ಕಾಂಗ್ರೆಸ್ ಸರ್ಕಾರದ ರೈತ ವಿರೋಧ ನೀತಿ ಖಂಡಿಸಿ ಮಂಗಳವಾರ ಕೆಂಭಾವಿಯಲ್ಲಿ ಬಿಜೆಪಿ ಮಾಜಿ ಜಿಲ್ಲಾಧಕ್ಷ ಅಮೀನರೆಡ್ಡಿ ಪಾಟೀಲ್ ಯಾಳಗಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಬಸವರಾಜ ವಿಭೂತಿಹಳ್ಳಿ, ಗುರುಕಾಮಾ, ರಾಜಶೇಖರ ಗೂಗಲ ಇತರರಿದ್ದರು. 
ರಾಜ್ಯ

ಬರ ಘೋಷಣೆ ತಡವಾದರೆ ಉಗ್ರ ಹೋರಾಟ

ಚನ್ನಬಸಯ್ಯ ಗುರುವಿನ
ಕೆಂಭಾವಿ: ಕಾಂಗ್ರೆಸ್ ಸರ್ಕಾರದ ರೈತ ವಿರೋಧ ನೀತಿ ಖಂಡಿಸಿ ಮಂಗಳವಾರ ಪಟ್ಟಣದಲ್ಲಿ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಅಮೀನರೆಡ್ಡಿ ಪಾಟೀಲ್ ಯಾಳಗಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಬಿಜೆಪಿ ಪಕ್ಷದ ನೂರಾರು ಕಾರ್ಯಕರ್ತರು ಸೇರಿದಂತೆ ವಿವಿಧ ರೈತಪರ ಸಂಘಟನೆಗಳ ಪ್ರಮುಖರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಬೆಳಗ್ಗೆ ೧೧ಕ್ಕೆ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದಿಂದ ಹೊರಟ ಪ್ರತಿಭಟನಾ ಮೆರವಣಿಗೆ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರ ಮುಖ್ಯ ರಸ್ತೆ, ಉತ್ತರಾದಿ ಮಠ ರಸ್ತೆ, ಜೈಹನುಮಾನ ಚೌಕ್, ಮುಖ್ಯ ಬಜಾರ, ಹಳೇ ಟಾಕೀಸ್ ರಸ್ತೆ ಮೂಲಕ ಹಳೇ ಬಸ್ ನಿಲ್ದಾಣ ಪ್ರದೇಶದ ಬಸವೇಶ್ವರ ವೃತ್ತಕ್ಕೆ ತಲುಪಿತು.
ಬಸವೇಶ್ವರ ವೃತ್ತದಲ್ಲಿ ಜಮಾವಣೆಗೊಂಡ ಪ್ರತಿಭಟನಾಕಾರರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಮಾತನಾಡಿದ ಅಮೀನರೆಡ್ಡಿ ಪಾಟೀಲ್ ಯಾಳಗಿ, ಭ್ರಷ್ಟ ಕಾಂಗ್ರೆಸ್ ಸರ್ಕಾರ ರಾಜ್ಯದ ರೈತರಿಗೆ ಅದರಲ್ಲೂ ನಮ್ಮ ಯಾದಗಿರಿ ಜಿಲ್ಲೆಯ ರೈತರಿಗೆ ಘೋರ ಅನ್ಯಾಯ ಮಾಡಿದೆ. ಜಿಲ್ಲೆಯ ಆರೂ ತಾಲೂಕುಗಳಲ್ಲಿ ಭೀಕರ ಬರ ಇದ್ದರೂ ಅಽಕಾರಿಗಳು ಮತ್ತು ಜನಪ್ರತಿನಿಽಗಳು ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತು ಬರ ಅಧ್ಯಯನ ನಡೆಸಿದ್ದಾರೆ ಎಂದು ದೂರಿದರು.
ಅವರು ರೈತರ ಜಮೀನುಗಳಿಗೆ ತೆರಳಿ ನೋಡಿದಾಗ ಮಾತ್ರ ರೈತರ ಸಂಕಷ್ಟ ಅರಿಯಲು ಸಾಧ್ಯ. ಈ ಬಾರಿ ಸಂಪೂರ್ಣ ಮಳೆ ಕೈಕೊಟ್ಟು ಬರ ಆವರಿಸಿದ್ದರೂ ಕೇವಲ ಒಂದೇ ಒಂದು ತಾಲೂಕು ಬರ ಘೋಷಣೆ ಮಾಡಿದ ರಾಜ್ಯ ಸರ್ಕಾರದ ನಡೆ ಖಂಡನೀಯವಾಗಿದ್ದು ಮುಂಬರುವ ಎರಡನೇ ಪಟ್ಟಿಯಲ್ಲಿ ಜಿಲ್ಲೆಯ ಆರೂ ತಾಲೂಕುಗಳನ್ನು ಬರಪೀಡಿತ ಘೋಷಣೆ ಮಾಡಬೇಕು. ಹಾಗೊಂದು ವೇಳೆ ವಿಳಂಬ ಮಾಡಿದ್ದಲ್ಲಿ ನಿರಂತರ ಧರಣಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ವಿಭೂತಿಹಳ್ಳಿ, ರಾಜ್ಯ ಕಾರ್ಯಕಾರಿಣಿ ಸದಸ್ಯ ರಾಜಶೇಖರ ಗೂಗಲ್, ಹಿರಿಯ ಬಿಜೆಪಿ ಮುಖಂಡ ಡಾ.ಚಂದ್ರಶೇಖರ ಸುಬೇದಾರ, ರೈತ ಸಂಘದ ಜಿಲ್ಲಾಧ್ಯಕ್ಷ ಮಹೇಶ ಸುಬೇದಾರ, ರೈತ ಸಂಘದ ರಾಜ್ಯ ಉಪಾಧ್ಯಕ್ಷ ಲಕ್ಷ್ಮೀಕಾಂತ ಪಾಟೀಲ್ ಪ್ರತಿಭಟನೆಯಲ್ಲಿ ಮಾತಾಡಿ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.
ಬಸನಗೌಡ ಪಾಟೀಲ್, ರಾಮನಗೌಡ ಪೊಲೀಸ್ ಪಾಟೀಲ್, ಗುರು ಕಾಮಾ, ಸಂಗಣ್ಣ ತುಂಬಗಿ, ಮಲ್ಲನಗೌಡ ಏವೂರ, ಸಿದ್ಧನಗೌಡ ವನದುರ್ಗ, ತಿತುಪತಿ, ಶಿವರಾಜ ದೇಶಮುಖ, ಪ್ರಶಾಂತ ಬೆಕಿನಾಳ, ಅಡಿವೆಪ್ಪ ಜಾಕಾ, ಶಾಂತಣ್ಣ ಚನ್ನೂರ, ರಮೇಶ ಸೊನ್ನದ, ಬಸವರಾಜ ಹೊಸಮನಿ ಇತರರಿದ್ದರು.

ದರ್ಶನಾಪುರ ರೈತರೊಂದಿಗೆ ಚಲ್ಲಾಟ

ಕ್ಷೇತ್ರದ ಶಾಸಕ ಶರಣಬಸಪ್ಪ ದರ್ಶನಾಪುರ ರೈತರೊಂದಿಗೆ ಚಲ್ಲಾಟವಾಡುತ್ತಿದ್ದಾರೆ ಎಂದು ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಅಮೀನರೆಡ್ಡಿ ಪಾಟೀಲ್ ಯಾಳಗಿ ಆರೋಪಿಸದಿರು. ತಮ್ಮ ಈ ನಾಟಕೀಯ ಜೀವನ ಬಿಟ್ಟು ರೈತರೊಂದಿಗೆ ಬೆರೆತು ಅವರ ಕಷ್ಟಗಳಿಗೆ ಸ್ಪಂದಿಸಬೇಕು. ಶಾಸಕರು ಕೇವಲ ಶೇಕಡವಾರು (ಪರ್ಸೆಂಟೇಜ್)ರಾಜಕಾರಣ ಮಾಡುತ್ತಿದ್ದಾರೆ. ಶಹಾಪುರ ಕ್ಷೇತ್ರದಲ್ಲೆ ಅತಿ ಹೆಚ್ಚು ಜನಮನ್ನಣೆ ಗಳಿಸಿದ ಕೆಂಭಾವಿ ವಲಯ ಬರ ಘೋಷಣೆ ಮಾಡದಿರುವುದು ಇವರ ಕಾರ್ಯವೈಖರಿ ತಿಳಿಯುತ್ತದೆ. ಸದಾ ಮಲತಾಯಿ ಧೋರಣೆಯಲ್ಲಿಯೆ ನಲುಗುತ್ತಿರುವ ಕೆಂಭಾವಿ ವಲಯವನ್ನು ಬರ ಪಟ್ಟಿಯಲ್ಲಿ ಸೇರಿಸದೆ ಈ ಭಾಗದ ರೈತರ ಜತೆ ಚಲ್ಲಾಟವಾಡುತ್ತಿದ್ದಾರೆ ಎಂದು ದೂರಿದರು.