ಅರಕಲಗೂಡು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯುತ್ತಿರುವ ಆಡಿಟೋರಿಯಂ ಕಾಮಗಾರಿಯನ್ನು ಶಾಸಕ ಎ.ಮಂಜು ವೀಕ್ಷಿಸಿದರು. ಬಾಲಾಜಿ, ಮಂಜುನಾಥ್ ಇತರರಿದ್ದರು.
- ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2026-27ನೇ ಸಾಲಿನ ಬಿಎ ಮತ್ತು ವಾಣಿಜ್ಯ ಹಾಗೂ ವಿಜ್ಞಾನ ವಿಭಾಗ
- ಬಡ ವಿದ್ಯಾರ್ಥಿಗಳಿಗೆ ಸಂಪೂರ್ಣವಾಗಿ ಉಚಿತವಾಗಿ ಪ್ರವೇಶಾತಿ
ಅರಕಲಗೂಡು: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2026-27ನೇ ಸಾಲಿನ ಬಿಎ ಮತ್ತು ವಾಣಿಜ್ಯ ಹಾಗೂ ವಿಜ್ಞಾನ ವಿಭಾಗಕ್ಕೆ ಪ್ರವೇಶ ಆರಂಬವಾಗಿದ್ದು, ವಿದ್ಯಾರ್ಥಿಗಳು ತ್ವರಿತವಾಗಿ ಪ್ರವೇಶ ಪಡೆದರೆ ಶುಲ್ಕ ವಿನಾಯಿತಿ ಹಾಗೂ ಬಡ ವಿದ್ಯಾರ್ಥಿಗಳಿಗೆ ಸಂಪೂರ್ಣವಾಗಿ ಉಚಿತವಾಗಿ ಪ್ರವೇಶಾತಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಶಾಸಕ ಎ.ಮಂಜು ಹೇಳಿದರು.
ಕಾಲೇಜಿನಲ್ಲಿ ಪ್ರಗತಿಯಲ್ಲಿರುವ ಆಡಿಟೋರಿಯಂ ಕಾಮಗಾರಿಯನ್ನು ಇತ್ತೀಚೆಗೆ ವೀಕ್ಷಣೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರಿ ಕಾಲೇಜಿಗೆ ಹೆಚ್ಚಿನ ಪ್ರಮಾಣದಲ್ಲಿ ರೈತರು, ಬಡ ಕುಟುಂಬದ ಮಕ್ಕಳು ಸೇರ್ಪಡೆಗೊಳ್ಳುತ್ತಿದ್ದು, ಈ ಸಲುವಾಗಿ ಪ್ರವೇಶಾತಿ ಪಡೆಯುವ ಎಲ್ಲ ವಿದ್ಯಾರ್ಥಿಗಳಿಗೂ ಶುಲ್ಕ ಪಡೆಯದೆ ಉಚಿತವಾಗಿ ಪ್ರವೇಶಾತಿಗೆ ಅವಕಾಶ ಮಾಡಿಕೊಡಲಾಗಿದೆ ಎಂದು ತಿಳಿಸಿದರು.
ಕಾಲೇಜಿನಲ್ಲಿ ಮೂಲ ಸೌಕರ್ಯವಿದ್ದು, ಪ್ರಮುಖವಾಗಿ ವಿದ್ಯಾರ್ಥಿಗಳಿಗೆ ಉಚಿತ ವಸತಿ ನಿಲಯ ವ್ಯವಸ್ಥೆ ಕೂಡ ಇದೆ. ನುರಿತ ಉಪನ್ಯಾಸಕರ ಬಳಗವಿದ್ದು, ವಿಷಯ ತಜ್ಞರುಗಳನ್ನು ಆಹ್ವಾನಿಸಿ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ಕೊಡಸಲಾಗುತ್ತದೆ ಎಂದರು.
ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣಗಳನ್ನು ಉತ್ತೇಜಿಸುವ ಸಲುವಾಗಿ ಎನ್‌ಎಸ್‌ಎಸ್ ವಿಭಾಗ, ಸಾಂಸ್ಕೃತಿಕ ಘಟಕ, ಸ್ಕೌಟ್ಸ್ ಮತ್ತು ಗೈಡ್ಸ್, ಯುವ ರೆಡ್‌ಕ್ರಾಸ್, ಆಪ್ತ ಸಮಾಲೋಚನಾ ಸಮಿತಿ ಸೇರಿದಂತೆ ಮುಂತಾದವ ವಿಶೇಷತೆಗಳನ್ನು ಕಾಲೇಜು ಹೊಂದಿದೆ. 22ಸಾವಿರ ಪುಸ್ತಕಗಳನ್ನು ಹೊಂದಿರುವ ಬೃಹತ್ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ಕಾರ್ಯನಿರ್ವಹಿಸುತ್ತಿದೆ ಎಂದು ಮಾಹಿತಿ ನೀಡಿದರು.
ಆಡಿಟೋರಿಯಂ ನಿರ್ಮಾಣ: ತಾಲೂಕಿನಲ್ಲಿಯೇ ಪ್ರಥಮ ಎನ್ನಲಾದ 3.31ಕೋಟಿ ರೂ. ವೆಚ್ಚದಲ್ಲಿ ಬೃಹತ್ ಆಡಿಟೋರಿಯಂ ನಿರ್ಮಿಸಲಾಗುತ್ತಿದೆ. ಇದರೊಂದಿಗೆ ಒಳಾಂಗಣ ಕ್ರೀಡಾಂಗಣ ಕೂಡ ನಿರ್ಮಾಣಗೊಳ್ಳಲಿದೆ ಎಂದು ತಿಳಿಸಿದರು. ಸಿಡಿಸಿ ಉಪಾಧ್ಯಕ್ಷ ಬಾಲಾಜಿ, ಪ್ರಾಂಶುಪಾಲ ಮಂಜುನಾಥ್ ಇತರರು ಇದ್ದರು.