ವಿಜಯಪುರದಿಂದ ದೇವನಹಳ್ಳಿ, ಯಲಹಂಕ ಮಾರ್ಗವಾಗಿ ಬೆಂಗಳೂರಿನ ಮೆಜೆಸ್ಟಿಕ್ಗೆ ಬಿಎಂಟಿಸಿ ವೇಗದೂತ ಬಸ್ ಸಂಚಾರ ವೇಳೆ ಬಿಎಂಟಿಸಿ ಸಂಚಾರ ನಿಯಂತ್ರಕ ರಂಗಪ್ಪ ಹಾಗೂ ಸಂಸ್ಥೆ ಸಿಬ್ಬಂದಿ ಇದ್ದರು.
ವಿಜಯಪುರ : ಪಟ್ಟಣದ ಜನರ ವರ್ಷಗಳ ತಪಸ್ಸಿಗೆ ಕೊನೆಗೂ ಅಲ್ಪಮಟ್ಟಿನ ಪರಿಹಾರ ಸಿಕ್ಕಂತಾಗಿದೆ. ವಿಜಯಪುರದಿಂದ ದೇವನಹಳ್ಳಿ, ಯಲಹಂಕ ಮಾರ್ಗವಾಗಿ ಬೆಂಗಳೂರಿನ ಮೆಜೆಸ್ಟಿಕ್ಗೆ ಬಿಎಂಟಿಸಿ ಹೊಸದಾಗಿ ವೇಗದೂತ (ಎಕ್ಸ್ಪ್ರೆಸ್) ಬಸ್ಗಳು ಸಂಚಾರ ಪ್ರಾರಂಭಿಸಿದೆ.
ಪಟ್ಟಣದಿಂದ ನಿತ್ಯ ಬೆಳಗ್ಗೆ 7 ರಿಂದ 10 ಗಂಟೆ ವರೆಗೆ ಕಾಲೇಜು ವಿದ್ಯಾರ್ಥಿಗಳು ಹಾಗೂ ಕಾರ್ಮಿಕರು ಹೆಚ್ಚಾಗಿದ್ದರು. ಇದರಿಂದಾಗಿ ಮಹಿಳೆಯರು, ಮಕ್ಕಳು ಮತ್ತು ವೃದ್ಧರು ಬಸ್ ಹತ್ತಲು ಸಾಧ್ಯವಾಗದೆ ಪರದಾಡುವಂತಾಗಿತ್ತು. ಸಮಸ್ಯೆ ಕುರಿತು ಈ ಹಿಂದೆ ಪತ್ರಿಕೆಗಳಲ್ಲಿ ವರದಿ ಪ್ರಕಟಿಸಿ, ಸಂಬಂಧಪಟ್ಟ ಅಧಿಕಾರಿಗಳ ಗಮನ ಸೆಳೆಯಲಾಗಿತ್ತು.
ಪ್ರಸ್ತುತ ಆರಂಭಿಸಲಾಗಿರುವ ಎಕ್ಸ್ಪ್ರೆಸ್ ಬಸ್ಗಳಿಂದ ಸಾರ್ವಜನಿಕರಿಗೆ ಅನುಕೂಲವಾಗಿದೆ. ಇದರೊಂದಿಗೆ ಬೆಂಗಳೂರಿನಿಂದ ಚಿಕ್ಕಬಳ್ಳಾಪುರಕ್ಕೆ ಕಾರ್ಯಾಚರಣೆ ನಡೆಸುತ್ತಿರುವ ಮಾದರಿಯಲ್ಲೇ ವಾಯುವಜ್ರ (ವೋಲ್ವೋ) ಬಸ್ಗಳನ್ನು ಬಿಡಬೇಕು ಎಂಬುದು ನಾಗರಿಕರ ಒತ್ತಾಯವಾಗಿದೆ.
ಮಾರ್ಗ ವಿಸ್ತರಿಸಿ: ಸದ್ಯ ಬೆಂಗಳೂರು ಮೆಜೆಸ್ಟಿಕ್ನಿಂದ ನಂದಿ ಕ್ರಾಸ್ವರೆಗೆ ಸಂಚರಿಸುವ ಬಿಎಂಟಿಸಿ ಬಸ್ಗಳನ್ನು ಚಿಕ್ಕಬಳ್ಳಾಪುರ ರಸ್ತೆ ಮೂಲಕ ವಿಜಯಪುರಕ್ಕೆ ವಿಸ್ತರಿಸಬೇಕೆಂಬ ಆಗ್ರಹ ಕೇಳಿಬಂದಿದೆ. ಇದರಿಂದ ದೇವನಹಳ್ಳಿ ಮತ್ತು ವಿಜಯಪುರದಿಂದ ನಾಗಾರ್ಜುನ ಕಾಲೇಜು ಹಾಗೂ ಬಿಜಿಎಸ್ ಕಾಲೇಜಿಗೆ ತೆರಳುವ ನೂರಾರು ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಅಲ್ಲದೇ ವಿಜಯಪುರದಿಂದ ಮುದ್ದೇನಹಳ್ಳಿ, ನಾರಾಯಣಪುರ, ಬಿಜ್ಜವಾರ, ಕೊಲೆರಹಳ್ಳಿ ಸೇರಿ ಹತ್ತಾರು ಹಳ್ಳಿಗಳಿಗೆ ಉತ್ತಮ ಸಾರಿಗೆ ಸಂಪರ್ಕ ಸಿಗುತ್ತದೆ.