ಘಟನೆಯ ಸ್ಥಳ 
ರಾಜ್ಯ

ಭೀಕರ ರಸ್ತೆ ಅಪಘಾತ: ಕೆಎಸ್​​ಆರ್​ಟಿಸಿ ಬಸ್ ಮತ್ತು ಕ್ಯಾಂಟರ್ ಟ್ರಕ್​​ ಮುಖಾಮುಖಿ ಡಿಕ್ಕಿ: ಮೂವರು ಸಾವು | Accident

ವಿಜಯಪುರ: ವಿಜಯಪುರ ಜಿಲ್ಲೆಯ ಚಡಚಣದ ಸಮೀಪ ಮಂಗಳವಾರ(ಜೂ. 16) ಭೀಕರ ಅಪಘಾತ(Accident) ಸಂಭವಿಸಿದ್ದು, ಕೆಎಸ್​ಆರ್​ಟಿಸಿ ಬಸ್ ಮತ್ತು ಸಿಮೆಂಟ್ ಸಾಗಿಸುತ್ತಿದ್ದ ಕ್ಯಾಂಟರ್ ಮುಖಾಮುಖಿ ಡಿಕ್ಕಿಯಾಗಿದ್ದು, ಘಟನೆಯಲ್ಲಿ ದಂಪತಿ ಸೇರಿದಂತೆ ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮತ್ತು 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ರಾಜ್ಯ ಹೆದ್ದಾರಿ 41ರ ಲೋಣಿ ಕ್ರಾಸ್ ಸಮೀಪ ಘಟನೆ ನಡೆದಿದೆ. ಚಡಚಣದಿಂದ ಬದಾಮಿ ಕಡೆಗೆ ಸುಮಾರು 30 ಪ್ರಯಾಣಿಕರನ್ನು ಹೊತ್ತು ತೆರಳುತ್ತಿದ್ದ ಸಾರಿಗೆ ಬಸ್ ಮತ್ತು ಝಳಕಿ ಕಡೆಯಿಂದ ಚಡಚಣಕ್ಕೆ ಬರುತ್ತಿದ್ದ ಕ್ಯಾಂಟರ್ ಮುಖಾಮುಖಿ ಡಿಕ್ಕಿಯಾಗಿವೆ.
ಕ್ಯಾಂಟರಿನ ಟಾಯರ್‌ ಏಕಾಏಕಿ ಬ್ಲಾಸ್ಟ್ ಆದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಎದುರಿಗೆ ಬರುತ್ತಿದ್ದ ಸಾರಿಗೆ ಬಸ್ಗೆ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ ಎಂದು ಎನ್ನಲಾಗಿದೆ. ಘಟನೆಯಲ್ಲಿ ಕ್ಯಾಂಟರ್​ನಲ್ಲಿದ್ದ ಹಾವಿನಾಳ ಗ್ರಾಮದ ಅಶೋಕ ಮಹಾದೇವ ಉಟಗಿ ಆತನ ಪತ್ನಿ ರಾಧಾಬಾಯಿ ಎಂದು ಗುರುತಿಸಲಾಗಿದೆ.
ಇನ್ನೂ ಸಾರಿಗೆ ಬಸ್ ಚಾಲಕ ನಿಡಗುಂದಿ ಗ್ರಾಮದ ಹಣಮಂತ ಚಲವಾದಿ ಮೃತಪಟ್ಟಿದ್ದು, ಡಿಕ್ಕಿಯ ರಭಸಕ್ಕೆ ಸಾರಿಗೆ ಬಸ್​ನಲ್ಲಿದ್ದ 6 ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ವಿಜಯಪುರದ ಜಿಲ್ಲ ಆಸ್ಪತ್ರೆಗೆ ರವಾನಿಸಲಾಗಿದೆ. ಇನ್ನುಳಿದ 17ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಪ್ರಾಣಾಪಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.