ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಕಳೆದ ಕೆಲ ದಿನಗಳಿಂದ ಸಂಚಲನ ಮೂಡಿಸುತ್ತಿರುವ 'ಅಧಿಕಾರ ಹಂಚಿಕೆ' ಮತ್ತು 'ಡಿಸಿಎಂ DK Shivakumar ಅವರ ನಿಗೂಢ ಟ್ವೀಟ್'ಗಳ ಬಗ್ಗೆ ವಿಧಾನಸಭೆಯಲ್ಲಿಂದು ಭಾರಿ ಚರ್ಚೆ ನಡೆಯಿತು. ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರ ಪ್ರಶ್ನೆಗಳಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಬಿಜೆಪಿಗೆ ತಿರುಗೇಟು ನೀಡಿದರು.
"2028ರಲ್ಲಿ ಏನಾಗುತ್ತೆ ನೋಡೋಣ" - ಡಿಕೆಶಿ ಮಾರ್ಮಿಕ ನುಡಿ
ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆ ವೇಳೆ ಆರ್. ಅಶೋಕ್ ಅವರು ಡಿ.ಕೆ. ಶಿವಕುಮಾರ್ ಅವರ ಇತ್ತೀಚಿನ ನಡೆಗಳನ್ನು ಪ್ರಸ್ತಾಪಿಸಿ ಕಾಲೆಳೆದರು. ಇದಕ್ಕೆ ಉತ್ತರಿಸಿದ ಡಿಸಿಎಂ, "ರಾಜಕೀಯ ಎಂಬುದು ಸಾಧ್ಯತೆಗಳ ಕಲೆ. ಇಲ್ಲಿ ಎಲ್ಲವೂ ಸಾಧ್ಯ. 'One man with Courage makes a majority' (ಧೈರ್ಯವಿರುವ ಒಬ್ಬ ವ್ಯಕ್ತಿ ಬಹುಮತಕ್ಕೆ ಸಮಾನ) ಎಂಬುದನ್ನು ನಾನು ನಂಬಿದ್ದೇನೆ. ದೃಢ ಸಂಕಲ್ಪವಿದ್ದರೆ ಒಬ್ಬನೇ ಸಾಕು, ಆತನ ಹಿಂದೆ 140 ಜನರೂ ಬರುತ್ತಾರೆ. 2028ರಲ್ಲಿ ಏನಾಗುತ್ತದೆ ಎಂದು ಕಾದು ನೋಡಿ" ಎಂದು ಹೇಳುವ ಮೂಲಕ ಭವಿಷ್ಯದ ರಾಜಕೀಯ ನಡೆಗಳ ಬಗ್ಗೆ ಕುತೂಹಲ ಉಳಿಸಿದರು.
ಸಿದ್ದರಾಮಯ್ಯ ನನ್ನ ಶಕ್ತಿ, ನಾನು ಅವರ ಬಲ!
ಅಧಿಕಾರ ಹಂಚಿಕೆ ವಿಚಾರವಾಗಿ ಗೊಂದಲ ಸೃಷ್ಟಿಸಲು ಯತ್ನಿಸಿದ ವಿರೋಧ ಪಕ್ಷಕ್ಕೆ ಡಿ.ಕೆ. ಶಿವಕುಮಾರ್ ಸ್ಪಷ್ಟ ಸಂದೇಶ ರವಾನಿಸಿದರು. "ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 100% ನನ್ನ ಜೊತೆಗಿದ್ದಾರೆ. ನಾವಿಬ್ಬರೂ ಕೈಜೋಡಿಸಿ ಕೆಲಸ ಮಾಡುತ್ತಿದ್ದೇವೆ, ಮುಂದೆಯೂ ಮಾಡುತ್ತೇವೆ." "ಸಿದ್ದರಾಮಯ್ಯ ಅವರ ಕಷ್ಟಕಾಲದಲ್ಲಿ ನಾನು ನಿಂತಿದ್ದೇನೆ, ನನ್ನ ಕಷ್ಟದ ಸಮಯದಲ್ಲಿ ಅವರು ನಿಲ್ಲುತ್ತಾರೆ. ನಮ್ಮಿಬ್ಬರ ನಡುವೆ ಯಾವುದೇ ಗೊಂದಲವಿಲ್ಲ." "ನಮ್ಮ ಪಕ್ಷದಲ್ಲಿ ಶಾಸಕರ ಸಂಖ್ಯೆಗಿಂತ ಹೈಕಮಾಂಡ್ ತೀರ್ಮಾನವೇ ಅಂತಿಮ. ಬಿಜೆಪಿಯಲ್ಲೂ ಸಂಖ್ಯಾಬಲದ ಹೊರತಾಗಿಯೂ ಸಿಎಂಗಳು ಬದಲಾಗಿಲ್ಲವೇ?" ಎಂದು ಅಶೋಕ್ ಅವರಿಗೆ ಮರುಪ್ರಶ್ನೆ ಹಾಕಿದರು.
ಟ್ವೀಟ್ ವಿವಾದ: ಅಶೋಕ್ ಅವರಿಗೆ ಟಾಂಗ್
ಡಿ.ಕೆ. ಶಿವಕುಮಾರ್ ಅವರ ಇತ್ತೀಚಿನ ಟ್ವೀಟ್‌ಗಳು ಮತ್ತು 'ತಾಳ್ಮೆ'ಯ ಬಗ್ಗೆ ಅಶೋಕ್ ಪ್ರಶ್ನಿಸಿದಾಗ, "ನನ್ನ ಟ್ವೀಟ್ ಅನ್ನು ನೀವು ಹೇಗೆ ಅರ್ಥ ಮಾಡಿಕೊಳ್ಳುತ್ತೀರಿ ಎಂಬುದು ನಿಮಗೆ ಬಿಟ್ಟ ವಿಚಾರ. ಯಾರೋ ಮಾತನಾಡಿದ್ದಕ್ಕೆಲ್ಲ ನಾನು ಉತ್ತರ ಕೊಡುವುದಿಲ್ಲ. ನಾನು ಬಿದ್ದಿದ್ದೇನೆ, ಎದ್ದಿದ್ದೇನೆ, ಜೈಲುವಾಸ ಅನುಭವಿಸಿದ್ದೇನೆ. ಪಕ್ಷದ ಅಧ್ಯಕ್ಷನಾಗಿ ಆರು ವರ್ಷ ಪೂರೈಸುತ್ತಿದ್ದೇನೆ, ನಿಮ್ಮ ಮಾತಿಗೆ ನಾನು ಜಗ್ಗುವುದಿಲ್ಲ" ಎಂದರು,(ಏಜೆನ್ಸೀಸ್).