ತಾಳಿಕೋಟೆ ಶ್ರೀ ಖಾಸ್ಗತೇಶ್ವರ ಮಠದ ಜಾ‌ತ್ರ್ಯೋತ್ಸವ ನಿಮಿತ್ತ ಕತ್ರಿ ಬಜಾರದಲ್ಲಿ ಶ್ರೀ ಖಾಸ್ಗತ ಸ್ವಾಗತ ಕಮಾನ ನಿರ್ಮಿಸಿ ಜಾತ್ರೆಯ ಸೊಬಗನ್ನು ಹೆಚ್ಚಿಸಿರುವುದು ಮತ್ತು ವಿದ್ಯುತ್ ದ್ವೀಪಗಳಿಂದ ಅಲಂಕೃತಗೊಳಿಸಿರುವುದು. 
ರಾಜ್ಯ

ತಾಳಿಕೋಟೆಯಲ್ಲಿ ಖಾಸ್ಗತಜ್ಜನ ಜಾತ್ರೆ ಸಂಭ್ರಮ

ಪ್ರಮುಖ ಮುಖ್ಯಾಂಶಗಳು

  • ಝಗಮಗಿಸುತ್ತಿರುವ ವಿದ್ಯುತ್ ದೀಪಾಲಂಕಾರ
  • ಎಲ್ಲೆಡೆ ಸಡಗರದ ಮೆರಗು
ತಾಳಿಕೋಟೆ : ಉತ್ತರ ಕರ್ನಾಟಕ ಜನರ ಮನದಲ್ಲಿ ಮನೆ ಮಾಡಿರುವ ತಾಳಿಕೋಟೆ ಶ್ರೀ ಖಾಸ್ಗತಜ್ಜನ ಜಾತ್ರೆ ವರ್ಷದಿಂದ ವರ್ಷಕ್ಕೆ ತನ್ನ ವೈಭವ ಹೆಚ್ಚಿಸಿಕೊಳ್ಳುತ್ತಾ ಸಾಗಿದೆ. ಸದ್ಯ ಖಾಸ್ಗತಜ್ಜನ ಜಾತ್ರೆಗೆ ತಾಳಿಕೋಟೆ ಪಟ್ಟಣ ವಿದ್ಯುತ್ ದೀಪಗಳ ಅಲಂಕಾರದಿಂದ ಕಂಗೊಳಿಸುತ್ತಿದೆ.
ಜಾ‌ತ್ರ್ಯೋತ್ಸವ ನಿಮಿತ್ತ ಶ್ರೀಗಳ ಆಶಯದಂತೆ ಇಡೀ ಪಟ್ಟಣವೇ ವಿದ್ಯುತ್ ದೀಪಗಳಿಂದ ಬೆಳಗುತ್ತಿದ್ದು, ಭಕ್ತರಲ್ಲಿ ಹಬ್ಬದ ವಾತಾವರಣ ಮನೆಮಾಡಿದೆ. ಪ್ರತಿ ಅಂಗಡಿ ಮುಂದೆಯೂ ವಿದ್ಯುತ್ ದೀಪಗಳನ್ನು ಅಳವಡಿಸಿ ದೀಪಾವಳಿ ಹಬ್ಬದಂತೆ ಝಗಮಗಿಸುತ್ತಿದೆ.
ಶ್ರೀಮಠದ ಅಲಂಕಾರಕ್ಕೆ ಇನ್ನಷ್ಟು ಮೆರಗು ಹೆಚ್ಚಿಸಲು ಹೊರ ವಲಯ ಹಾಗೂ ಗೋಪುರದ ಎತ್ತರಕ್ಕೂ ವಿದ್ಯುತ್ ದೀಪಗಳ ಅಲಂಕಾರ ಮಾಡಿದ್ದು, ಮಠದ ಆವರಣದಲ್ಲಿ ನೂತನವಾಗಿ ಪ್ರತಿಷ್ಠಾಪಿಸಲಾದ ವಿರಕ್ತ ಶ್ರೀಗಳ ಮೂರ್ತಿಗೆ ರುದ್ರಾಕ್ಷಿ ಮಂಟಪವನ್ನು ನಿರ್ಮಿಸಿ ಜಾತ್ರೆ ಸೊಬಗು ವೃದ್ಧಿಸಿದೆ.
ಅಲ್ಲದೇ ಪಟ್ಟಣದ ಪ್ರಮುಖ ಮಾರ್ಗಗಳಾದ ಬಸವೇಶ್ವರ ಸರ್ಕಲ್, ರಾಣಾಪ್ರತಾಪಸಿಂಹ ಸರ್ಕಲ್, ಶಿವಾಜಿ ಮಹಾರಾಜ ವತ್ತ, ಹಾಗೂ ಡಾ. ಅಂಬೇಡ್ಕರ್ ಸರ್ಕಲ್, ಬಸ್ ನಿಲ್ದಾಣ ಮುಂಭಾಗ, ಖಾಸ್ಗತೇಶ್ವರ ಮಠದ ಮುಂಭಾಗ ಭಕ್ತರು ಹಾಗೂ ವಿವಿಧ ಯುವ ಸಂಘಟಕರು ಖಾಸ್ಗತರ ಹಾಗೂ ವಿರಕ್ತ ಶ್ರೀಗಳ ಹಾಗೂ ಸಿದ್ದಲಿಂಗ ಶ್ರೀಗಳ ಭಾವಚಿತ್ರದೊಂದಿಗೆ ಸ್ವಾಗತ ಕೋರುವಂತಹ ಕಟೌಟ್‌ಗಳನ್ನು ಕಟ್ಟಿದ್ದಾರೆ.
19ರಿಂದ ಪ್ರಾರಂಭಗೊಂಡಿರುವ ಜಾತ್ರೊೃೀತ್ಸವವು ಸಪ್ತ ಭಜನೆಯಲ್ಲಿ 160ಕ್ಕೂ ಹೆಚ್ಚು ಗ್ರಾಮದ ಗ್ರಾಮಸ್ಥರು ಪಾಲ್ಗೊಳ್ಳುವುದರೊಂದಿಗೆ ಭಕ್ತಿ ಸಮರ್ಪಣೆಗೆ ಮುಂದಾಗಿದ್ದು, ಹಗಲು ರಾತ್ರಿಯೂ ಬಿಡುವಿಲ್ಲದೇ ನಡೆಯುವ ಈ ಸಪ್ತ ಭಜನೆ ಕಾರ್ಯದಲ್ಲಿ ಎಲ್ಲ ಭಕ್ತರಿಗೆ ಅವಕಾಶ ಸಿಗಲಿ ಎಂಬ ಕಾರಣದಿಂದ ಒಂದು ಗ್ರಾಮದವರಿಗೆ ಒಂದು ಗಂಟೆ ಮೀಸಲಿಡಲಾಗಿದೆ. ಸಪ್ತ ಭಜನಾ ಕಾರ್ಯ 26ರಂದು ಗೋಪಾಲ ಕಾವಲಿ ಒಡೆಯುವ ದಿನದಂದು ಸಂಪನ್ನಗೊಳ್ಳಲಿದೆ.
ಗೋಪಾಲ ಕಾವಲಿ ಒಡೆಯುವುದು: ಶ್ರೀ ಖಾಸ್ಗತ ಮಹಾ ಶಿವಯೋಗಿಗಳ ಜಾತ್ರೆ ಹಾಗೂ ರಥೋತ್ಸವ ಅಂಗವಾಗಿ ಜು. 26ರಂದು ನಸುಕಿನ ಜಾವ 5.30ಕ್ಕೆ ಅಸಂಖ್ಯಾತ ಭಕ್ತ ಸಮೂಹದ ಸಮ್ಮುಖದಲ್ಲಿ ಗೋಪಾಲ ಕಾವಲಿ (ಮೊಸರು ಗಡಿಗೆ) ಒಡೆಯುವ ಕಾರ್ಯಕ್ರಮ ಭಕ್ತಿ ಭಾವದೊಂದಿಗೆ ಜರುಗಲಿದೆ.
9 ದಿನಗಳ ಕಾಲ ನಡೆದು ಬಂದ ಸಪ್ತ ಭಜನಾ ಕಾರ್ಯಕ್ರಮವು ಗೋಪಾಲ ಕಾವಲಿ ಒಡೆಯುವುದರ ಮೂಲಕ ಮಂಗಲಗೊಳ್ಳಲಿದೆ.
ಶ್ರೀ ಮಠದ ಬಾಲಶಿವಯೋಗಿ ಶ್ರೀ ಸಿದ್ಧಲಿಂಗ ದೇವರು ಘನ ಅಧ್ಯಕ್ಷತೆಯಲ್ಲಿ ಜರುಗಲಿರುವ ಗೋಪಾಲ ಕಾವಲಿ ಒಡೆಯುವ ಮುಂಚೆ ಭವ್ಯ ಪ್ರಭಾತ ಪೇರಿಯೊಂದಿಗೆ ಧ್ವಜದ ಮೆರವಣಿಗೆ ನಡೆಯಲಿದೆ.
"

ಇಂದು ಹುಗ್ಗಿ ಪ್ರಸಾದ

ಜಾ‌ತ್ರ್ಯೋತ್ಸವ ನಿಮಿತ್ತ ವಿಶೇಷವಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಅದರಲ್ಲಿ ವಿಜಯಪುರದ ರೊಟ್ಟಿ ದೇಶದಲ್ಲಿ ಪ್ರಸಿದ್ಧತೆ ಪಡೆದಿರುವುದರಿಂದ ಗೋಪಾಲ ಕಾವಲಿ ಒಡೆಯುವ ದಿನದಂದು ಈ ಹಿಂದಿನಿಂದ ಬಂದ ಸಾಂಪ್ರದಾಯದಂತೆ ಗೋಧಿ ಹುಗ್ಗಿ, ರೊಟ್ಟಿ, ಅನ್ನ ಸಾಂಬಾರು ಮತ್ತು 27ರಂದು ರೊಟ್ಟಿ, ವಿವಿಧ ತರಹದ ಪಲ್ಲೆ, ಸಾಂಬರ, ಅನ್ನ, ಪನ್ನಿರ ಮಸಾಲ, ಚಪಾತಿ, ಬೂಂದಿ, ಶೇಂಗಾ ಹೋಳಿಗೆ, ಶಿರಾ-ಸಜ್ಜಕ ಒಳಗೊಂಡಂತೆ ವಿವಿಧ ಬಗೆಯ ಪಕ್ವಾನ ಭೋಜನೆ ಸೇವೆ ಶ್ರೀಮಠದಿಂದ ನಡೆಯಲಿದೆ.


ಭಕ್ತರೇ ಶ್ರೀಮಠದ ಆಸ್ತಿಯಾಗಿದ್ದಾರೆ. ಶ್ರೀ ಖಾಸ್ಗತಜ್ಜನ ಜಾತ್ರೆ ಭಕ್ತರಿಂದಲೇ ಮೆರುಗನ್ನು ಹೆಚ್ಚಿಸಿಕೊಂಡಿದೆ. ಸಂಭ್ರಮದ ಜಾತ್ರೆ ಸೊಬಗನ್ನು ಹೆಚ್ಚಿಸಲು ಭಕ್ತರೇ ನಿಂತು ಎಲ್ಲ ಕಾರ್ಯ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಇದು ಭಕ್ತರ ಮಠ ಅಜ್ಜನ ಜಾತ್ರೆಗೆ ಎಲ್ಲರೂ ಬಂದು ಶ್ರೀ ಖಾಸ್ಗತಜ್ಜನ ಕಪೆಗೆ ಪಾತ್ರರಾಗಬೇಕು.

ಬಾಲಶಿವಯೋಗಿ ಸಿದ್ದಲಿಂಗ ಶ್ರೀಗಳುಶ್ರೀ ಖಾಸ್ಗತೇಶ್ವರ ಮಠ, ತಾಳಿಕೋಟೆ.