ಮಗಳನ್ನೇ ಕೊಲೆಗೈದ ಆರೋಪಿ ತಂದೆ
- ಮದುವೆ ವಿಚಾರಕ್ಕೆ ಮನೆಯಲ್ಲಿ ಮಗಳೊಂದಿಗೆ ಪದೇ ಪದೇ ಗಲಾಟೆ
- ಮಾತಿಗೆ ಬಗ್ಗದ ಮಗಳನ್ನು ಬಾವಿಗೆ ನೂಕಿ ಕೊಂದ ಪಾಪಿ ತಂದೆ
ತುಮಕೂರು: ಮಗಳ ಭವಿಷ್ಯಕ್ಕೆ ಬೆಳಕಾಗಬೇಕಿದ್ದ ತಂದೆಯೇ, ಆಕೆಯ ಉಸಿರನ್ನು ನಿಲ್ಲಿಸಿದ ಹೃದಯ ವಿದ್ರಾವಕ ಘಟನೆಯೊಂದು ತುಮಕೂರಿನ ಶಿರಾ ತಾಲೂಕಿನ ನಿಂಬೆಮರದಹಳ್ಳಿಯಲ್ಲಿ ವರದಿಯಾಗಿದೆ.
ಮೃತ ಬಾಲಕಿಯನ್ನು ಮೇಘನಾ (17) ಎಂದು ಗುರುತಿಸಲಾಗಿದೆ. ತಮ್ಮದೇ ಕುಟುಂಬದ ಹುಡುಗನ ಜೊತೆ ವಿವಾಹಕ್ಕೆ ಒಪ್ಪಿದ್ದ ಮಗಳ ನಿರ್ಧಾರವನ್ನು ವಿರೋಧಿಸಿದ್ದ ತಂದೆ, ಇದೇ ವಿಷಯಕ್ಕೆ ಪದೇ ಪದೇ ಮಗಳ ಜೊತೆಗೆ ಜಗಳವಾಡಿದ್ದ. ಯಾವಾಗ ಮಗಳು ತನ್ನ ಮಾತನ್ನು ಧಿಕ್ಕರಿಸಿ, ಎದುರಾಗಿ ನಿಂತಳೋ, ಆಗಲೇ ಆಕೆಯ ಕೊಲೆಗೆ ಈತ ಮಹೂರ್ತ ಫಿಕ್ಸ್ ಮಾಡಿದ್ದ.
ಕಳೆದ ಒಂದು ತಿಂಗಳಿನಿಂದ ಕಣ್ಮರೆಯಾಗಿದ್ದ ಮೇಘನಾಳನ್ನು ಮಿಸ್ಸಿಂಗ್ ಕೇಸ್ನಡಿ ಪೊಲೀಸರು ಶೋಧಿಸಲು ಆರಂಭಿಸಿದರು. ಎಲ್ಲ ಆಯಾಮಗಳಲ್ಲಿ ತನಿಖೆ ಕೈಗೊಂಡ ಖಾಕಿಗೆ ಬಾಲಕಿ ಸ್ವಂತ ತಂದೆಯಿಂದಲೇ ಕೊಲೆಯಾಗಿದ್ದಾಳೆ ಎಂಬುದು ಸ್ಪಷ್ಟವಾಯಿತು. ತಕ್ಷಣವೇ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಪೊಲೀಸರು, ಕಡೆಗೂ ಆರೋಪಿಯಿಂದ ಸತ್ಯ ಕಕ್ಕಿಸುವಲ್ಲಿ ಸಫಲರಾಗಿದ್ದಾರೆ.
ಮದುವೆ ಪ್ರಸ್ತಾಪ, ಬಾವಿಗೆ ತಳ್ಳಿ ಕೊಲೆ
ಖಾಕಿ ಮೂಲಗಳ ಪ್ರಕಾರ, ಮೃತ ಮೇಘನಾಳಿಗೆ ಇನ್ನೂ 18 ವರ್ಷ ಆಗಿರಲಿಲ್ಲ. ಇನ್ನೇನು ಕೆಲವು ತಿಂಗಳಲ್ಲಿ ತುಂಬಲಿದೆ ಎಂಬುದನ್ನು ಅರಿತಿದ್ದ ಬಾಲಕಿಯ ತಾಯಿ ನಿರ್ಮಲಾ, ತಮ್ಮ ಸಂಬಂಧಿಕರ ಮಗನಿಗೆ ಕೊಟ್ಟು ಮದುವೆ ಮಾಡಲು ಮಾತುಕತೆ ಮಾಡಿದ್ದರು. ಇದಕ್ಕೆ ಮೇಘನಾ ಕೂಡ ಒಪ್ಪಿಗೆ ನೀಡಿದ್ದರು ಎನ್ನಲಾಗಿದೆ. ವರನ ಕಡೆಯವರು ಅದಾಗಲೇ ಮದುವೆಗಾಗಿ ಸೀರೆ, ಮಾಂಗಲ್ಯ ಸರ ಸೇರಿ ಇನ್ನಿತರ ವಸ್ತುಗಳನ್ನು ಖರೀದಿಸಿದ್ದರು. ಆದರೆ, ಅಷ್ಟರಲ್ಲಿ ತಂದೆಯ ಸಿಟ್ಟಿಗೆ ಬಾಲಕಿಯ ಪ್ರಾಣಪಕ್ಷಿ ಹಾರಿಹೋಗಿದೆ.
ಆರೋಪಿ ತಿಮ್ಮರಾಯಪ್ಪ ಮಗಳ ಮದುವೆಗೆ ಭಾರೀ ವಿರೋಧ ವ್ಯಕ್ತಪಡಿಸಿದ್ದ. ಇದೇ ವಿಷಯವಾಗಿ ಕಳೆದ ನಾಲ್ಕೈದು ತಿಂಗಳುಗಳಿಂದ ಮನೆಯಲ್ಲಿ ಪದೇ ಪದೇ ಮೇಘನಾ ಜೊತೆಗೆ ಜಗಳಗಳು ಮಾಡುತ್ತಿದ್ದ ಎನ್ನಲಾಗಿದೆ. ಏ.15ರಂದು ಮನೆಯಲ್ಲಿ ಮದುವೆ ವಿಚಾರವಾಗಿ ಮತ್ತೊಮ್ಮೆ ದೊಡ್ಡ ಜಗಳ ನಡೆದಿತ್ತು. ಅದಾದ ಮರುದಿನವೇ (ಏಪ್ರಿಲ್ 16) ತಾಯಿ ನಿರ್ಮಲಾ ಕೂಲಿ ಕೆಲಸ ಮುಗಿಸಿ ಸಂಜೆ 6:30ರ ಸುಮಾರಿಗೆ ಮನೆಗೆ ಮರಳಿದಾಗ ಮೇಘನಾ ಇನ್ನೂ ವಾಪಾಸ್ ಆಗಿರಲಿಲ್ಲ. ಆಕೆಯ ಫೋನ್‌ಗೆ ಕರೆ ಮಾಡಿದಾಗ ಸ್ವಿಚ್ ಆಫ್ ಬಂದಿತು.
ಸಂಜೆಯಾದರೂ ಮನಗೆ ಬಾರದ ಮಗಳನ್ನು ನೆನೆದು ಆತಂಕಗೊಂಡ ತಾಯಿ, ಆಕೆ ನಾಪತ್ತೆಯಾಗಿದ್ದಾಳೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಶಾಕಿಂಗ್ ಎಂದರೆ, ಪೊಲೀಸರಿಗೆ ದೂರು ನೀಡಲು ಹೋಗುವಾಗ ಕೊಲೆ ಮಾಡಿದ ತಂದೆ ತಿಮ್ಮರಾಯಪ್ಪ ಕೂಡ ಪತ್ನಿಯ ಜೊತೆಗೆ ಬಂದು, ಮಗಳನ್ನು ಹುಡುಕಿಕೊಡಿ ಎಂದು ಕಣ್ಣೀರಿಟ್ಟಿದ್ದ ಎನ್ನಲಾಗಿದೆ. ತನ್ನ ಮೇಲೆ ಯಾರಿಗೂ ಅನುಮಾನ ಬಾರದಂತೆ ನಡೆಸುಕೊಳ್ಳುತ್ತಿದ್ದ ತಿಮ್ಮರಾಯಪ್ಪನ ಕರಾಳ ಮುಖವನ್ನು ತನಿಖೆಯಲ್ಲಿ ಪೊಲೀಸರು ಬಟಾಬಯಲು ಮಾಡಿದ್ದಾರೆ.
ಬಾವಿಗೆ ತಳ್ಳಿ, ಕಲ್ಲು ಎಸೆದು ಕ್ರೂರ ಕೊಲೆ!
ತನಿಖೆ ಚುರುಕುಗೊಳಿಸಿದ ಪೊಲೀಸರು ತಿಮ್ಮರಾಯಪ್ಪನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಮಗಳನ್ನು ಕೊಂದದ್ದು ತಾನೇ ಎಂದು ಆತ ಒಪ್ಪಿಕೊಂಡಿದ್ದಾನೆ. ಏ.16ರಂದು ಜಗಳ ವಿಕೋಪಕ್ಕೆ ಹೋಯಿತು, ಆಗ ಮೇಘನಾಳನ್ನು ಹತ್ತಿರದ ಸರ್ಕಾರಿ ಬಾವಿಗೆ ನೂಕಿದೆ. ಆಕೆ ಜೀವಂತವಾಗಿರುವುದು ಬೇಡವೆಂದು ಕಲ್ಲು ಎಸೆದು ಕೊಂದೆ. ಬಳಿಕ ದೇಹವನ್ನು ಹೊರತೆಗೆದು, ನಿರ್ಜನ ಪ್ರದೇಶವೊಂದರಲ್ಲಿ ರಹಸ್ಯವಾಗಿ ಹೂತುಹಾಕಿದೆ ಎಂದು ಸತ್ಯ ಬಾಯ್ಬಿಟ್ಟಿದ್ದಾನೆ,(ಏಜೆನ್ಸೀಸ್).