ಬೆಂಗಳೂರು: ಭೂಮಾಪನ ಇಲಾಖೆಯಲ್ಲಿ ಮೂಲ ದಾಖಲೆಯ ನಕಲುಗಳ ವಿತರಣಾ ಶುಲ್ಕ ಪರಿಷ್ಕರಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಸರ್ವೇ ದಾಖಲೆಗಳ ನಕಲು ಪ್ರತಿಗೆ ವಿತರಣಾ ಶುಲ್ಕ ಎಷ್ಟು ವಿಧಿಸಬೇಕೆಂದು ಅಧೀನ ಕಚೇರಿಗಳಲ್ಲಿ ಗೊಂದಲ ಉಂಟಾಗಿತ್ತು. ಆದ್ದರಿಂದ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆ ಏಕರೂಪದ ಶುಲ್ಕ ಪಾವತಿಗೆ ಆದೇಶಿಸಿದೆ.
ಆದೇಶದ ಪ್ರಕಾರ, ಅಟ್ಲಾಸ್ ನಕ್ಷೆಗಳು, ಸರ್ವೇ ಸ್ಕೆಚ್‌ಗಳು, ಖರಾಬು ಉತಾರ, ಕರ್ದಾ ಉತಾರ,
ಹಿಸ್ಸಾ ನಂಬರಿನ ಆಕಾರಬಂದು, ನೀರಾವರಿ ಸಂಬಂಧಿತ ಸಾರಗಳು, ಕ್ಷೇತ್ರ ಅಳತೆ ಪುಸ್ತಕಗಳು, ಗ್ರಾಮ ನಕ್ಷೆಗಳು ಸೇರಿ ವಿವಿಧ ಸರ್ವೇ ದಾಖಲೆಗಳ ಪ್ರತಿಗಳು ಈಗ ಪರಿಷ್ಕೃತ ಶುಲ್ಕಗಳಿಗೆ ಒಳಪಡಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪರಿಷ್ಕೃತ ಶುಲ್ಕದ ಪ್ರಕಾರ ಪ್ರತಿ ಸರ್ವೇ ಅಥವಾ ಹಿಸ್ಸಾ ನಂಬರಿನ ಅಟ್ಲಾಸ್, ಟಿಪ್ಪಣಿ, ಹಿಸ್ಸಾ ನಂಬರಿನ, ಕರ್ದಾ ಉತಾರ ಅಥವಾ ಖರಾಬು ಉತಾರ ಅಥವಾ ನೀರಿನ ಆಶ್ರಯದ ವಿವರದ ನಕಲು ಪ್ರತಿಗೆ ತಲಾ 35 ರೂ. ನಿಗದಿ ಮಾಡಲಾಗಿದೆ.
ನಕಾಶೆಯಲ್ಲಿ ಹೊರಡಿಸಲಾದ ಪ್ರತಿ ಸರ್ವೇ ನಂಬರಿನ ನಕಲು ಪ್ರತಿ, ನೋಟಿಸ್ ಕಾಪಿ, ಅರ್ಜಿಯ ನಕಲು, ಹೇಳಿಕೆ, ಮಹಜರು ಪ್ರತಿಗೆ ತಲಾ 10 ರೂ. ನಿಗದಿಪಡಿಸಲಾಗಿದೆ. ಒಂದು ಹಿಸ್ಸಾ ನಂಬರಿನ ಬಾಬ್ತು ತಯಾರಿಸಿದ ಆರ್‌ಆರ್ ಪಕ್ಕಾಬುಕ್ಕಿನ ಬಲ ಮತ್ತು ಎಡಭಾಗದ ನಕಲು ಪ್ರತಿಗೆ, ಪ್ರತಿ ಒಂದು ಸರ್ವೇ ನಂಬರ್, ಹಿಸ್ಸಾ ನಂಬರಿನ ಆರ್‌ಆರ್ ಟಿಪ್ಪಣಿ ಬುಕ್ಕಿನ ನಕಲು ಕರ್ದಾ ಮತ್ತು ವಿಸ್ತೀರ್ಣದ ಟಿಪ್ಪಣಿ ಮತ್ತು ಖರಾಬು ವಿವರಕ್ಕೆ ತಲಾ 35 ರೂ. ನಿಗದಿ ಮಾಡಲಾಗಿದೆ.
ಪ್ರತಿಯೊಂದು ನಗರ ಮಾಪನ ಸರ್ವೇ ನಂಬರಿನ ಮೂಲ ಪಿಟಿ ಶೀಟಿನ ನಕಲು, ಫೀಲ್ಡ್ ಬುಕ್ ನಕಲು, ವಿಚಾರಣಾ ರಿಜಿಸ್ಟ್ರರಿನ ಪ್ರತಿ ಎಂಟ್ರಿಗೆ ತಲಾ 30 ರೂ. ಶುಲ್ಕ ಪರಿಷ್ಕರಣೆ ಮಾಡಲಾಗಿದೆ ಎಂದು ಕಂದಾಯ ಇಲಾಖೆ ಮಾಹಿತಿ ನೀಡಿದೆ.