ಕೃಷಿ ಜಮೀನಿನಲ್ಲಿ ಕೃಷಿ ಕೆಲಸದಲ್ಲಿ ತೊಡಗಿರುವ ರೈತರು
ಚಿಕ್ಕಬಳ್ಳಾಪುರ: ರಸಗೊಬ್ಬರ ಖರೀದಿಸಲು ರೈತರು ಮುಂಬರುವ ದಿನಗಳಲ್ಲಿ ಕಡ್ಡಾಯವಾಗಿ ಎಫ್.ಐ.ಡಿ ಹೊಂದಿರಬೇಕು.
ಹೌದು! ರಸಗೊಬ್ಬರ ಪಾರದರ್ಶಕ ಹಂಚಿಕೆಯ ಹಿತದೃಷ್ಟಿ, ಸಮರ್ಪಕ ನಿಗಾ, ಲೋಪಗಳ ಪತ್ತೆ ಸೇರಿದಂತೆ ನಾನಾ ಕಾರಣಗಳ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಈ ನೀತಿಯನ್ನು ರೂಪಿಸಿದೆ. ರೈತರು ಕಡ್ಡಾಯವಾಗಿ ಎಫ್‌ಐಡಿ ಹೊಂದಿರಬೇಕು. ಇದರ ಸಂಖ್ಯೆಯನ್ನು ಆಯಾ ರೈತರು ಮಾಲೀಕತ್ವದ ಕೃಷಿ ಜಮೀನಿಗೆ ಜೋಡಿಸಿರಬೇಕು. ಇದರ ಆಧಾರದಲ್ಲಿಯೇ ರಸಗೊಬ್ಬರವನ್ನು ಕೆ-ಕಿಸಾನ್ ತಂತ್ರಾಂಶದ ಮೂಲಕ ವಿತರಿಸಲಾಗುತ್ತದೆ ಎಂದು ಎಂದು ಕೃಷಿ ಇಲಾಖೆ ತಿಳಿಸಿದೆ.
ರೈತರು ಎಫ್.ಐ.ಡಿ ಹೊಂದಿರದೇ ಇದ್ದಲ್ಲಿ ಜಮೀನಿನ ಎಲ್ಲ ಸರ್ವೆ ನಂಬರ್‌ಗಳ ಪಹಣಿ, ಬ್ಯಾಂಕ್ ಖಾತೆ ಪುಸ್ತಕ ಹಾಗೂ ಆಧಾರ್ ಕಾರ್ಡ್ ಸೇರಿದಂತೆ ಅಗತ್ಯ ದಾಖಲೆಗಳೊಂದಿಗೆ ಸಮೀಪದ ರೈತ ಸಂಪರ್ಕ ಕೇಂದ್ರ, ಸಾಮಾನ್ಯ ಸೇವಾ ಕೇಂದ್ರ ಮತ್ತು ಗ್ರಾಮ ಒನ್ ಕೇಂದ್ರಗಳಿಗೆ ಭೇಟಿ ನೀಡಬೇಕು. ಅರ್ಜಿ ಸಲ್ಲಿಸಿ ಎಫ್ ಐಡಿ ಸಂಖ್ಯೆ ಪಡೆಯಬೇಕು. ಎಲ್ಲ ಸರ್ವೇ ನಂಬರ್ ಗಳಿಗೂ ಲಿಂಕ್ ಮಾಡಿಸಿಕೊಂಡು ವಿಶೇಷ ಸಂಖ್ಯೆಯಲ್ಲಿ ಸೃಜಿಸಿಕೊಳ್ಳಬೇಕು.
ರಸಗೊಬ್ಬರ ಮಾರಾಟಗಾರರು ಕಡ್ಡಾಯವಾಗಿ ಯೂರಿಯಾ ರಸಗೊಬ್ಬರವನ್ನು ಕೆ-ಕಿಸಾನ್ ತಂತ್ರಾಂಶದ ಮೂಲಕವೇ ರೈತರ ಎಫ್.ಐ.ಡಿ ನಮೂದಿಸಿ ಮಾರಲಿದ್ದಾರೆ. ಇದಕ್ಕೆ ಎಲ್ಲ ಒ ಫಾರಂ ಅನ್ನು ನವೀಕರಣ ಮಾಡಿಕೊಳ್ಳಬೇಕು. ಒಂದು ವೇಳೆ ನಿಯಮ ಉಲ್ಲಂಘಿಸಿ, ಮಾರಿದ್ದಲ್ಲಿ ಹಾಗೂ ಹೆಚ್ಚು ಹಣ ಪಡೆದುಕೊಂಡಲ್ಲಿ ರಸಗೂಬ್ಬರ ನಿಯಂತ್ರಣ ಆಜ್ಞೆ 1985 ರ ಪ್ರಕಾರ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕೃಷಿ ಇಲಾಖೆ ತಿಳಿಸಿದೆ.