ಯಳಂದೂರು ಪಟ್ಟಣದ ತಹಸೀಲ್ದಾರ್ ಕಚೇರಿ ಮುಂಭಾಗ ಮಂಗಳವಾರ ಸಾಮೂಹಿಕ ನಾಯಕತ್ವದಡಿ ರೈತ ಸಂಘ ಹಾಗೂ ಹಸಿರು ಸೇನೆಯ ಸದಸ್ಯರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಡೆದ ಪ್ರತಿಭಟನೆಯಲ್ಲಿ ಬ್ಯಾಂಕ್ ವ್ಯವಸ್ಥಾಪಕರಿಗೆ ತರಾಟೆ ತೆಗೆದುಕೊಂಡರು. ತಹಸೀಲ್ದಾರ್ ಎಸ್.ಎಲ್.ನಯನಾ, ಹೊನ್ನೂರು ಪ್ರಕಾಶ್ ಇತರರು ಇದ್ದರು.  
ರಾಜ್ಯ

ಬಿಡದಿ ಟೌನ್‌ಶಿಪ್‌ಗೆ ರೈತ ಸಂಘ ವಿರೋಧ

ಯಳಂದೂರು: ಬಿಡದಿಯಲ್ಲಿ ರೈತರ ಜಮೀನನ್ನು ಕಬಳಿಸಿ ಮಾಡಲು ಯತ್ನಿಸುತ್ತಿರುವ ಟೌನ್‌ಶಿಪ್‌ನ್ನು ಕೂಡಲೇ ಸರ್ಕಾರ ಕೈಬಿಡುವುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾಮೂಹಿಕ ನಾಯಕತ್ವ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಮಂಗಳವಾರ ತಹಸೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ಈ ವೇಳೆ ರೈತ ಮುಖಂಡ ಹೊನ್ನೂರು ಪ್ರಕಾಶ್ ಮಾತನಾಡಿ, ಸರ್ಕಾರ ರೈತರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬಿಡದಿ ಬಳಿ ಟೌನ್‌ಶಿಪ್ ನಿರ್ಮಾಣ ನೆಪದಲ್ಲಿ ಸಮೃದ್ಧ ಭೂಮಿ ಹಾಳು ಮಾಡುವ ಕೆಲಸ ಮಾಡುತ್ತಿದ್ದಾರೆ. ಕೈಗಾರಿಕೆಗೆಂದು ಮೀಸಲಿಟ್ಟಿರುವ ಭೂಮಿಯಲ್ಲಿ ಶೇ. 25ರಷ್ಟು ಭೂಮಿಯನ್ನು ಬಳಕೆ ಮಾಡಿಲ್ಲ. ಈಗ ಬಿಡದಿ ಸರದಿಯಾಗಿದ್ದು ಮುಂದೆ ಎಲ್ಲ ಜಿಲ್ಲೆಗಳಿಗೂ ಇದು ವ್ಯಾಪಿಸಿ ಎಲ್ಲವನ್ನು ಖಾಸಗೀಕರಣ ಮಾಡುವ ಕೆಲಸ ಸದ್ದಿಲ್ಲದಂತೆ ನಡೆಯುತ್ತಿದೆ. ವಿದ್ಯುತ್ ಖಾಸಗೀಕರಣವಾಗುತ್ತಿದೆ. ನೀರಿಗೆ ಹಣ ಕೊಡುವ ಪರಿಸ್ಥಿತಿ ಬರುತ್ತಿದೆ. ಹೀಗೆ ಎಲ್ಲವನ್ನೂ ಖಾಸಗೀಕರಣ ಮಾಡಿ ರೈತರು ತಮ್ಮ ಜಮೀನು ನೀಡಿ ಅವರಿಗೆ ಕೈ ಒಡ್ಡುವ ಕೆಲಸವನ್ನು ಸರ್ಕಾರ ಮಾಡುತ್ತಿದ್ದು ಕೂಡಲೇ ಇದನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.

ನಮ್ಮ ದೌರ್ಭಾಗ್ಯವೇ ಸರಿ:
ಜಿಲ್ಲೆಯಲ್ಲಿ ಕಬಿನಿ ಜಲಾಶಯದಿಂದ 287 ಟಿಎಂಸಿ ನೀರನ್ನು ಬಳಸಿಕೊಳ್ಳಲು ಅವಕಾಶವಿದೆ. ಆದರೆ ನಾವು ಕೇವಲ 250 ಟಿಎಂಸಿ ಬಳಸಿಕೊಂಡು ಉಳಿದ 37 ಟಿಎಂಸಿ ತಮಿಳುನಾಡು ಸೇರುತ್ತಿದೆ. ಇದರಲ್ಲಿ ಕೇವಲ 4 ರಿಂದ 5 ಟಿಎಂಸಿ ನೀರನ್ನು ಬಲದಂಡೆ ಕಾಲುವೆಯಿಂದ ಬಿಟ್ಟರೆ ಇಡೀ ಜಿಲ್ಲೆಯ ಕೆರೆ ಕಟ್ಟೆಗಳು ತುಂಬುತ್ತವೆ. ಬೆಳೆಗಳಿಗೆ ನೀರಾಗುತ್ತದೆ. ಆದರೆ ಖಾಸಗಿ ವಿದ್ಯುತ್ ಕಂಪೆನಿಯೊಂದು ನೀರನ್ನು ನಿಯಂತ್ರಿಸುವ ಹಕ್ಕು ಪಡೆದಿರುವುದು ನಮ್ಮ ದೌರ್ಭಾಗ್ಯ. ಅಲ್ಲದೆ ರೈತರಿಗೆ ಬ್ಯಾಂಕ್‌ನಲ್ಲಿ ಮೋಸ ಮಾಡಲಾಗುತ್ತಿದೆ. ಬೆಳೆ ಸಾಲಕ್ಕೆ, ಚಿನ್ನದ ಸಾಲವನ್ನು ಸೇರಿಸುವುದು, ಸರ್ಕಾರದಿಂದ ಬರುವ ವಿವಿಧ ಯೋಜನೆಗಳ ಹಣವನ್ನು ನೀಡದೆ ಇದನ್ನು ಜಮೆ ಮಾಡಿಕೊಳ್ಳುವುದು ನಡೆಯುತ್ತಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳ ಸ್ಪಷ್ಟ ಆದೇಶವಿದ್ದರೂ ಇದನ್ನು ಉಲ್ಲಂಘಿಸಲಾಗುತ್ತಿದೆ ಇದು ನಿಲ್ಲಬೇಕು ಎಂದು ಆಗ್ರಹಿಸಿದರು.

ಟಿಸಿ ದುರಸ್ತಿ ಮಾಡುತ್ತಿಲ್ಲ:
ಸೆಸ್ಕ್‌ನಿಂದ ರೈತರಿಗೆ ತೊಂದರೆಯಾಗುತ್ತಿದೆ. ಟಿಸಿಗಳನ್ನು ದುರಸ್ತಿ ಪಡಿಸುತ್ತಿಲ್ಲ. ಟಿಸಿ ಕೆಟ್ಟು ನಿಂತರೆ ಇದಕ್ಕೆ ಆಯಿಲ್ ಹಾಕಿಸಲು ಹಣವನ್ನು ಇಲಾಖೆಯ ಅಧಿಕಾರಿಗಳು ಕೇಳುತ್ತಾರೆ. ರೈತರಿಗೆ ವಿದ್ಯುತ್ ಸರಬರಾಜು ಏರುಪೇರಾಗುತ್ತಿದೆ ಇದನ್ನು ಸರಿಪಡಿಸಬೇಕು. ಅರಣ್ಯ ಇಲಾಖೆ ಕಾಡುಪ್ರಾಣಿಗಳ ಉಪಟಳವನ್ನು ತಡೆಗಟ್ಟುವಲ್ಲಿ ವಿಫಲವಾಗಿದ್ದು ಇದು ನಿಲ್ಲಿಸಬೇಕು. ಇದರಿಂದಾಗುವ ಬೆಳೆನಷ್ಟ ಪರಿಹಾರವನ್ನು ನೀಡಬೇಕು. ನಮ್ಮ ಜಮೀನಿನ ಮರಗಳನ್ನು ಕಡೆಯಲು ಇರುವ ನಿಯಮಗಳನ್ನು ಸಡಿಲಗೊಳಿಸಬೇಕು. ಕಂದಾಯ ಇಲಾಖೆಯಲ್ಲಿ ರೈತರ ಖಾತೆ, ಆರ್‌ಟಿಸಿ ಇತರೆ ಸಮಸ್ಯೆಗಳನ್ನು ಬಗೆಹರಿಸಬೇಕು. ಗ್ರಾಮ ಪಂಚಾಯಿತಿಗಳಲ್ಲಿ ಅವ್ಯವಸ್ಥೆಗಳನ್ನು ಸರಿಪಡಿಸುವುದೂ ಸೇರಿದಂತೆ ವಿವಿಧ ಇಲಾಖೆಗಳ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕೆಲವು ಬ್ಯಾಂಕ್‌ನ ವ್ಯವಸ್ಥಾಪಕರು, ಇಲಾಖೆ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡ ಪ್ರಸಂಗವೂ ಜರುಗಿತು. ಈ ಸಮಸ್ಯೆಗಳು ಬಗೆಹರಿಯದಿದ್ದಲ್ಲಿ ನಮ್ಮ ಹೋರಾಟ ದೊಡ್ಡ ಮಟ್ಟದಲ್ಲಿ ನಡೆಯಲಿದೆ ಎಂದು ಎಚ್ಚರಿಕೆ ನೀಡಲಾಯಿತು.

ನಂತರ ತಹಸೀಲ್ದಾರ್ ಎಸ್.ಎಲ್. ನಯನಾ ಅವರಿಗೆ ಮನವಿಯನ್ನು ನೀಡಲಾಯಿತು. ಎಲ್ಲ ಸಮಸ್ಯೆಗಳಿಗೂ ಕಾಲ ಕ್ರಮೇಣ ಪರಿಹಾರ ಒದಗಿಸುವ ಭರವಸೆಯನ್ನು ತಹಸೀಲ್ದಾರ್ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು. ಸಂಘದ ಜಿಲ್ಲಾ ಕಾರ್ಯದರ್ಶಿ ಎ.ಎನ್.ಶಿವಕುಮಾರ್, ತಾಲೂಕು ಅಧ್ಯಕ್ಷ ಎಸ್. ಸಿದ್ದಲಿಂಗಸ್ವಾಮಿ ಉಪಾಧ್ಯಕ್ಷ ವೃಷಭೇಂದ್ರ, ಕೆ. ರಂಗಸ್ವಾಮಿ, ಶಿವಕುಮಾರಸ್ವಾಮಿ, ಬಿ.ಜಿ.ಮಹೇಶ್, ಸುಭಾಷ್, ಕುಮಾರ್ ಇತರರು ಇದ್ದರು.