ಹಂಪಿ ಉತ್ಸವ 2026 
ರಾಜ್ಯ

ಹಂಪಿಗೆ ವೈಭವ ಜನರಿಗೆ ಉತ್ಸವ

ಪ್ರಮುಖ ಮುಖ್ಯಾಂಶಗಳು

  • ಕಲ್ಲುಗಳಲಿ ಕಂಗೊಳಿಸಿದ ಶ್ರೀಮಂತ ಸಾಮ್ರಾಜ್ಯ
  • ವಿಜಯನಗರ ವೈಭವದ ಮರುಜಾಗೃತಿ
  • ದೀಪಾಲಂಕಾರದಲ್ಲಿ ಮಿನುಗಿದ ಸ್ಮಾರಕಗಳು
  • ಇತಿಹಾಸದ ಪ್ರತಿಧ್ವನಿಯಲ್ಲಿ ಜನಸಾಗರ
ರವೀಂದ್ರ ರಡ್ಡಿ ಹಂಪಿ
ರೋಮ್ ಸಾಮ್ರಾಜ್ಯಕ್ಕೆ ಸರಿಸಮನಾಗಿ ಆಳ್ವಿಕೆ ನಡೆಸಿದ ವಿಜಯನಗರ ಸಾಮ್ರಾಜ್ಯದ ಗತವೈಭವವು ಉತ್ಸವದ ಮೂಲಕ ಮತ್ತೆ ಮೆರಗು ಪಡೆದುಕೊಂಡಿದೆ. ಶುಕ್ರವಾರದಿಂದ ಆರಂಭವಾದ ಸಾಂಸ್ಕೃತಿಕ ಮಹೋತ್ಸವ ಮೂರು ದಿನಗಳ ಕಾಲ ನಾಡಿನ ಇತಿಹಾಸ, ಪರಂಪರೆ ಮತ್ತು ಕಲೆಯನ್ನು ಅನಾವರಣಗೊಳಿಸುತ್ತಿದೆ. ವಿಶ್ವ ಪಾರಂಪರಿಕ ತಾಣವಾದ ಹಂಪಿ ಈ ಸಂದರ್ಭದಲ್ಲಿ ಐತಿಹಾಸಿಕ ಕಂಗೊಳಿನಲ್ಲಿ ತೇಜಸ್ವಿಯಾಗಿ ಕಾಣಿಸಿಕೊಂಡಿದೆ.
ಕಣ್ಣಿದ್ದವರು ಹಂಪಿ ನೋಡಬೇಕು, ಕಾಲಿದ್ದವರು ಕನಕಗಿರಿ ನೋಡಬೇಕು ಎಂಬ ನಾಣ್ಣುಡಿಯಂತೆ ಹಂಪಿಯ ಸ್ಮಾರಕಗಳು ಪ್ರತೀ ವೀಕ್ಷಣೆಯಲ್ಲೂ ಹೊಸ ಅನುಭವ ನೀಡುತ್ತವೆ. ಬೇಸಿಗೆಯ ತೀವ್ರ ಬಿಸಿಲಿನಲ್ಲಿ ನಿಶ್ಚಲವಾಗಿ ಕಾಣಿಸುವ ಕಲ್ಲಿನ ಅವಶೇಷಗಳು ಸಂಜೆಯ ಹೊತ್ತಿನಲ್ಲಿ ಬೆಳಕು-ನೆರಳಿನ ಸಂಗಮದಲ್ಲಿ ಸೃಷ್ಟಿಕಾಲದ ವೈಭವವನ್ನು ಜೀವಂತಗೊಳಿಸುತ್ತವೆ. ದೀಪಾಲಂಕಾರದಿಂದ ಮಿನುಗುವ ದೇವಾಲಯಗಳು, ರಂಗಮಂದಿರಗಳು ಮತ್ತು ಶಿಲ್ಪಗಳು ಕತ್ತಲನ್ನು ಚಿಮ್ಮಿ ಪ್ರಭೆಯನ್ನು ಹರಡುತ್ತವೆ.
ಪರಕೀಯರ ದಾಳಿಗೆ ತುತ್ತಾದರೂ ವಿಜಯನಗರದ ಸತ್ಯ ವೈಭವ ಅಳಿಯಲಿಲ್ಲ ಎಂಬ ಸಂದೇಶವನ್ನು ಹಂಪಿ ಮತ್ತೊಮ್ಮೆ ಸಾರುತ್ತಿದೆ. ವರ್ಷಪೂರ್ತಿ ವಿರಳ ಪ್ರವಾಸಿಗರನ್ನು ಸ್ವಾಗತಿಸುವ ಸ್ಮಾರಕಗಳು ಈಗ ಲಕ್ಷಾಂತರ ಜನರ ಹೆಜ್ಜೆಸದ್ದಿನಿಂದ ಮಿಡಿಯುತ್ತಿವೆ. ಮಕ್ಕಳಿಂದ ಹಿರಿಯರ ತನಕ, ದೇಶೀಯರಿಂದ ವಿದೇಶಿಗರ ತನಕ ಎಲ್ಲರಿಗೂ ಇತಿಹಾಸದ ಸ್ಪಂದನೆ ಮನಮುಟ್ಟುತ್ತಿದೆ. ಶತಮಾನಗಳ ಪಯಣದಲ್ಲಿ ಮಳೆ, ಗಾಳಿ, ಬಿಸಿಲಿನ ಹೊಡೆತ ಸಹಿಸಿಕೊಂಡರೂ ಅವಶೇಷಗಳು ತಮ್ಮ ಅಸ್ತಿತ್ವದ ಮೂಲಕ ರಾಜವಂಶದ ಭವ್ಯ ಪರಂಪರೆಯನ್ನು ಪ್ರತಿಬಿಂಬಿಸುತ್ತಿವೆ.

ಸಾಂಸ್ಕೃತಿಕ ಸಂಭ್ರಮ-ವೇದಿಕೆಗಳ ವೈವಿಧ್ಯ

ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳ ಮಧ್ಯೆಯೂ ಉತ್ಸವದ ಆಯೋಜನೆಯಲ್ಲಿ ಚುರುಕಿನಿಂದ ಕಾರ್ಯನಿರ್ವಹಿಸಿದೆ. ಬೇಸಿಗೆಯ ಉಷ್ಣತೆ ಏರಿಕೆಯಾಗಿದ್ದರೂ ಸಾಂಸ್ಕೃತಿಕ ಚಟುವಟಿಕೆಗಳನ್ನು ಸಮರ್ಪಕವಾಗಿ ನಡೆಸಿ ಜನಮನಕ್ಕೆ ತಂಪು ನೀಡುವ ಪ್ರಯತ್ನ ಮಾಡಲಾಗಿದೆ. ಉತ್ಸವ ಕಣ್ತುಂಬಿಕೊಳ್ಳಲು ವಿದೇಶಿ ಪ್ರವಾಸಿಗರು, ವಿವಿಧ ಜಿಲ್ಲೆಗಳ ಜನರು, ವಿಜಯನಗರ ಹಾಗೂ ನೆರೆ ಜಿಲ್ಲೆಗಳ ಗ್ರಾಮೀಣರು ಹಂಪಿಯತ್ತ ಹರಿದುಬಂದಿದ್ದಾರೆ. 
ಐದು ವೇದಿಕೆಗಳನ್ನು ಸಿದ್ಧಪಡಿಸಿ ಪ್ರಮುಖ ಕಾರ್ಯಕ್ರಮಗಳನ್ನು ಎಂ.ಪಿ.ಪ್ರಕಾಶ ವೇದಿಕೆ, ಬಸವಣ್ಣ ವೇದಿಕೆ ಮತ್ತು ವಿರೂಪಾಕ್ಷೇಶ್ವರ ವೇದಿಕೆಗಳಲ್ಲಿ ಹಂಚಿಕೆ ಮಾಡಲಾಗಿದೆ. ಸಾಹಿತ್ಯ, ಕಲೆ, ಸಂಸ್ಕೃತಿ, ಸಂಶೋಧನೆ, ಐತಿಹಾಸಿಕ ಚರ್ಚೆಗಳು ಹಾಗೂ ವಿಜಯನಗರ ವೈಭವ ಬಿಂಬಿಸುವ ಕಾರ್ಯಕ್ರಮಗಳು ಮೂರು ದಿನಗಳ ಕಾಲ ನಡೆಯುತ್ತಿವೆ. ವಿಚಾರಗೋಷ್ಠಿಗಳು ಜ್ಞಾನವರ್ಧಕವಾಗಿದ್ದು, ಸಾಂಸ್ಕೃತಿಕ ಪ್ರದರ್ಶನಗಳು ಮನರಂಜನೆಯೊಂದಿಗೆ ಪರಂಪರೆಯ ಅರಿವು ಮೂಡಿಸುತ್ತಿವೆ. ಜಿಲ್ಲಾಡಳಿತ ಮತ್ತು ವಿವಿಧ ಇಲಾಖೆಗಳು ಹಲವು ದಿನಗಳ ಸಿದ್ಧತೆಯೊಂದಿಗೆ ಉತ್ಸವವನ್ನು ಯಶಸ್ವಿಗೊಳಿಸಿದ್ದು, ಜನರು ಉತ್ಸಾಹದಿಂದ ಪಾಲ್ಗೊಂಡಿದ್ದಾರೆ.

ಬಾನಿನಿಂದ ವೈಭವದ ನೋಟ ಬೈ ಸ್ಕೈ ಆಕರ್ಷಣೆ

ಹಂಪಿಯನ್ನು ವಿಭಿನ್ನ ಕೋನದಲ್ಲಿ ನೋಡುವ ಅವಕಾಶವಾಗಿ ಬೈ ಸ್ಕೈ ವ್ಯವಸ್ಥೆ ಗಮನ ಸೆಳೆಯುತ್ತಿದೆ. ಗುರುವಾರದಿಂದಲೇ ಹೆಲಿಕಾಪ್ಟರ್ ಹಾರಾಟ ಆರಂಭವಾಗಿದ್ದು, ಐದುರಿಂದ ಆರು ನಿಮಿಷಗಳ ಕಾಲ ಆಕಾಶದಿಂದ ವಿಜಯನಗರದ ಭೂದೃಶ್ಯ ವೀಕ್ಷಿಸಲು ಅವಕಾಶ ನೀಡಲಾಗಿದೆ. ಬೆಳಗ್ಗಿನಿಂದ ಸಂಜೆವರೆಗೆ ಹಾರಾಟ ನಡೆಯುತ್ತಿದೆ. 
ಚಿಣ್ಣರು ಸೇರಿದಂತೆ ಎಲ್ಲ ವಯೋಮಾನದವರು ಲೋಹಪಕ್ಷಿಯಲ್ಲಿ ಹಾರಾಟ ನಡೆಸಿ ಸಂಭ್ರಮಿಸಿದ್ದಾರೆ. ಪ್ರಯಾಣಿಕರು ಹಂಪಿಯ ಸ್ಮಾರಕಗಳು, ತುಂಗಭದ್ರಾ ನದಿ, ಆನೆಗೊಂದಿ ಹಾಗೂ ಅಂಜನಾದ್ರಿ ಬೆಟ್ಟ ಸೇರಿದಂತೆ ಸುತ್ತಮುತ್ತಲಿನ ಬೆಟ್ಟ-ಗುಡ್ಡಗಳ ಶ್ರೇಣಿಯನ್ನು ವೀಕ್ಷಿಸಿ ಸಂತೋಷಪಟ್ಟಿದ್ದಾರೆ. ಕೆಲ ಶಾಲಾ ಮಕ್ಕಳು ಮತ್ತು ರೈತರಿಗೆ ಉಸ್ತುವಾರಿ ಸಚಿವ ಜಮೀರ್ ಖಾನ್ ಉಚಿತ ಹಾರಾಟದ ಅವಕಾಶ ಕಲ್ಪಿಸಿದ್ದಾರೆ.

ಜನಸಂದಣಿ, ಸಾರಿಗೆ ಮತ್ತು ವ್ಯವಸ್ಥೆ

ಜನಸಾಗರವನ್ನು ಸೆಳೆಯಲು ವಾರಾಂತ್ಯದಲ್ಲಿ ಉತ್ಸವ ಆಯೋಜಿಸಲಾಗಿದೆ. ಶುಕ್ರವಾರದಿಂದ ಹೊಸಪೇಟೆಯಿಂದ ಹಂಪಿಗೆ ಉಚಿತ ಸಾರಿಗೆ ಬಸ್ ಸೇವೆ ಪ್ರಾರಂಭಿಸಲಾಗಿದೆ. ಬೆಳಗ್ಗೆ ವಿರಳವಾಗಿ ಕಂಡುಬಂದ ಜನತೆ ಸಂಜೆ ವೇಳೆಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದರು. ಬೈಕ್, ಕಾರು ಹಾಗೂ ಬಸ್ಸುಗಳಲ್ಲಿ ಕುಟುಂಬ ಸಮೇತರಾಗಿ ಜನರು ಹರಿದುಬಂದರು. ಮಕ್ಕಳು, ಮಹಿಳೆಯರು, ಹಿರಿಯರು ಹಂಪಿಯ ವಿವಿಧ ತಾಣಗಳಲ್ಲಿ ಸಂಚರಿಸಿದರು.
ಬಿಸಿಲಿನ ತಾಪದಿಂದ ಧೂಳು ಏಳದಂತೆ ಟ್ಯಾಂಕರ್ ಮೂಲಕ ರಸ್ತೆಗಳಿಗೆ ನೀರು ಸಿಂಪಡಿಸಲಾಗಿದೆ. ಇದರಿಂದ ಉಷ್ಣತೆ ಸ್ವಲ್ಪ ಮಟ್ಟಿಗೆ ತಗ್ಗಿ, ಪರಿಸರದಲ್ಲಿ ಹಿತಕರ ವಾತಾವರಣ ನಿರ್ಮಾಣವಾಯಿತು. ಇತಿಹಾಸದ ನೆನಪು, ಸಾಂಸ್ಕೃತಿಕ ವೈವಿಧ್ಯ, ಬಾನಿನ ವೀಕ್ಷಣೆಯ ರೋಮಾಂಚ ಮತ್ತು ಸಮರ್ಪಕ ವ್ಯವಸ್ಥೆಯೊಂದಿಗೆ ವಿಜಯನಗರದ ಗತವೈಭವ ಮತ್ತೊಮ್ಮೆ ಜೀವಂತವಾಗಿದೆ. ಹಂಪಿ ಉತ್ಸವ ನಾಡಿನ ಪರಂಪರೆಯನ್ನು ಜಾಗತಿಕ ವೇದಿಕೆಯಲ್ಲಿ ಪುನಃ ಪ್ರತಿಷ್ಠಾಪಿಸಿದೆ.