ಚನ್ನರಾಯಪಟ್ಟಣದಲ್ಲಿನ ಈದ್ಗಾ ಮೈದಾನದಲ್ಲಿ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
- ಶ್ರದ್ಧಾಭಕ್ತಿಯಿಂದ ಆಚರಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಮುಸ್ಲಿಮರು
- ತ್ಯಾಗ ಮತ್ತು ಬಲಿದಾನದ ಸಂಕೇತವಾದ ಬಕ್ರಿದ್ ಹಬ್ಬ
ಚನ್ನರಾಯಪಟ್ಟಣ: ತ್ಯಾಗ ಮತ್ತು ಬಲಿದಾನದ ಸಂಕೇತವಾದ ಬಕ್ರಿದ್ ಹಬ್ಬವನ್ನು ಪಟ್ಟಣದಾದ್ಯಂತ ಮುಸ್ಲಿಮರು ಗುರುವಾರ ಶ್ರದ್ಧಾಭಕ್ತಿಯಿಂದ ಆಚರಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಪಟ್ಟಣದ ಕೆರೆ ಚಿಕ್ಕನಹಳ್ಳಿ ಗೇಟ್‌ನ ಈದ್ಗಾ ಮೈದಾನ ಬಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರಲ್ಲದೆ, ಸಕಲ ಜೀವರಾಶಿಗೆ ಒಳಿತಾಗುವಂತೆ ದೇವರಿಗೆ ಮೊರೆಯಿಟ್ಟರು. ಹಬ್ಬದ ಅಂಗವಾಗಿ ಶ್ವೇತವಸ್ತ್ರ ಧರಿಸಿದ ಮುಸ್ಲಿಮರು, ರಂಗುರಂಗಿನ ಟೋಪಿಗಳನ್ನು ತೊಟ್ಟು ಪ್ರಾರ್ಥನೆಗೆ ಬಾಗೂರು ರಸ್ತೆಗೆ ಆಗಮಿಸಿದರು. ಸಾವಿರಾರು ಜನರು ಏಕಕಾಲಕ್ಕೆ ಪ್ರಾರ್ಥನೆ ಸಲ್ಲಿಸುವುದು ಹಬ್ಬದ ವಾಡಿಕೆಯಾಗಿದ್ದು, ಮೌಲ್ವಿ, ಧರ್ಮ ಗುರುಗಳು ಹಬ್ಬದ ಸಂದೇಶ ಸಾರಿದರು. ಸಮಾಜದಲ್ಲಿ ಎಲ್ಲರೂ ಸಹೋದರರಂತೆ ಬಾಳುವಂತೆ ಇದೇ ವೇಳೆ ಕರೆ ನೀಡಲಾಯಿತು.
ಬಕ್ರೀದ್ ಹಬ್ಬ ತ್ಯಾಗದ ಪ್ರತೀಕವಾದ ಕಾರಣ ಕುರಿ ಬಲಿದಾನ ಮಾಡುವುದು ಕಂಡುಬಂತು. ನೆರೆಹೊರೆಯವರು, ಬಡವರಿಗೆ ತಮ್ಮ ಶಕ್ತಿ ಅನುಸಾರವಾಗಿ ಕುರಿ ಮಾಂಸ ದಾನ ಮಾಡಿ, ಹಬ್ಬದ ಸಂಭ್ರಮವನ್ನು ಇತರರೊಂದಿಗೆ ಹಂಚಿಕೊಂಡರು. ಪ್ರಾರ್ಥನೆ ಬಳಿಕ ಪರಸ್ಪರ ಆಲಿಂಗಿಸಿ ಶುಭಾಶಯ ವಿನಿಮಯ ಮಾಡಿಕೊಂಡರು. ಸಾಮೂಹಿಕ ಪ್ರಾರ್ಥನೆ ಅಂಗವಾಗಿ ಬಾಗೂರು ರಸ್ತೆಯಲ್ಲಿ ಹೆಚ್ಚಿನ ಭದ್ರತೆ ಒದಗಿಸಲಾಗಿತ್ತು. ಅಲ್ಲದೆ ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿತ್ತು.
ಸಾಮೂಹಿಕವಾಗಿ ಪ್ರಾರ್ಥನೆಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಎ.ಗೋಪಾಲಸ್ವಾಮಿ ಭಾಗವಹಿಸಿ ಶುಭ ಕೋರಿದರು. ಬಳಿಕ ಮಾತನಾಡಿದ ಅವರು, ತ್ಯಾಗ, ಬಲಿದಾನಗಳ ಸಂಕೇತವಾದ ಹಬ್ಬವನ್ನು ವಿಶ್ವದಾದ್ಯಾಂತ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಪ್ರವಾದಿ ಮೊಹಮ್ಮದ್ ಅವರು ತ್ಯಾಗ, ಬಲಿದಾನಗಳ ಮೂಲಕ ಬದುಕಿಗೆ ಶಕ್ತಿ ಕೊಟ್ಟರು. ಅವರ ಸಂದೇಶ, ವಿಚಾರಧಾರೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ದಾರಿಯಲ್ಲಿ ಸಾಗಬೇಕು. ಎಲ್ಲರೂ ಒಟ್ಟಾಗಿ ಸಾಮರಸ್ಯದ ಮೂಲಕ ಏಳಿಗೆ ಸಾಧಿಸಬೇಕು ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಚೌಕ್ ಮಸೀದಿ ಆಡಳಿತಾಧಿಕಾರಿಗಳಾದ ಶಮಿಲ್ ಪಾಷ, ಟಿ.ಮುನವರ್ ಪಾಷ, ಪುರಸಭಾ ಮಾಜಿ ಸದಸ್ಯ ಆನ್ಸರ್ ಪಾಷಾ, ಅಹಿಂದ ಸಂಘಟನೆ ಜಿಲ್ಲಾ ಉಪಾಧ್ಯಕ್ಷರಾದ ಝಬಿವುಲ್ಲಾ ಬೇಗ್ ತಂಝೀಮ್, ಮಹಬೂಬ್ ಪಾಷಾ, ಕೆಡಿಪಿ ಸದಸ್ಯ ಕಬ್ಬಾಳು ಮಹೇಶ್, ಆರೋಗ್ಯ ರಕ್ಷಾ ಸಮಿತಿ ಸದಸ್ಯ ನಾಗಸಮುದ್ರ ಬಾಲು, ಕಾಂಗ್ರೆಸ್ ಮುಖಂಡ ಲವಣ ಇತರರು ಹಾಜರಿದ್ದರು.