಶಿಪ್ ಕೈಬಿಡುವಂತೆ ಒತ್ತಾಯಿಸಿದರು. ರೈತರ ಹಿತಾಸಕ್ತಿಗೆ ಧಕ್ಕೆಯಾದರೆ ಮುಂದಿನ ದಿನಗಳಲ್ಲಿ ರಾಜ್ಯದ ಮೂಲೆ ಮೂಲೆಯಿಂದ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ತಾಲೂಕು ರೈತ ಸಂಘದ ಪದಾಧಿಕಾರಿಗಳು ಸರ್ಕಾರಕ್ಕೆ ಎಚ್ಚರಿಸಿದರು.
ಕೊಟಗುಡ್ಡ ಗ್ರಾಮದಿಂದ ತಾಲೂಕು ಕಚೇರಿ ಮುಂದೆ ಜಮಾಯಿಸಿದ ಗ್ರಾಮಸ್ಥರು ಮತ್ತು ರೈತ ಸಂಘದ ಪದಾಧಿಕಾರಿಗಳು ಸೊಲಾರ್ ಕಂಬ ಅಳವಡಿಸುವ ಕಾಮಗಾರಿಯನ್ನು ತಕ್ಷಣ ನಿಲ್ಲಿಸುವಂತೆ ಒತ್ತಾಯಿಸಿ ಆರ್.ಆರ್.ಟಿ ಶಾಖೆಯ ಚಂದ್ರಶೇಖರ್ಗೆ ಮನವಿ ಸಲ್ಲಿಸಿದರು.
ರೈತ ಸಂಘದ ತಾಲೂಕು ಕಾರ್ಯದರ್ಶಿ ಪೂಜಾರಿ ಚಿತ್ತಯ್ಯ, ವೈ.ಎನ್.ಹೊಸಕೋಟೆ ಹೋಬಳಿ ಅಧ್ಯಕ್ಷ ಗೋಪಾಲ್, ಗ್ರಾಮಸ್ಥರಾದ ನಾಗರಾಜು, ಚಂದ್ರು, ಮಾರಣ್ಣ, ತಿಪ್ಪೇಸ್ವಾಮಿ, ಪೆದ್ದಣ್ಣ, ನಾಗೇಂದ್ರಪ್ಪ, ಆಂಜಿನಪ್ಪ, ಹನುಮಂತರಾಯಪ್ಪ, ನಾಗಪ್ಪ, ಸಂಜೀವಪ್ಪ, ನಾಗರಾಜಪ್ಪ, ಚಂದ್ರಪ್ಪ, ರಂಗನಾಥ, ದುರ್ಗಪ್ಪ, ತಿಮ್ಮಪ್ಪ, ಶ್ರೀರಾಮ್, ನವೀನ್, ಈರನಾಗಪ್ಪ, ನರಸಿಂಹಪ್ಪ, ಆನಂದ್, ವೆಂಕಟೇಶ್, ಮೂರ್ತಿ, ಮನು, ಗುರು, ಗೋಪಾಲ್, ಸೀರಿಯಣ್ಣ ಇದ್ದರು.