ಬಣ್ಣಾರಿಯಮ್ಮನ್ ಸಕ್ಕರೆ ಕಾರ್ಖಾನೆ ಕಚೇರಿ ಮುಂಭಾಗದಲ್ಲಿ ಕುರುಬೂರು ಶಾಂತಕುಮಾರ್ ಮಾತನಾಡಿದರು.
- ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ 20,000 ಕಬ್ಬು ಬೆಳೆಗಾರರಿಗೆ
- ನೀಡಬೇಕಾಗಿರುವ 7.50 ಕೋಟಿ ರೂ. ಬಾಕಿ
ನಂಜನಗೂಡು: ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ 20,000 ಕಬ್ಬು ಬೆಳೆಗಾರರಿಗೆ ನೀಡಬೇಕಾಗಿರುವ 7.50 ಕೋಟಿ ರೂ. ಬಾಕಿಯನ್ನು ಕೂಡಲೇ ಪಾವತಿ ಮಾಡಬೇಕು ಎಂದು ಒತ್ತಾಯಿಸಿ ತಾಲೂಕಿನ ಮಲ್ಲುಪುರ ಗ್ರಾಮದ ಬಳಿಯಿರುವ ಬಣ್ಣಾರಿಯಮ್ಮ ಸಕ್ಕರೆ ಕಾರ್ಖಾನೆಗೆ ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘ ಸೋಮವಾರ ಮುತ್ತಿಗೆ ಹಾಕಿತು.
ಕಾರ್ಖಾನೆ ಬಳಿ ನೂರಾರು ರೈತರು ಜಮಾವಣೆಗೊಂಡು ಕಾರ್ಖಾನೆಯ ವಿರುದ್ಧ ಘೋಷಣೆ ಕೂಗಿದರು. ರಾಜ್ಯ ಸರ್ಕಾರ ನಿಗದಿ ಮಾಡಿದ ಕಬ್ಬಿನ 50 ರೂ., ಕಬ್ಬಿನ ಉಪ ಉತ್ಪನ್ನಗಳ ಲಾಭಾಂಶದಲ್ಲಿನ ಶೇ.70 ಹಣವನ್ನು ರೈತರಿಗೆ ನೀಡಬೇಕು. ಈಗಾಗಲೇ ರಾಜ್ಯ ಸರ್ಕಾರ ಟನ್ ಕಬ್ಬಿಗೆ ಹೆಚ್ಚುವರಿ 150 ರೂ. ನಿಗದಿ ಮಾಡಿ ಆದೇಶ ಹೊರಡಿಸಿದ್ದರೂ ರೈತರಿಗೆ ಹಣ ನೀಡದೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದು ರೈತರಿಗೆ ವಂಚಿಸಲಾಗುತ್ತಿದೆ ಎಂದು ಆರೋಪಿಸಿದರು.
ಕಾರ್ಖಾನೆಯ ಅಧಿಕಾರಿಗಳು ಸ್ಪಂದಿಸದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ರೈತರು ಕಾರ್ಖಾನೆ ಮುಂಭಾಗದ ಗೇಟ್‌ನಿಂದ ಒಳನುಗ್ಗಿ ಕಾರ್ಖಾನೆಯ ಆವರಣ ಪ್ರವೇಶಿಸಿದರು. ಇದರಿಂದ ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿಯಾಯಿತು. ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ರೈತರನ್ನು ತಡೆಯಲು ಪೋಲಿಸರು ಹರಸಾಹಸ ಪಡಬೇಕಾಯಿತು.
ಈ ವೇಳೆ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಕುರುಬೂರು ಶಾಂತಕುಮಾರ್, ಚಪ್ಪಲಿ, ಹೋಟೆಲ್, ಬಟ್ಟೆ ಅಂಗಡಿ, ಇನ್ನು ಅನೇಕ ಸ್ಥಳಗಳಲ್ಲಿ ದುಡ್ಡು ಕೊಟ್ಟು ನಂತರ ವಸ್ತುಗಳನ್ನು ಪಡೆಯುತ್ತಾರೆ. ಆದರೆ ರೈತರು ಹತ್ತಾರು ತಿಂಗಳಿನಿಂದ ಕಷ್ಟ ಪಟ್ಟು ದುಡಿದು ಟನ್‌ಗಟ್ಟಲೇ ಕಬ್ಬನ್ನು ಕಾರ್ಖಾನೆಗೆ ನೀಡಿದರಾದರೂ ಬಾಕಿ ಹಣಕ್ಕಾಗಿ ಬಿಸಿಲಲ್ಲಿ ಕಾಯಬೇಕಾದ ಪರಿಸ್ಥಿತಿ ಬಂದಿದೆ ಎಂದು ಆಕ್ರೋಶ ಹೊರಹಾಕಿದರು.
ಬಣ್ಣಾರಿಯಮ್ಮನ್ ಸಕ್ಕರೆ ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕ ವೇಲ್‌ಸ್ವಾಮಿ ಹೋರಾಟ ಕೈಬಿಡುವಂತೆ ಪ್ರತಿಭಟನಾನಿರತರ ಮನವೊಲಿಸಿದರು. ಒಂದು ತಿಂಗಳೊಳಗಾಗಿ ಕಬ್ಬು ಬೆಳೆಗಾರರಿಗೆ ನೀಡಬೇಕಾದ ಬಾಕಿ ಹಣವನ್ನು ನೀಡುತ್ತೇವೆ ಎಂದು ಭರವಸೆ ನೀಡಿದರು. ಬಳಿಕ ರೈತರು ಪ್ರತಿಭಟನೆ ಸ್ಥಗಿತಗೊಳಿಸಿದರು.
ಸಂಘದ ಮೈಸೂರು, ಚಾಮರಾಜನಗರ ಜಿಲ್ಲಾಧ್ಯಕ್ಷ ಸೋಮಶೇಖರ್, ನಂಜನಗೂಡು ತಾಲೂಕು ಅಧ್ಯಕ್ಷ ವಿಜಯೇಂದ್ರ, ತಾಲೂಕು ಉಪಾಧ್ಯಕ್ಷ ಅಂಬಳೆ ಮಂಜುನಾಥ್, ಅಂಬಳೆ ಮಾದೇಶ್, ದೇವರಾಜು, ಹತ್ತಾಳು ಬಡಗಲಪುರ ನಾಗರಾಜು, ಬೊಕ್ಕಳ್ಳಿ ಮಹದೇವಮ್ಮ, ಪಟೇಲ್ ಶಿವಮೂರ್ತಿ, ಶಿವಸ್ವಾಮಿ, ಗೌರಿಶಂಕರ್, ಸಿದ್ದೇಶ್, ಮಹಿಳಾ ಘಟಕದ ಅಧ್ಯಕ್ಷೆ ರೂಪಾ, ದೇವನೂರು ಚಂದನ್ ಇತರರರಿದ್ದರು.