ಕಮತಗಿ ಪಟ್ಟಣದ ಆರಾಧ್ಯ ದೇವತೆ ರಾಮಲಿಂಗ ಚೌಡೇಶ್ವರಿ ದೇವಿ ಜಾತ್ರೆ ನಿಮಿತ್ತ ದೇವಿ ಭಕ್ತರೊಂದಿಗೆ ಕೋಲಾಟ ಪ್ರದರ್ಶಿಸಿದಳು.
- ಪಟ್ಟಣದ ಪ್ರಮುಖ ಬೀದಿಗಳಲ್ಲಿ ದೇವಿ ಮೆರವಣಿಗೆ
- ದೇವಾಂಗ ಸಮಾಜದ ವತಿಯಿಂದ ಅಭಿಷೇಕ ಹಾಗೂ ವಿಶೇಷ ಪೂಜೆ
ಕಮತಗಿ: ಪಟ್ಟಣದ ಆರಾಧ್ಯ ದೇವತೆ ರಾಮಲಿಂಗ ಚೌಡೇಶ್ವರಿ ದೇವಿ ಜಾತ್ರೆ ನಿಮಿತ್ತ ದೇವಿ ಮೆರವಣಿಗೆ ಅಪಾರ ಜನಸ್ತೋಮ ಮಧ್ಯೆ ಶನಿವಾರ ಸಡಗರ ಸಂಭ್ರಮದಿಂದ ಜರುಗಿತು.
ಪ್ರತಿ ವರ್ಷ ಬಾದಾಮಿ ಅಮಾವಾಸ್ಯೆ ದಿನದಂದು ನಡೆಯುವ ರಾಮಲಿಂಗ ಚೌಡೇಶ್ವರಿ ದೇವಿ ಜಾತ್ರೆಯಂದು ಬೆಳಗ್ಗೆ 8ಕ್ಕೆ ರಾಮಲಿಂಗ ಚೌಡೇಶ್ವರಿ ದೇವಿಗೆ ದೇವಾಂಗ ಸಮಾಜದ ವತಿಯಿಂದ ಅಭಿಷೇಕ ಹಾಗೂ ವಿಶೇಷ ಪೂಜೆ, ಮಹಾ ಮಂಗಳಾರುತಿ ನಡೆಯಿತು. ಪಟ್ಟಣದ ಸಮಸ್ತ ಜನರು ಹಣ್ಣು ಕಾಯಿ ಸಮರ್ಪಣೆ ಮಾಡುವುದರ ಜೊತೆಗೆ ಪ್ರತಿ ಮನೆಯಿಂದಲೂ ಭಕ್ತರು ದೇವಸ್ಥಾನಕ್ಕೆ ಬಂದು ನೈವೇದ್ಯ ಸಮರ್ಪಣೆ ಮಾಡಿ ದೇವಿ ಆಶೀರ್ವಾದ ಪಡೆದರು.
ಮಧ್ಯಾಹ್ನ 4ಕ್ಕೆ ರಾಮಲಿಂಗ ಚೌಡೇಶ್ವರಿ ದೇವಿ ಮುಖವಾಡವನ್ನು ಅರ್ಚಕ ಚಂದ್ರು ಅಳ್ಳಿಮನಿ ಅವರು ಧರಿಸಿದ ನಂತರ ದೇವಸ್ಥಾನದ ಮುಂದೆ ದೇವಾಂಗ ಸಮಾಜದ ವತಿಯಿಂದ ದೇವಿಗೆ ಉಡಿ ತುಂಬಿದರು. ನಂತರ ದೇವಿ ಭಕ್ತರೊಂದಿಗೆ ಕೋಲಾಟ ಪ್ರದರ್ಶಿಸಿದರು.
ದೇವಿ ಮೆರವಣಿಗೆ ದೇವಸ್ಥಾನದಿಂದ ಪ್ರಾರಂಭವಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸುತ್ತ ಭಕ್ತರ ಮನೆಗಳಿಗೆ ಹಾಗೂ ಬನಶಂಕರಿದೇವಿ, ದಾನಮ್ಮದೇವಿ ದೇವಸ್ಥಾನ ಹಾಗೂ ಗಾಂಧಿ ವೃತ್ತದಲ್ಲಿ ದೇವಿಗೆ ಭಕ್ತರು ಉಡಿ ತುಂಬಿದರು. ಗಂಗೆಯ ದರ್ಶನ ಪಡೆದುಕೊಂಡು ದೇವಿ ಮರಳಿ ದೇವಸ್ಥಾನಕ್ಕೆ ಬಂದು ಪ್ರತಿಷ್ಠಾಪನೆಗೊಂಡಳು. ಸಕಲ ವಾದ್ಯ ಮೇಳಗಳೊಂದಿಗೆ ನಡೆದ ಮೆರವಣಿಗೆಯಲ್ಲಿ ಮುತ್ತೈದೆಯರು ಕಳಸಾರತಿಯೊಂದಿಗೆ ಭಾಗವಹಿಸಿದ್ದರು.
ದೇವಾಂಗ ಸಮಾಜದ ಅಧ್ಯಕ್ಷ ಪಾಂಡುರಂಗ ಹೋಟಿ, ವೀರಭದ್ರಪ್ಪ ಆರಿ, ರವೀಂದ್ರ ಕಲಬುರ್ಗಿ, ಮುರುಗೇಶ್ ಕಡ್ಲಿಮಟ್ಟಿ, ಮಲ್ಲಪ್ಪ ಮೇದಾರ, ರಮೇಶ್ ಜಮಖಂಡಿ, ಮಹೇಶ್ ಅಚನೂರ, ಸುಭಾಷ್ ದೇಗಲ, ಗಂಗಾಧರ್ ಕ್ಯಾದಿಗೇರಿ, ರಾಘವೇಂದ್ರ ನಿಲನೂರ, ಶಿವು ಜಯ್ಯ, ಪ್ರಭಾಕರ ಗಾಡದ, ಈರಣ್ಣ ಯರಗಲ್, ಪ್ರಭು ಶಿನ್ನೂರ, ಈರಣ್ಣ ಯರಗಲ್ ಸೇರಿ ಪಟ್ಟಣದ ಎಲ್ಲ ಸಮಾಜದ ಗುರುಹಿರಿಯರು, ಯುವಕರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.