ಕುಣಿಗಲ್: ಕೌಟುಂಬಿಕ ಕಲಹವು ತಂದೆ ಹಾಗೂ ಇಬ್ಬರು ಹಸುಗೂಸುಗಳ ಪ್ರಾಣಪಕ್ಷಿ ಹಾರುವಂತೆ ಮಾಡಿರುವ ಕರುಣಾಜನಕ(SuicideCase) ಘಟನೆ ಕುಣಿಗಲ್ ತಾಲೂಕಿನ ಆಲ್ಕೆರೆ ಗ್ರಾಮದಲ್ಲಿ ಶುಕ್ರವಾರ ತಡರಾತ್ರಿ ಸಂಭವಿಸಿದೆ. ತಂದೆ ಶಿವಣ್ಣ (40) ಹಾಗೂ ಮಕ್ಕಳಾದ ಜೀವನ್ (10) ಮತ್ತು ಪ್ರಾಣೇಶ್ (6) ಮೃತಪಟ್ಟ ದುರ್ದೈವಿಗಳು.
ಶಿವಣ್ಣನ ಮೃತದೇಹವು ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರೆ, ಮಕ್ಕಳಿಬ್ಬರು ಮಂಚದ ಮೇಲೆ ಶವವಾಗಿ ಪತ್ತೆಯಾಗಿದ್ದಾರೆ. ಮೇಲ್ನೋಟಕ್ಕೆ ತಂದೆಯೇ ಮಕ್ಕಳಿಗೆ ವಿಷವಿಕ್ಕಿ ಅಥವಾ ಉಸಿರುಗಟ್ಟಿಸಿ ಕೊಲೆ ಮಾಡಿ, ನಂತರ ತಾನು ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಶಂಕಿಸಲಾಗಿದೆ. ಸ್ಥಳೀಯರ ಅನುಮಾನದಂತೆ, ಈ ಘಟನೆಗೆ ಕೌಟುಂಬಿಕ ಕಲಹವೇ ನೇರ ಕಾರಣ ಎನ್ನಲಾಗಿದೆ.
ಮನನೊಂದಿದ್ದ ಶಿವಣ್ಣ
ಮೃತ ಶಿವಣ್ಣನ ಪತ್ನಿ ಕಾವ್ಯ ಒಂದು ವಾರದ ಹಿಂದಷ್ಟೇ ಶಿವಣ್ಣನ ಅಕ್ಕನ ಮಗ ಹೇಮಂತ್ ಎಂಬುವವನ ಜೊತೆ ಪರಾರಿಯಾಗಿದ್ದಳು. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿತ್ತು. ಪ್ರಕರಣದ ಬಳಿಕ ಗ್ರಾಮಕ್ಕೆ ವಾಪಸ್ಸಾಗಿದ್ದ ಕಾವ್ಯ, ಮನೆಯಲ್ಲಿದ್ದ ಹಣ ಮತ್ತು ಚಿನ್ನಾಭರಣಗಳನ್ನು ದೋಚಿಕೊಂಡು ಮತ್ತೆ ನಾಪತ್ತೆಯಾಗಿದ್ದಳು. ಇದರಿಂದ ತೀವ್ರವಾಗಿ ಮನನೊಂದಿದ್ದ ಶಿವಣ್ಣ ಈ ತೀವ್ರ ನಿರ್ಧಾರ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಹಿಂದೆಯೂ ನಡೆದಿದ್ದ ದುರಂತ
ಈ ಕುಟುಂಬದಲ್ಲಿ ಸೊಸೆಯ ಕಾಟದಿಂದಾಗಿ ಶಿವಣ್ಣನ ತಾಯಿ ಹೊನ್ನಮ್ಮ ಕೂಡ ಮೂರು ವರ್ಷಗಳ ಹಿಂದೆ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದರು ಎಂಬ ಆಘಾತಕಾರಿ ಮಾಹಿತಿ ಕೇಳಿಬಂದಿದೆ. ಪ್ರಸ್ತುತ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ತನಿಖೆ ಮುಂದುವರಿದಿದೆ,(ಏಜೆನ್ಸೀಸ್).