Farmers should place greater emphasis on organic farming.
ಕನಕಪುರ:ಕಲುಷಿತ ವಾತಾವರಣದಲ್ಲಿ ಮನುಷ್ಯ ನಾನಾ ರೋಗಗಳಿಗೆ ಒಳಗಾಗುತ್ತಿದ್ದಾನೆ. ಆದ್ದರಿಂದ ಪೂರ್ವಜರ ಸಾಂಪ್ರದಾಯಿಕ ಬೆಳೆ ಪದ್ದತಿ ಅತ್ಯಗತ್ಯವಾಗಿದೆ.
ಸಾವಯವ ಕೃಷಿಗೆ ರೈತರು ಹೆಚ್ಚು ಒತ್ತುನೀಡಬೇಕಾಗಿದೆ ಎಂದು ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಹೊನ್ನಗನಹಳ್ಳಿ ಜಗನ್ನಾಥ್ ಹೇಳಿದರು.
ತಾಲೂಕಿನ ಶಿವನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅನಜವಾಡಿದೊಡ್ಡಿ ಗ್ರಾಮದಲ್ಲಿ ಬುಧವಾರ ಸಾವಯವ ರೈತ ಉತ್ಪಾದಕ ಕಂಪನಿ ವತಿಯಿಂದ ರೈತರಿಗೆ ಉಚಿತ ಜಗಳೂರು ರಾಗಿ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನೈಸರ್ಗಿಕ ಕೃಷಿ ಚಟುವಟಿಕೆಯಲ್ಲಿ ಭಾಗಿಯಾಗಬೇಕು,
ಈಗಾಗಲೇ ಮುಂಗಾರು ಮಳೆಗೆ ಭಾರಿ ಹಿನ್ನಡೆಯಾಗಿ ಬರಗಾಲ ಸನ್ನಿತವಾಗುತ್ತಿದೆ. ಇದಕ್ಕಾಗಿ ಸರ್ಕಾರ ಬರ ಪರಿಹಾರಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕಿದೆ. ಜಾನುವಾರುಗಳಿಗೆ ಕುಡಿಯುವ ನೀರು, ಮೇವಿನ ವ್ಯವಸ್ಥೆ ಮಾಡಿಕೊಳ್ಳುವುದು ಸೂಕ್ತವಾಗಿದೆ ಎಂದು ಹೇಳಿದರು.
ಪ್ರಧಾನಿ ಮೋದಿ ಅವರು ಸಾವಯವ ಕೃಷಿ ಉತ್ತೇಜನಕ್ಕೆ ಹೆಚ್ಚು ಒತ್ತು ನೀಡುತ್ತಿದ್ದಾರೆ. ಆತ್ಮನಿರ್ಭರ ಭಾರತ ಯೋಜನೆಯಡಿ ಸಾವಯವ ರೈತ ಉತ್ಪಾದಕ ಸಂಸ್ಥೆಗಳನ್ನು ಪ್ರತಿ ರಾಜ್ಯದಲ್ಲಿ ತೆರೆಯಲು ಆದೇಶ ನೀಡಿದ್ದಾರೆ. ಈಗಾಗಲೇ ದೇಶದಲ್ಲಿ 2200 ಸಾವಯವ ರೈತ ಉತ್ಪಾದಕ ಸಂಸ್ಥೆಗಳು ಕಾರ್ಯಾರಂಭಗೊಂಡಿದೆ. ರೈತರು ಪೂರ್ವಜರ ಬೆಳೆಪದ್ದತಿ ಹಾಗೂ ಸಾವಯವ ಕೃಷಿ ಪದ್ದತಿಯನ್ನು ಅಳವಡಿಸಿಕೊಂಡಾಗ ದೇಶದ ಜನರ ಆರೋಗ್ಯ ಸುಧಾರಿಸಲು ಸಹಕಾರಿಯಗುತ್ತದೆ ಎಂದರು.
ಸಾವಯವ ರೈತ ಉತ್ಪಾದಕ ಕಂಪನಿಯ ಸಿಇಒ ಆರ್.ಕೆ.ಸುಜಯ್ ಮಾತನಾಡಿ, ರೈತರು ತಮ್ಮ ಕೃಷಿಯಲ್ಲಿ ಸಾವಯವ ಪದ್ದತಿಯನ್ನು ಅಳವಡಿಸಿಕೊಳ್ಳುವ ಮೂಲಕ ರಾಸಾಯನಿಕ ಮುಕ್ತ ಪದ್ದತಿಗಳನ್ನು ಅಳವಡಿಸಿಕೊಳ್ಳಬೇಕು, ಅನಜವಾಡಿ ಗ್ರಾಮದಲ್ಲಿ 25 ಮಹಿಳೆಯರ ಗುಂಪು ಸಾವಯವ ಪದ್ದತಿ ಮೂಲಕ ಬೆಳೆ ತರಕಾರಿಗಳನ್ನು ಬೆಳೆಯುತ್ತಿದ್ದಾರೆ. ಸಂಸ್ಥೆಯಿಂದ ಜಗಳೂರು ರಾಗಿ ಕಡಿಮೆ ಅವಧಿಯಲ್ಲಿ ಹೆಚ್ಚುವರಿ ಇಳುವರಿ ಬರುವ ಸೂಕ್ತ ರಾಗಿಯಾಗಿರುವುದರಿಂದ ಇದನ್ನು ಪ್ರತಿ ಸದಸ್ಯರಿಗೆ 5 ಕೆ.ಜಿ ಯಂತೆ ಉಚಿತ ರಾಗಿ ವಿತರಣೆ ಮಾಡಲಾಗಿದೆ ಎಂದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶಿವಸ್ವಾಮಿ, ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಅಶೋಕ್, ಜಿಲ್ಲಾ ಕಾರ್ಯದರ್ಶಿ ಪ್ರಕಾಶ್, ತಾಲೂಕು ರೈತ ಮೋರ್ಚಾ ಅಧ್ಯಕ್ಷ ರವೀಶ್, ತಾಲೂಕು ಮಾಜಿ ಅಧ್ಯಕ್ಷ ವೆಂಕಟೇಶ್, ರಮೇಶ್, ಚಂದ್ರಶೇಖರ್, ವಾಸುದೇವ್, ಗೌತಮ್ ಹಾಗೂ ಮಣಿಕಂಠ ಸೇರಿ ಸಂಘದ ಮಹಿಳಾ ಸದಸ್ಯರು, ಗ್ರಾಮಸ್ಥರು ಇದ್ದರು.