- * ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ
- * ಆರೋಗ್ಯ ಸಮಸ್ಯೆ ಹಿನ್ನೆಲೆ ಜನಜಾಗೃತಿಗೆ ಸೂಚನೆ
ಬೆಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ಪಾರಿವಾಳಗಳಿಗೆ ಆಹಾರ ನೀಡುವುದನ್ನು ನಿಷೇಧಿಸಿರುವ ಆರೋಗ್ಯ ಇಲಾಖೆ, ಅವುಗಳಿಂದ ಹರಡುವ ರೋಗ ತಡೆಗೆಟ್ಟಲು ಕ್ರಮಕ್ಕೆ ಸೂಚಿಸಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಸೇರಿ ರಾಜ್ಯದ ಎಲ್ಲ ಪುರಸಭೆಗಳ ಆಯುಕ್ತರು ಮತ್ತು ಮುಖ್ಯ ಅಧಿಕಾರಿಗಳಿಗೆ ಮಾರ್ಗಸೂಚಿ ಬಿಡುಗಡೆಗೊಳಿಸಿದೆ.
ತಜ್ಞರ ವರದಿ ಪ್ರಕಾರ, ಪಾರಿವಾಳಗಳ ಹಿಕ್ಕೆ ಮತ್ತು ಗರಿಗಳು ಗಂಭೀರ ಆರೋಗ್ಯ ಸಮಸ್ಯೆಯಾದ ‘ಹೈಪರ್‌ಸೆನ್ಸಿಟಿವಿಟಿ ನ್ಯೂಮೋನಿಟಿಸ್’ ಮತ್ತು ಶ್ವಾಸಕೋಶದ ಉರಿಯೂತ, ಅಲರ್ಜಿ ಹಾಗೂ ತೀವ್ರ ಉಸಿರಾಟದ ತೊಂದರೆಗೆ ಕಾರಣವಾಗುತ್ತಿವೆ. ವಿಶೇಷವಾಗಿ ಮಕ್ಕಳು, ವೃದ್ಧರು ಮತ್ತು ಈಗಾಗಲೇ ಶ್ವಾಸಕೋಶದ ಕಾಯಿಲೆಯಿಂದ ಬಳಲುತ್ತಿರುವವರಿಗೆ ಇದರಿಂದ ಹೆಚ್ಚಿನ ಅಪಾಯವಿದೆ ಎಂದು ಹೇಳಿದೆ.
ಈ ಹಿನ್ನೆಲೆ ಜನರಿಗೆ ತೊಂದರೆಯಾಗುವ ಯಾವುದೇ ಪ್ರದೇಶಗಳಲ್ಲಿ ಯಾರೂ ಪಾರಿವಾಳಗಳಿಗೆ ಆಹಾರ ನೀಡಬಾರದು. ಪಕ್ಷಿಗಳಿಗಾಗಿ ಸ್ಥಳೀಯ ಸಂಘಟನೆಗಳ ಜತೆಗೆ ಸಮಾಲೋಚಿಸಿ ಆಹಾರ ನೀಡುವ ಪ್ರದೇಶ ಗುರುತಿಸಬಹುದು. ಈ ಪ್ರದೇಶಗಳ ನಿರ್ವಹಣೆ ಹೊಣೆಯನ್ನು ಧರ್ಮದರ್ಶಿ ಸಂಸ್ಥೆ ಅಥವಾ ಸರ್ಕಾರೇತರ ಸಂಸ್ಥೆಗೆ ನೀಡಬೇಕು. ಜನರಿಂದ ದೂರು ಬಂದರೆ, ಸಂಸ್ಥೆಯು ತಕ್ಷಣದ ಕ್ರಮ ಕೈಗೊಳ್ಳಬೇಕು ಎಂದು ತಾಕೀತು ಮಾಡಿದೆ.
ವಿಮಾನ ನಿಲ್ದಾಣಗಳಿದ್ದರೆ, ಅಲ್ಲಿನ ಮುಖ್ಯ ನಿರ್ವಾಹಕರೊಂದಿಗೆ ಸಮನ್ವಯ ಸಾಧಿಸಿ ಕ್ರಮ ವಹಿಸಬೇಕು. ಸ್ಥಳೀಯ ಪ್ರಾಧಿಕಾರವು ಮಾಹಿತಿ ಲಕ, ಬ್ಯಾನರ್‌ಗಳು ಮತ್ತು ಡಿಜಿಟಲ್ ಸಂದೇಶಗಳ ಪ್ರದರ್ಶನ ಮಾಡುವ ಮೂಲಕ ಆರೋಗ್ಯದ ಅಪಾಯ, ದಂಡದ ಮೊತ್ತ, ಪಕ್ಷಿ ಸಂರಕ್ಷಣಾ ವಿಧಾನದ ಬಗ್ಗೆ ಜಾಗೃತಿ ಮೂಡಿಸುವಂತೆ ಇಲಾಖೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದೆ.
ಪ್ರಮುಖ ಅಂಶಗಳು
* ಪಾರಿವಾಳಗಳಿಗೆ ಆಹಾರ ನೀಡಲು ಗೊತ್ತುಪಡಿಸಿದ ಪ್ರದೇಶಗಳನ್ನು ಪಾಲುದಾರರೊಂದಿಗೆ ಸಮಾಲೋಚಿಸಿ ಆಯ್ಕೆ ಮಾಡಬೇಕು. ಬೆಳಗ್ಗೆ 7ರಿಂದ 9 ರವರೆಗೆ ಮಾತ್ರ ಆಹಾರ ನೀಡಲು ಅವಕಾಶ.
* ವಿಮಾನ ನಿಲ್ದಾಣದ ಸಮೀಪ ಪಾರಿವಾಳಗಳಿಗೆ ಆಹಾರ ನೀಡಬಾರದು. ಇದಕ್ಕಾಗಿ ಸಂಬಂಧಪಟ್ಟ ವಿಮಾನ ನಿಲ್ದಾಣ ನಿರ್ವಾಹಕರೊಂದಿಗೆ ಸಮನ್ವಯ ಅಗತ್ಯ.
* ಪಾರಿವಾಳಗಳಿಗೆ ಆಹಾರ ನೀಡುವ ಸ್ಥಳ ಆಸ್ಪತ್ರೆ, ಶಾಲೆ, ವಸತಿ ಪ್ರದೇಶ, ಮಾರುಕಟ್ಟೆ, ಉದ್ಯಾನವನ, ಕೆರೆ, ಆಹಾರ ಸಂಸ್ಥೆಗಳು ಸೇರಿ ಸಾರ್ವಜನಿಕ ಸ್ಥಳಗಳಿಂದ ದೂರವಿರಬೇಕು.
* ಅನುಮೋದಿತ ಧಾನ್ಯ ಅಥವಾ ಆಹಾರವನ್ನು ಮಾತ್ರ ನೀಡಬೇಕು.
* ಬೇಯಿಸಿದ ಆಹಾರ, ಆಹಾರದ ತ್ಯಾಜ್ಯ, ಬ್ರೆಡ್ ಇತರ ತ್ಯಾಜ್ಯವನ್ನು ಎಸೆಯುವಿಕೆ ನಿಷೇಧ.
* ಆಹಾರ ನೀಡುವುದರಿಂದ ಪಾದಚಾರಿಗಳ ಸಂಚಾರಕ್ಕೆ, ವಾಹನ ಸಂಚಾರಕ್ಕೆ ತೊಂದರೆ ಆಗಬಾರದು.
* ಆಯುಕ್ತರ ಒಪ್ಪಿಗೆ ಪಡೆದ ಸಂಸ್ಥೆಗಳು ಮಾತ್ರ ಈ ಪ್ರದೇಶ ನಿರ್ವಹಿಸತಕ್ಕದ್ದು.
* ಪಾರಿವಾಳದ ಹಿಕ್ಕೆ, ಉಳಿದ ಆಹಾರ ಮತ್ತು ಇತರ ತ್ಯಾಜ್ಯಗಳನ್ನು ಪ್ರತಿದಿನ ತೆಗೆಯಬೇಕು.