ಇಂಡಿ ತಾಲೂಕಿನ ಶಿರನಾಳ ಬ್ಯಾರೇಜ್ ಬಳಿ ಮಹಾರಾಷ್ಟ್ರದ ರೈತರು ಮತ್ತು ಕರ್ನಾಟಕದ ಸಿಬ್ಬಂದಿ ನಡುವೆ ನಡೆದ ಗಲಾಟೆ. 
ರಾಜ್ಯ

ಭೀಮಾತೀರದಲ್ಲಿ ಜೀವ ಜಲಕ್ಕಾಗಿ ಹೋರಾಟ, ಬಾಂದಾರ್‌ಗಳಿಗೆ ನೀರು ಹರಿಸಲು ಹಿಂದೇಟು, ಮರಾಠಿಗರಿಂದ ಹಲ್ಲೆ-ಎಇಇಗೆ ತಳ್ಳಾಟ

ಪ್ರಮುಖ ಮುಖ್ಯಾಂಶಗಳು

  • ಭೀಮಾತೀರದಲ್ಲಿ ನೀರಿಗಾಗಿ ಸಮರ
  • ಮರಾಠಿ ರೈತರಿಂದ ಅಧಿಕಾರಿಯ ನೂಕಾಟ
  • ಕರ್ನಾಟಕದ ಸರ್ಕಾರಿ ಸಿಬ್ಬಂದಿಗೆ ಥಳಿತ
  • ಶಿರನಾಳ-ಅವಜಿ ಬ್ಯಾರೇಜ್ ಮಧ್ಯ ಘಟನೆ
ವಿಜಯಪುರ: ಕರ್ನಾಟಕ-ಮಹಾರಾಷ್ಟ್ರದ ಗಡಿರೇಖೆಯಾಗಿ ಹರಿಯುವ ಭೀಮಾನದಿ ಪಾತ್ರದಲ್ಲಿ ಜೀವಜಲಕ್ಕಾಗಿ ಹೋರಾಟ ಶುರುವಾಗಿದ್ದು, ಬಾಂದಾರ್‌ಗಳಿಂದ ನೀರು ಹರಿಸಲು ಹೋದ ಅಧಿಕಾರಿಗಳನ್ನು ತಳ್ಳಾಡಿದ ಮಹಾರಾಷ್ಟ್ರ ಜನ ಸಿಬ್ಬಂದಿಯೋರ್ವನನ್ನು ಥಳಿಸಿದ ಘಟನೆ ಬೆಳಕಿಗೆ ಬಂದಿದೆ.
ಫೆ. 26 ರಂದು ಮಧ್ಯಾಹ್ನ 1.30ರಿಂದ 2 ರ ಮಧ್ಯೆ ಶಿರನಾಳ ಮತ್ತು ಅವಜಿ ಗ್ರಾಮದ ಮಧ್ಯೆ ಇರುವ ಬ್ಯಾರೇಜ್‌ಗೆ ಭೇಟಿ ನೀಡಿದ ಸಂದರ್ಭ ಈ ಘಟನೆ ನಡೆದಿದ್ದು, ಇಂಡಿ ನಗರಸಭೆಯ ಜಾಕ್‌ವೆಲ್ ನಿರ್ವಹಣೆಯ ಸಿಬ್ಬಂದಿಯನ್ನು ಥಳಿಸಿದ ವಿಡಿಯೋ ಜಾಲತಾಣದಲ್ಲಿ ಹರಿದಾಡತೊಡಗಿದೆ. ಬ್ಯಾರೇಜ್ ತುಂಬಿದ ಹಿನ್ನೆಲೆ ಪರಿಶೀಲನೆ ತೆರಳಿದ ಇಂಡಿ ಎಇಇ ಆರ್.ಎಸ್. ಬಂಡಿ, ಧೂಳಖೇಡ ಪಿಡಿಒ ಲಾಲಸಾಬ ನದಾಫ್ ಹಾಗೂ ಮತ್ತಿತರ ಸಿಬ್ಬಂದಿಯನ್ನು ಮಹಾರಾಷ್ಟ್ರದ ಜನ ತಳ್ಳಾಡಿದ್ದಾರೆ. ಬಳಿಕ ತಪ್ಪಿನ ಅರಿವಾಗಿ ಕ್ಷಮೆ ಕೇಳಿದ್ದಾರೆನ್ನಲಾಗಿದೆಯಾದರೂ ಬ್ಯಾರೇಜ್‌ನಿಂದ ನೀರು ಹರಿಸುವಲ್ಲಿ ಪದೇ ಪದೇ ಅಡೆತಡೆಯುಂಟು ಮಾಡುತ್ತಿರುವುದು ಮಾತ್ರ ನಿಂತಿಲ್ಲ.
ಮಹರಾಷ್ಟ್ರದ ಉಜನಿ ಜಲಾಶಯದಿಂದ ಹರಿದು ಬರುತ್ತಿರುವ ನೀರು ಇದೀಗ ಧೂಳಖೇಡ ಬ್ಯಾರೇಜ್‌ಗೆ ಬಂದಿದೆ. ಆದರೆ, ಬ್ಯಾರೇಜ್ ಗೇಟ್ ತೆಗೆದು ಮುಂದಿನ ಬ್ಯಾರೇಜ್‌ಗಳಿಗೆ ನೀರು ಹರಿಸಲು ಮಹಾರಾಷ್ಟ್ರದ ಜನ ಬಿಡುತ್ತಿಲ್ಲ. ಶಿರನಾಳ ಬ್ಯಾರೇಜ್ ತುಂಬಿದ ಹಿನ್ನೆಲೆ 3 ಮೀಟರ್ ಗೇಟ್ ತೆಗೆದರೆ ಕಲ್ಮಶವೆಲ್ಲ ಹೊರಹೋಗಿ ಬ್ಯಾರೇಜ್ ಸ್ವಚ್ಛಗೊಳ್ಳಲಿದೆ. ಮಾತ್ರವಲ್ಲ, ಮುಂದಿನ ಬ್ಯಾರೇಜ್‌ಗಳಿಗೆ ನೀರು ಸಿಗಲಿದೆ ಎಂಬ ಆಶಯದಿಂದ ಅಧಿಕಾರಿಗಳು ಬ್ಯಾರೇಜ್ ಗೇಟ್ ತೆಗೆಯಲು ಮುಂದಾದಾಗ ಸ್ಥಳಕ್ಕೆ ಬಂದ 50-60 ಜನ ಮಹಾರಾಷ್ಟ್ರದ ರೈತರು ಸಿಬ್ಬಂದಿಗೆ ಥಳಿಸಿ ಅಧಿಕಾರಿಗಳನ್ನು ತಳ್ಳಾಡಿದ್ದಾರೆಂದು ಸ್ಥಳೀಯರು ‘ವಿಜಯವಾಣಿ’ಗೆ ತಿಳಿಸಿದ್ದಾರೆ.