ಅಳವಂಡಿಯ ಎಣ್ಣೆ ಬೀಜ ಬೆಳೆಗಾರರ ಸಹಕಾರ ಸಂಘದಲ್ಲಿ ಗೊಬ್ಬರ ಪಡೆಯಲು ರೈತರು ಸಾಲು ನಿಂತಿರುವುದು.
- ಇಳುವರಿ ಕುಂಟಿತವಾಗುವ ಭೀತಿ
- ಬಿತ್ತನೆಗೆ ಹಿನ್ನೆಡೆ
ಅಳವಂಡಿ: ಗ್ರಾಮದಲ್ಲಿ ರಸಗೊಬ್ಬರದ ತೀವ್ರ ಅಭಾವ ಉಂಟಾಗಿದ್ದು, ರೈತರು ಪರದಾಡುವಂತಾಗಿದೆ. ಇಲ್ಲಿನ ಎಣ್ಣೆ ಬೀಜ ಬೆಳೆಗಾರರ ಸಹಕಾರ ಸಂಘಕ್ಕೆ 400 ಚೀಲ ಡಿಎಪಿ ಪೂರೈಕೆಯಾಗಿದೆ. 200 ರೈತರಿಗೆ ತಲಾ 2 ಚೀಲಗಳಂತೆ ವಿತರಿಸಲಾಗಿದ್ದು, ಇದು ಯಾವುದಕ್ಕೂ ಸಾಲುವುದಿಲ್ಲ ಎಂದು ದೊಡ್ಡ ಪ್ರಮಾಣ ಜಮೀನು ಹೊಂದಿರುವ ಕೃಷಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಂಗಾರು ಮಳೆ ಚುರುಕುಗೊಂಡ ಹಿನ್ನೆಲೆಯಲ್ಲಿ ಬಿತ್ತನೆಗೆ ಭೂಮಿ ಸಿದ್ಧಗೊಂಡಿದೆ. ಗೊಬ್ಬರಕ್ಕಾಗಿ ಬೆಳಗ್ಗೆಯಿಂದ ಸರತಿ ಸಾಲಿನಲ್ಲಿ ನಿಂತರೂ ಬಹಳಷ್ಟು ರೈತರಿಗೆ ಗೊಬ್ಬರ ಸಿಕ್ಕಿಲ್ಲ. ಗ್ರಾಮದಲ್ಲಿ 2 ಸಹಕಾರ ಸಂಘಗಳಿಗೆ ತಲಾ 400 ಚೀಲ ಡಿಎಪಿ ವಿತರಿಸಲಾಗಿದೆ.
ಎಣ್ಣೆ ಬೀಜ ಬೆಳೆಗಾರರ ಸಹಕಾರ ಸಂಘಕ್ಕೆ ಪೂರೈಸಿದ ಗೊಬ್ಬರ ವಿತರಣೆಯಾಗಿದೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಪೂರೈಕೆಯಾದ 400 ಚೀಲ ಡಿಎಪಿ ವಿತರಣೆಯಾಗಬೇಕಿದೆ.
ದೊಡ್ಡ ರೈತರ ಆಕ್ರೋಶ: ನಮಗೆ ಹತ್ತಾರು ಎಕರೆ ಜಮೀನಿದ್ದು, ಕೇವಲ 2 ಚೀಲ ಡಿಎಪಿ ಗೊಬ್ಬರ ಪಡೆದು ಏನು ಮಾಡಬೇಕು? ಬಿತ್ತನೆಗೆ ಕನಿಷ್ಠ 10 ರಿಂದ 15 ಚೀಲ ಗೊಬ್ಬರ ಬೇಕಾಗುತ್ತದೆ.
ಸರ್ಕಾರ ಮತ್ತು ಕೃಷಿ ಇಲಾಖೆ ತಕ್ಷಣವೇ ಹೆಚ್ಚಿನ ಪ್ರಮಾಣದ ಗೊಬ್ಬರ ಪೂರೈಸದಿದ್ದರೆ ಬಿತ್ತನೆ ಕಾರ್ಯ ಕುಂಠಿತಗೊಳ್ಳುತ್ತದೆ ಎಂದು ರೈತರು ಆಸಮಾಧಾನ ವ್ಯಕ್ತಪಡಿಸಿದ್ದಾರೆ.
ಮುಂಗಾರು ಮಳೆ ಉತ್ತಮವಾಗಿದ್ದು, ಬಿತ್ತನೆಗೆ ಡಿಎಪಿ ಅಥವಾ ಕಾಂಪ್ಲೆಕ್ಸ್ ಗೊಬ್ಬರ ಎಕರೆಗೆ 1 ಚೀಲ ಅಗತ್ಯವಿದೆ. ಒಬ್ಬ ರೈತರಿಗೆ ಕೇವಲ 2 ಚೀಲ ಗೊಬ್ಬರ ವಿತರಿಸುವುದರಿಂದ ಬಿತ್ತನೆ ಹಿನ್ನಡೆಯಾಗಲಿದೆ.
— ಚನ್ನಪ್ಪ ಮುತ್ತಾಳ ಜೆಡಿಎಸ್ ಮುಖಂಡ, ಅಳವಂಡಿ
ರಸಗೊಬ್ಬರ ಇಲ್ಲದೆ ಬಿತ್ತನೆ ಮಾಡಿದರೆ ಇಳುವರಿ ಬರುವುದಿಲ್ಲ. ಸಕಾಲಕ್ಕೆ ರಸಗೊಬ್ಬರ ಪೂರೈಸಬೇಕು. ಕೂಡಲೇ ಸರ್ಕಾರ ರೈತರಿಗೆ ಅಗತ್ಯ ಇರುವಷ್ಟು ರಸಗೊಬ್ಬರ ನೀಡಬೇಕು.
— ಹನುಮಂತ ಮೋರನಾಳ ಗ್ರಾಮಸ್ಥ, ಅಳವಂಡಿ