ಬೆಂಗಳೂರು: ಅವಿವಾಹಿತ ಮಗಳ ಉನ್ನತ ಶಿಕ್ಷಣದ ವೆಚ್ಚವನ್ನು ಭರಿಸುವುದು ತಂದೆಯ ನೈತಿಕ ಮತ್ತು ಕಾನೂನುಬದ್ಧ ಕರ್ತವ್ಯವಾಗಿದೆ. ಆಕೆಗೆ 18 ವರ್ಷ ದಾಟಿದ್ದು, ವಯಸ್ಕಳಾಗಿದ್ದಾಳೆ ಎಂಬ ಕಾರಣಕ್ಕೆ ಮಗಳ ಶಿಕ್ಷಣದ ಮತ್ತು ಆರೋಗ್ಯದ ಅವಶ್ಯಕತೆಗಳನ್ನು ಪೂರೈಸುವ ತಂದೆಯ ಜವಾಬ್ದಾರಿ ಕೊನೆಯಾಗುವುದಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಎಂಡಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ ಮಗಳ ಮೊದಲ ವರ್ಷದ ವಿದ್ಯಾಭ್ಯಾಸದ ಖರ್ಚಿಗೆ 16 ಲಕ್ಷ ರೂಪಾಯಿ ಪಾವತಿಸಲು ಆದೇಶಿಸಿದ್ದ ಜಿಲ್ಲಾ ನ್ಯಾಯಾಲಯದ ಆದೇಶದ ಪ್ರಶ್ನಿಸಿ ಮಂಗಳೂರು ಮೂಲದ ಉದ್ಯಮಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿರುವ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ನೀಡಿದೆ.
ಸುಪ್ರೀಂ ಕೋರ್ಟ್ನ ತೀರ್ಪುಗಳನ್ನು ಉಲ್ಲೇಖಿಸಿರುವ ನ್ಯಾಯಪೀಠ, ತನ್ನ ಶಿಕ್ಷಣವನ್ನು ಮುಂದುವರಿಸಲು ತಮ್ಮ ಆರ್ಥಿಕ ಸಂಪನ್ಮೂಲಗಳ ಮಿತಿಯೊಳಗೆ ಪಾಲಕರು ಹಣಕಾಸಿನ ನೆರವು ಒದಗಿಸಬೇಕು ಎಂದು ಕೋರಲು ಹೆಣ್ಣು ಮಕ್ಕಳಿಗೆ ಕಾನೂನಾತ್ಮಕ ಹಕ್ಕಿದೆ ಎಂದು ಹೇಳಿದೆ. ಮಗಳು ವಯಸ್ಕಳಾಗಿರುವುದರಿಂದ ಬ್ಯಾಂಕ್ನಿಂದ ಸಾಲ ಪಡೆದು ಓದಲಿ ಎಂದು ಹೇಳಲು ಸಾಧ್ಯವಿಲ್ಲ. ಆಕೆಗೆ ಸ್ವಂತ ಆದಾಯವಿಲ್ಲದಿರುವುದರಿಂದ ಮತ್ತು ಇಂದಿನ ವೈದ್ಯಕಿಯ ಕ್ಷೇತ್ರದಲ್ಲಿ ಎಂಡಿ ಪದವಿಯಿಲ್ಲದೆ ಎಂಬಿಬಿಎಸ್ಗೆ ಹೆಚ್ಚಿನ ಮೌಲ್ಯವಿಲ್ಲದ ಕಾರಣ, ಅದಕ್ಕೆ ತಗಲುವ ವೆಚ್ಚವನ್ನು ತಂದೆಯೇ ಭರಿಸಬೇಕು ಎಂದು ಆದೇಶಿಸಿದೆ.
ಪಾಲಕರ ಜಗಳದಲ್ಲಿ ಬಡವಾದ ಕೂಸು:
ಎಂಬಿಬಿಎಸ್ ಮುಗಿಸಿದ ನಂತರ ಪಿಜಿ ನೀಟ್ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ್ದ ವಿದ್ಯಾರ್ಥಿನಿಯು ಮಂಗಳೂರಿನ ಖಾಸಗಿ ಮೆಡಿಕಲ್ ಕಾಲೇಜಿನಲ್ಲಿ ಸೀಟು ಪಡೆದಿದ್ದಳು. ಮೊದಲ ವರ್ಷದ ಕಾಲೇಜು ಶುಲ್ಕ ಮತ್ತು ಇತರ ವೆಚ್ಚಗಳಿಗಾಗಿ ಒಟ್ಟು 16 ಲಕ್ಷ ರೂಪಾಯಿಗಳ ಅಗತ್ಯವಿತ್ತು. ಆದರೆ, ತಂದೆ ಮತ್ತು ತಾಯಿಯ ನಡುವಿನ ಕೌಟುಂಬಿಕ ಭಿನ್ನಾಭಿಪ್ರಾಯಗಳ ಕಾರಣ ಮಗಳು ತೊಂದರೆಗೆ ಸಿಲುಕಿದ್ದಳು. ಶುಲ್ಕ ತುಂಬುವುದು ಅನಿವಾರ್ಯವಾಯದ ಕಾರಣ ತನ್ನ ಅಜ್ಜನಿಂದ 13.87 ಲಕ್ಷ ರೂ. ಸಾಲ ಪಡೆದು ಕೆಇಎ ಮತ್ತು ಕಾಲೇಜಿಗೆ ಕಟ್ಟಿದ್ದಳು. ಆನಂತರ ತನ್ನ ತಂದೆಯಿಂದ ವಿದ್ಯಾಭ್ಯಾಸಕ್ಕೆ ಹಣ ಕೊಡಿಸುವಂತೆ ಕೌಟುಂಬಿಕ ದೌರ್ಜನ್ಯ ಕಾಯ್ದೆ ಅಡಿಯಲ್ಲಿ ಮ್ಯಾಜಿಸ್ಟ್ರೆಟ್ ನ್ಯಾಯಾಲಯದ ಮೊರೆ ಹೋಗಿದ್ದಳು. ಇದನ್ನು ಪರಿಗಣಿಸಿದ್ದ ನ್ಯಾಯಾಲಯ 16 ಲಕ್ಷ ರೂ. ಪಾವತಿಸಲು ಆದೇಶ ನೀಡಿತ್ತು. ಈ ಆದೇಶವನ್ನು ಜಿಲ್ಲಾ ನ್ಯಾಯಾಲಯವು ಕೂಡ ಎತ್ತಿಹಿಡಿದಿತ್ತು.
ℹ️ ವಯಸ್ಕಳೂ ಹಕ್ಕು ಸಾಧಿಸಬಹುದು
ತನ್ನ ಮಗಳಿಗೆ 18 ವರ್ಷ ದಾಟಿದ್ದು, ವಯಸ್ಕಳಾಗಿದ್ದಾಳೆ. ಅಲ್ಲದೆ, ಪಿಜಿ ವ್ಯಾಸಂಗದ ಅವಧಿಯಲ್ಲಿ ತಿಂಗಳಿಗೆ 60 ಸಾವಿರ ರೂಪಾಯಿ ಸ್ಟೆ$ಂಡ್ ಸಿಗುವುದರಿಂದ ಆಕೆಗೆ ತಾನು ಹಣ ಪಾವತಿಸುವ ಅಗತ್ಯವಿಲ್ಲ ಎಂಬ ತಂದೆಯ ವಾದವನ್ನು ಹೈಕೋರ್ಟ್ ತಿರಸ್ಕರಿಸಿದೆ. ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಹೆಣ್ಣು ಮಗಳು ವಯಸ್ಕಳಾದ ತಕ್ಷಣ ಮಹಿಳೆ ಎಂಬ ವ್ಯಾಖ್ಯಾನದಡಿಯಲ್ಲಿ ಬರುತ್ತಾಳೆ. ಆಗ ಆಕೆಯು ತನಗೆ ಸಿಗಬೇಕಾದ ಶೈಕ್ಷಣಿಕ ಹಕ್ಕು ಮತ್ತು ಆರ್ಥಿಕ ನೆರವನ್ನು ಆರ್ಥಿಕ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತ ಮಹಿಳೆ ಎಂಬ ಆಧಾರದಲ್ಲಿ ಕೋರಬಹುದು ಎಂದು ಹೇಳಿ ತಂದೆಯ ಅರ್ಜಿ ವಜಾಗೊಳಿಸಿದೆ.
ಆರ್ಥಿಕ ಸಾಮರ್ಥ್ಯ ಪರಿಗಣನೆ:
ತಾನು ಆರ್ಥಿಕ ನಷ್ಟದಲ್ಲಿದ್ದು, ಸಾಲಗಾರನಾಗಿದ್ದೇನೆ ಎಂಬ ತಂದೆಯ ವಾದವನ್ನೂ ನ್ಯಾಯಪೀಠ ತಳ್ಳಿಹಾಕಿದೆ. ಅವರ ಐಟಿ ರಿರ್ಟನ್ ಮತ್ತು ಬ್ಯಾಂಕ್ ದಾಖಲೆಗಳನ್ನು ಪರಿಶೀಲಿಸಿ, ಅರ್ಜಿದಾರರು ಕೋಟ್ಯಂತರ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ. ಅಲ್ಲದೆ, ವಿವಿಧ ಬ್ಯಾಂಕ್ಗಳಿಂದ ದೊಡ್ಡಮೊತ್ತದ ಸಾಲಗಳನ್ನು ಪಡೆದು ಮರುಪಾವತಿಸುವ ಸಾಮರ್ಥ್ಯ ಹೊಂದಿರುವುದು ದಾಖಲೆಗಳಿಂದ ಸಾಬೀತಾಗಿದೆ. ಮಗಳು ಎಂಬಿಬಿಎಸ್ ಸೇರುವಾಗ ಪಾಲಕರಿಬ್ಬರೂ ಒಟ್ಟಿಗೆ ನಿಧಾರ ಕೈಗೊಂಡಿರುವುದರಿಂದ, ಉನ್ನತ ಶಿಕ್ಷಣದ ಜವಬ್ದಾರಿಯಿಂದ ತಂದೆ ಈಗ ಹಿಂದೆ ಸರಿಯಲು ಸಾಧ್ಯವಿಲ್ಲ ಎಂದು ಹೇಳಿದೆ.
✅ ವಿದ್ಯೆ ಮಾತ್ರ ಅವಿನಾಶಿ ಆಸ್ತಿ
ತಂದೆಯಾದವನ್ನು ತನ್ನ ಮಗುವಿಗೆ ನೀಡಬಹುದಾದ ಅತ್ಯಂತ ಶ್ರೇಷ್ಠ ಕೊಡುಗೆ ಎಂದರೆ ವಿದ್ಯೆ. ಕಲಿಕೆ ಅಥವಾ ಜ್ಞಾನ ಮಾತ್ರವೇ ಅವಿನಾಶಿಯಾಗಿದ್ದು, ಉಳಿದ ಭೌತಿಕ ವಸ್ತುಗಳಿಗಿಂತ ವಿಶೇಷ ಮೌಲ್ಯ ಹೊಂದಿದೆ. ಆದ್ದರಿಂದ ಉತ್ತಮ ಶಿಕ್ಷಣ ನೀಡುವ ಮೂಲಕ ಸಮಾಜದಲ್ಲಿ ಗೌರವಯುತವಾದ ಸ್ಥಾನ ಪಡೆಯಲು ಮಕ್ಕಳನ್ನು ಸಿದ್ಧಪಡಿಸುವುದು ತಂದೆಯ ಕಾನೂನಾತ್ಮಕ ಮತ್ತು ನೈತಿಕ ಹೊಣೆಗಾರಿಕೆಯಾಗಿದೆ. ಇದು ಜಗತ್ತಿನಾದ್ಯಂತ ಒಪ್ಪಿತ ಸಂಪ್ರದಾಯವಾಗಿದೆ ಎಂದು ತೀರ್ಪಿನಲ್ಲಿ ಕೋರ್ಟ್ ಅವಲೋಕನ ಮಾಡಿದೆ.