ಭೂಮಾಪಕರ ಧರಣಿಯಿಂದ ರೈತರಿಗೆ ಸಂಕಷ್ಟ land surveyors 
ರಾಜ್ಯ

ಭೂಮಾಪಕರ ಧರಣಿಯಿಂದ ರೈತರಿಗೆ ಸಂಕಷ್ಟ land surveyors

ಬಂಗಾರಪೇಟೆ: ತಾಲೂಕಿನಲ್ಲಿ ಹಲವು ತಿಂಗಳಿನಿಂದ ಪರವಾನಗಿ ಪಡೆದ ಭೂಮಾಪಕರು ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಅರ್ನಿದಿಷ್ಟಾವಧಿ ಹೋರಾಟ ನಡೆಸುತ್ತಿರುವ ಹಿನ್ನೆಲೆಯಲ್ಲಿ ಸ್ಥಳಿಯ ಭೂಮಾಪನ ಇಲಾಖೆಯ ಸೇವೆಗಳು ಸಂಪೂರ್ಣವಾಗಿ ಸ್ಥಗಿತಗೊಂಡಿವೆ. ಭೂ ಸಂಬಂಧಿತ ವ್ಯವಹಾರಗಳು ಹಾಗೂ ಸರ್ಕಾರಿ ಕಾರ್ಯಗಳು ವಿಳಂಬವಾಗುತ್ತಿವೆ.land surveyors
ತಾಲೂಕಿನಲ್ಲಿ ಒಟ್ಟು 15 ಮಂದಿ ಭೂಮಾಪಕರು ಕಾರ್ಯನಿರ್ವಹಿಸುತ್ತಿದ್ದು, ಎಲ್ಲರೂ ಕರ್ತವ್ಯದಿಂದ ದೂರ ಉಳಿದಿರುವುದರಿಂದ ಸಾವಿರಾರು ಅರ್ಜಿಗಳು ಕಚೇರಿಯಲ್ಲೇ ಬಾಕಿ ಉಳಿದಿವೆ. 11ಇ&ಸ್ಕೆಚ್​, ತತ್ಕಾಲ್​ ಪೋಡಿ, ಹದ್ದುಬಸ್ತು, ದರಖಾಸ್ತು ಸೇರಿ ವಿವಿಧ ವಿಭಾಗಗಳಲ್ಲಿ ಸಾವಿರಕ್ಕೂ ಹೆಚ್ಚು ಅರ್ಜಿಗಳು ವಿಲೇವಾರಿಯಾಗದೆ ಉಳಿದಿವೆ ಎಂದು ಇಲಾಖೆಯ ಮೇಲ್ವಿಚಾರಕರು ತಿಳಿಸಿದ್ದಾರೆ.
ಭೂ ಖರೀದಿ, ಮಾರಾಟ, ಹಾಗೂ ಆಸ್ತಿ ಹಂಚಿಕೆ ಪ್ರಕ್ರಿಯೆಗಳಿಗೆ ಅಗತ್ಯವಾದ ನಕ್ಷೆ ಮತ್ತು ಸರ್ವೇ ಕಾರ್ಯಗಳು ನಿಂತು ಹೋಗಿರುವುದರಿಂದ ನೋಂದಣಿ ಪ್ರಕ್ರಿಯೆಯೂ ಕುಂಠಿತಗೊಂಡಿದೆ. ಪರಿಣಾಮವಾಗಿ ಬ್ಯಾಂಕ್​ ಸಾಲ ಪಡೆಯಲು ಬಯಸುವವರು ಹಾಗೂ ತುರ್ತು ಹಣಕಾಸಿನ ಅಗತ್ಯವಿರುವವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅರ್ಜಿ ಸಲ್ಲಿಸಿ ತಿಂಗಳುಗಳು ಕಳೆದರೂ ಪ್ರಗತಿ ಕಾಣದ ಹಿನ್ನೆಲೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಧಿಕಾರಿಗಳನ್ನು ಸಂಪರ್ಕಿಸಿದಾಗ ಮುಷ್ಕರದ ಕಾರಣ ಉಲ್ಲೇಖಿಸುತ್ತಾರೆ ಎಂದು ಆರೋಪಿಸಿದ್ದಾರೆ. ಸರ್ಕಾರ ಮತ್ತು ಭೂಮಾಪಕರ ನಡುವಿನ ಸಮಸ್ಯೆಯಿಂದ ಸಾಮಾನ್ಯ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಗ್ರಾಮೀಣ ಪ್ರದೇಶಗಳಿಂದ ಪ್ರತಿದಿನ ಕಚೇರಿಗೆ ಭೇಟಿ ನೀಡುವ ಜನರಿಗೆ ಸ್ಪಷ್ಟ ಮಾಹಿತಿ ದೊರೆಯದೇ ಖಾಲಿ ಹಸ್ತದಿಂದ ಹಿಂತಿರುಗಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಸಾರಿಗೆ ವೆಚ್ಚವೂ ಹೆಚ್ಚುತ್ತಿರುವುದರಿಂದ ಬಡಜನರಿಗೆ ಇದು ಹೆಚ್ಚುವರಿ ಭಾರವಾಗಿದೆ.
ಮದುವೆ, ಚಿಕಿತ್ಸೆಯಂತಹ ತುರ್ತು ಸಂದರ್ಭಗಳಲ್ಲಿ ಜಮೀನು ಮಾರಾಟ ಮಾಡಲು ಬೇಕಾಗುವ ದಾಖಲೆಗಳು ಸಿಗದಿರುವುದರಿಂದ ವ್ಯವಹಾರಗಳು ನಿಂತು ಹೋಗಿವೆ. ಹೀಗೆ ಮುಷ್ಕರ ಮುಂದುವರಿದರೆ ಬಾಕಿ ಅರ್ಜಿಗಳ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇರುವುದರಿಂದ ಸರ್ಕಾರ ತಕ್ಷಣ ಮಧ್ಯಸ್ಥಿಕೆ ವಹಿಸಿ ಸಮಸ್ಯೆಗೆ ಪರಿಹಾರ ಕಂಡುಹಿಡಿಯಬೇಕು ಎಂಬ ಒತ್ತಾಯ ಸಾರ್ವಜನಿಕರಿಂದ ವ್ಯಕ್ತವಾಗುತ್ತಿದೆ.